T20 World Cup 2024: ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಜೂನ್ 27 ರಂದು ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ. ಹೀಗಾಗಿ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಇದಕ್ಕೂ ಮುನ್ನ ಉಭಯ ತಂಡಗಳು ಟಿ20 ಕ್ರಿಕೆಟ್ನಲ್ಲಿ 23 ಬಾರಿ ಮುಖಾಮುಖಿಯಾಗಿವೆ.
ಈ ವೇಳೆ ಭಾರತ ತಂಡವು 12 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಇಂಗ್ಲೆಂಡ್ ತಂಡ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇಲ್ಲಿ ಮೇಲ್ನೋಟಕ್ಕೆ ಟೀಮ್ ಇಂಡಿಯಾ ಬಲಿಷ್ಠವಾಗಿದ್ದರೂ, ಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿದೆ ಎನ್ನಬಹುದು.
2022ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಆಂಗ್ಲರು ಬಗ್ಗು ಬಡಿದಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 16 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 170 ರನ್ ಬಾರಿಸಿ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತ್ತು.
ಅಲ್ಲದೆ ಈ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ 2 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಹೀಗಾಗಿ ಕಳೆದ ಟಿ20 ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಈ ಮೂಲಕ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಫೈನಲ್ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: T20 World Cup 2024: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.