T20 World Cup 2024: ಆಫ್ರಿಕಾ ವಿರುದ್ಧ ಸೋಲು; ಐಸಿಸಿ ವಿರುದ್ಧ ಆರೋಪಗಳ ಸುರಿಮಳೆಗೈದ ಲಂಕಾ ಆಟಗಾರರು..!
T20 World Cup 2024: ಟಿ20 ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಬೇಕು ಎಂದುಕೊಂಡಿದ್ದ ಶ್ರೀಲಂಕಾ ತಂಡಕ್ಕೆ ಹೀನಾಯ ಸೋಲು ಎದುರಾಗಿದೆ. ಈ ಪಂದ್ಯದ ನಂತರ ತಂಡದ ಸೋಲಿಗೆ ಕಾರಣವನ್ನು ಉಲ್ಲೇಖಿಸಿರುವ ಶ್ರೀಲಂಕಾದ ಆಟಗಾರರು ಐಸಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಐಸಿಸಿ ವಿರುದ್ಧ ತಾರತಮ್ಯದ ಆರೋಪವನ್ನೂ ಹೊರಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಗೆಲುವಿನ ಶುಭಾರಂಭ ಮಾಡಬೇಕು ಎಂದುಕೊಂಡಿದ್ದ ಶ್ರೀಲಂಕಾ ತಂಡಕ್ಕೆ ಹೀನಾಯ ಸೋಲು ಎದುರಾಗಿದೆ. ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿದ್ದ ಶ್ರೀಲಂಕಾದ (SL vs SA) ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 77 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಕೇವಲ 16.4 ಓವರ್‌ಗಳಲ್ಲಿ ಸಾಧಿಸಿದ ದಕ್ಷಿಣ ಆಫ್ರಿಕಾ ಸುಲಭ ಜಯ ದಾಖಲಿಸಿತ್ತು. ಈ ಪಂದ್ಯದ ನಂತರ ತಂಡದ ಸೋಲಿಗೆ ಕಾರಣವನ್ನು ಉಲ್ಲೇಖಿಸಿರುವ ಶ್ರೀಲಂಕಾದ ಆಟಗಾರರು ಐಸಿಸಿ (ICC ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಐಸಿಸಿ ವಿರುದ್ಧ ತಾರತಮ್ಯದ ಆರೋಪವನ್ನೂ ಹೊರಿಸಿದ್ದಾರೆ.
ಆಫ್ರಿಕಾ ವಿರುದ್ಧದ ಸೋಲಿಗೆ ಐಸಿಸಿ ಹೊಣೆ- ಹಸರಂಗ
ಪಂದ್ಯ ಮುಗಿದ ಬಳಿಕ ಮಾತನಾಡಿದ ತಂಡದ ನಾಯಕ ವನಿಂದು ಹಸರಂಗ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಐಸಿಸಿ ಹೊಣೆ ಎಂದು ಪರೋಕ್ಷವಾಗಿ ದೂರಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಶ್ರೀಲಂಕಾದ ಮುಂದಿನ ಪಂದ್ಯ ಜೂನ್ 7 ರಂದು ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೆ ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಆತಿಥ್ಯವಹಿಸುತ್ತಿದ್ದು, ಪಂದ್ಯ ಭಾರತೀಯ ಕಾಲಮಾನ ಮುಂಜಾನೆ 6 ಗಂಟೆಗೆ ಶುರುವಾಗಲಿದೆ. ಹೀಗಾಗಿ ನಮಗೆ ಪ್ರಯಾಣವೇ ಪ್ರಯಾಸವಾಗಿದೆ. ಹೆಚ್ಚು ಪ್ರಯಾಣದಿಂದಾಗಿ ನಾವು ಸರಿಯಾಗಿ ಅಭ್ಯಾಸ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಲೀಗ್ ಹಂತದ ಉಳಿದ ಇನ್ನೇರಡು ಪಂದ್ಯಗಳಿಗೂ ನಾವು ದೀರ್ಘ ಪ್ರಯಾಣ ಬೆಳೆಸಬೇಕಾಗಿದೆ’ ಎಂದು ಅಸಮಾಧಾನ ತೊಡಿಕೊಂಡಿದ್ದಾರೆ.
ತಾರತಮ್ಯ ಮಾಡುತ್ತಿದೆ ಎಂದ ತೀಕ್ಷಣ
ಟಿ20 ವಿಶ್ವಕಪ್ ವೇಳಾಪಟ್ಟಿ ಕುರಿತು ಐಸಿಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀಲಂಕಾದ ಸ್ಪಿನ್ ಬೌಲರ್ ಮಹೇಶ್ ತೀಕ್ಷಣ, ‘ವಿಶ್ವಕಪ್ ವೇಳಾಪಟ್ಟಿಯಲ್ಲಿ ಶ್ರೀಲಂಕಾ ತಂಡಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಹೋಟೆಲ್‌ನಿಂದ ಮೈದಾನಕ್ಕೆ ಪ್ರಯಾಣಿಸಲು ನಾವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇವೆ. ನಾವು ನಮ್ಮ ನಾಲ್ಕು ಗುಂಪು ಹಂತದ ಪಂದ್ಯಗಳನ್ನು ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಆಡಬೇಕಾಗಿದೆ. ಶ್ರೀಲಂಕಾವನ್ನು ಹೊರತುಪಡಿಸಿ, ನೆದರ್ಲ್ಯಾಂಡ್ಸ್ ಮಾತ್ರ ಎಲ್ಲಾ ನಾಲ್ಕು ಲೀಗ್ ಪಂದ್ಯಗಳನ್ನು ವಿವಿಧ ಸ್ಥಳಗಳಲ್ಲಿ ಆಡಬೇಕಾಗಿದೆ. ಪಂದ್ಯಗಳು ಒಂದೇ ಸ್ಥಳದಲ್ಲಿ ನಡೆಯದ ಕಾರಣ, ಆಟಗಾರರು ಪ್ರಯಾಣಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳವನ್ನು ತಲುಪಲು ನಾವು ವಿಮಾನ ನಿಲ್ದಾಣದಲ್ಲಿ 8 ಗಂಟೆಗಳ ಕಾಲ ಕಾಯಬೇಕಾಯಿತು. ಇದು ನಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ತಂಡದ ಆಟಗಾರರಿಗೆ ಉಳಿದುಕೊಳ್ಳಲು ಹೋಟೆಲ್ ಕೂಡ ಕ್ರೀಡಾಂಗಣದಿಂದ ಬಹಳ ದೂರದಲ್ಲಿದೆ. ಇದರಿಂದಾಗಿ ಅವರು ಅಭ್ಯಾಸ ಮಾಡಲು ಮೈದಾನಕ್ಕೆ ಹೋಗಲು ಸಮಯ ತೆಗೆದುಕೊಳ್ಳುತ್ತದೆ. ದೂರದ ಕಾರಣ ನಮ್ಮ ಅಭ್ಯಾಸವನ್ನೂ ರದ್ದುಗೊಳಿಸಬೇಕಾಯಿತು’ ಎಂದು ಮಹೇಶ ತಿಕ್ಷಣ ಹೇಳಿದರು.
🇱🇰 Maheesh Theekshana : The World Cup schedule is UNFAIR to us 😯
All quotes: 👇
“We cancelled our training session because of fatigue from travel and the distance to practice.
“I can’t say the names but some teams stay in the same place and their hotel is only 14 minutes to… pic.twitter.com/bhzFxs0tkV
— Himanshu Pareek (@Sports_Himanshu) June 4, 2024
ಲಂಕಾ ಆಟಗಾರರ ಅಸಮಾಧಾನಕ್ಕೆ ಕಾರಣವೇನು?
ವಾಸ್ತವವಾಗಿ ಲಂಕಾ ತಂಡ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲು ಫ್ಲೋರಿಡಾದಿಂದ ಮಿಯಾಮಿಗೆ ವಿಮಾನ ಪ್ರಯಾಣ ಮಾಡಬೇಕಿತ್ತು. ಹೀಗಾಗಿ ತಂಡವು ರಾತ್ರಿ 8 ಗಂಟೆಗೆ ವಿಮಾನ ಏರಬೇಕಿತ್ತು. ಆದರೆ ಮುಂಜಾನೆ 5 ಗಂಟೆಗೆ ಆಟಗಾರರು ವಿಮಾನ ಏರಬೇಕಾಯಿತು. ಅಂದರೆ ಲಂಕಾ ತಂಡದ ಆಟಗಾರರು ಸರಿಸುಮಾರು 8 ಗಂಟೆಗಳನ್ನು ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಯಿತು. ಅಲ್ಲದೆ ಶ್ರೀಲಂಕಾ ತಂಡದ ಆಟಗಾರರು ತಂಗಿರುವ ಹೋಟೆಲ್ ಕೂಡ ನ್ಯೂಯಾರ್ಕ್ ಸ್ಟೇಡಿಯಂನಿಂದ ಬಹಳ ದೂರದಲ್ಲಿದೆ. ಇದು ಲಂಕಾ ಆಟಗಾರರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Wed, 5 June 24