T20 World Cup 2024: ಟಿ20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 32 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 8 ಮ್ಯಾಚ್ಗಳು ಮಾತ್ರ. ಈ ಮೂವತ್ತೆರಡು ಪಂದ್ಯಗಳ ಮುಕ್ತಾಯದ ವೇಳೆಗೆ 10 ತಂಡಗಳು ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ಇದೇ ವೇಳೆ 6 ತಂಡಗಳು ಸೂಪರ್-8 ಹಂತಕ್ಕೇರಿದೆ. ಇನ್ನು ಎರಡು ತಂಡಗಳಿಗೆ ಮುಂದಿನ ಸುತ್ತಿನ ಅರ್ಹತೆ ಪಡೆಯಲು ಅವಕಾಶವಿದ್ದು, ಬಾಂಗ್ಲಾದೇಶ್, ನೆದರ್ಲೆಂಡ್ಸ್, ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಪಂದ್ಯಗಳ ಮುಕ್ತಾಯದೊಂದಿಗೆ ಸೂಪರ್-8 ಸುತ್ತಿನ ಮ್ಯಾಚ್ಗಳು ಶುರುವಾಗಲಿದೆ. ಹಾಗಿದ್ರೆ ಏನಿದು ಸೂಪರ್-8 ಸುತ್ತು? ಹೇಗಿರಲಿದೆ ಮುಖಾಮುಖಿ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ…
ಈ ಪ್ರಶ್ನೆಗೆ ಸರಳ ಉತ್ತರ 8 ತಂಡಗಳ ಮುಖಾಮುಖಿ. ಅಂದರೆ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಅರ್ಹತೆ ಪಡೆಯಲಿದೆ. ಇದೇ ಕಾರಣಕ್ಕಾಗಿ ಟಿ20 ವಿಶ್ವಕಪ್ನ ದ್ವಿತೀಯ ಸುತ್ತನ್ನು ಸೂಪರ್-8 ಎಂದು ಕರೆಯಲಾಗುತ್ತದೆ.
ಮೇಲೆ ಹೇಳಿದಂತೆ ಸೂಪರ್-8 ಹಂತದಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ ಒಂದು ಗುಂಪಿನಲ್ಲಿ 4 ತಂಡಗಳಿರಲಿವೆ.
ಮೊದಲ ಸುತ್ತಿನಲ್ಲಿ ಒಂದೇ ಗುಂಪಿನಲ್ಲಿದ್ದ ತಂಡಗಳು ಸೂಪರ್-8 ಹಂತದಲ್ಲಿ ಮತ್ತೆ ಮುಖಾಮುಖಿಯಾಗುವುದಿಲ್ಲ. ಅಂದರೆ ಮೊದಲ ಸುತ್ತಿನಲ್ಲಿ ಭಾರತ ಮತ್ತು ಯುಎಸ್ಎ ತಂಡಗಳು ಗ್ರೂಪ್-ಎ ನಲ್ಲ್ಲಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಈ ತಂಡಗಳು ಪರಸ್ಪರ ಬೇರೆ ಬೇರೆ ಗ್ರೂಪ್ನಲ್ಲಿ ಕಾಣಿಸಿಕೊಳ್ಳಲಿದೆ.
ಮೊದಲ ಸುತ್ತಿನಲ್ಲಿ ಬಾಂಗ್ಲಾದೇಶ್ ಮತ್ತು ನೆದರ್ಲೆಂಡ್ಸ್ ತಂಡಗಳು ಕೊನೆಯ ಪಂದ್ಯವಾಡಬೇಕಿದೆ. ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಸೋತರೆ ಬಾಂಗ್ಲಾದೇಶ್ ಸೂಪರ್-8 ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ನೆದರ್ಲೆಂಡ್ ತಂಡ ಗೆದ್ದರೆ, ಬಾಂಗ್ಲಾದೇಶ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕು. ಇಲ್ಲದಿದ್ದರೆ ನೆಟ್ ರನ್ ರೇಟ್ ಮೂಲಕ ನೆದರ್ಲೆಂಡ್ಸ್ ತಂಡಕ್ಕೆ ಸೂಪರ್-8 ಗೆ ಪ್ರವೇಶಿಸಲು ಅವಕಾಶವಿದೆ. ಹೀಗಾಗಿ ಗ್ರೂಪ್-1 ರಲ್ಲಿ ಕಾಣಿಸಿಕೊಳ್ಳಲಿರುವ 4ನೇ ತಂಡ ಯಾವುದೆಂದು ಇನ್ನೂ ಸಹ ನಿರ್ಧಾರವಾಗಿಲ್ಲ.
ಗ್ರೂಪ್-2 ನಲ್ಲೂ ನಾಲ್ಕನೇ ಸ್ಥಾನ ಅಲಂಕರಿಸುವ ತಂಡ ಯಾವುದೆಂದು ಇನ್ನೂ ಸಹ ನಿರ್ಧಾರವಾಗಿಲ್ಲ. ಇಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವೆ ಪೈಪೋಟಿ ಇದೆ. ಒಂದು ವೇಳೆ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೋತರೆ ಮಾತ್ರ ಟಿ20 ವಿಶ್ವಕಪ್ನಿಂದ ಇಂಗ್ಲೆಂಡ್ ಹೊರಬೀಳಲಿದೆ. ಇನ್ನು ಸ್ಕಾಟ್ಲೆಂಡ್ ಸೋತರೆ, ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲ್ಲುವ ಮೂಲಕ ಇಂಗ್ಲೆಂಡ್ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ. ಹೀಗಾಗಿ ಉಭಯ ತಂಡಗಳ ಕೊನೆಯ ಪಂದ್ಯದ ಫಲಿತಾಂಶದ ಬಳಿಕ ಗ್ರೂಪ್-2 ನಲ್ಲಿ ಕಾಣಿಸಿಕೊಳ್ಳುವ 4ನೇ ತಂಡ ಯಾವುದೆಂದು ಗೊತ್ತಾಗಲಿದೆ.
ಇಲ್ಲಿ ಒಂದೇ ಗ್ರೂಪ್ನಲ್ಲಿರುವ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಅಂದರೆ ಗ್ರೂಪ್-1 ರಲ್ಲಿರುವ ಭಾರತ ತಂಡವು, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ಅಥವಾ ನೆದರ್ಲೆಂಡ್ಸ್ ವಿರುದ್ಧ ಪಂದ್ಯಗಳನ್ನಾಡಲಿದೆ. ಗ್ರೂಪ್-2 ನಲ್ಲೂ ಇದೇ ಮಾದರಿಯಲ್ಲಿ 4 ತಂಡಗಳು ಮುಖಾಮುಖಿಯಾಗಲಿದೆ.
ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್ಗಳಲ್ಲೂ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಪಾಯಿಂಟ್ಸ್ ಟೇಬಲ್ಗಳಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಲಿದೆ.
ಇದನ್ನೂ ಓದಿ: Tim Southee: 24 ಎಸೆತಗಳಲ್ಲಿ ಹೊಸ ಇತಿಹಾಸ ನಿರ್ನಿಸಿದ ಟಿಮ್ ಸೌಥಿ
ಟಿ20 ವಿಶ್ವಕಪ್ನ ದ್ವಿತೀಯ ಸುತ್ತಿನ ಪಂದ್ಯಗಳು ಜೂನ್ 19 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ್ ವಿರುದ್ಧ ಆಡಲಿದೆ. ಈ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದೆ.
ಸೂಪರ್-8 ಸುತ್ತಿನ ವೇಳಾಪಟ್ಟಿ:
ದಿನಾಂಕ | ಪಂದ್ಯಗಳು | ಸ್ಥಳ |
ಜೂನ್ 19 | ಯುಎಸ್ಎ vs ಸೌತ್ ಆಫ್ರಿಕಾ | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 19 | B1 vs ವೆಸ್ಟ್ ಇಂಡೀಸ್ | ಸೇಂಟ್ ಲೂಸಿಯಾ |
ಜೂನ್ 20 | ಭಾರತ vs ಅಫ್ಘಾನಿಸ್ತಾನ್ | ಬಾರ್ಬಡೋಸ್ |
ಜೂನ್ 20 | ಆಸ್ಟ್ರೇಲಿಯಾ vs D2 | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 21 | B1 vs ಸೌತ್ ಆಫ್ರಿಕಾ | ಸೇಂಟ್ ಲೂಸಿಯಾ |
ಜೂನ್ 21 | ಯುಎಸ್ಎ vs ವೆಸ್ಟ್ ಇಂಡೀಸ್ | ಬಾರ್ಬಡೋಸ್ |
ಜೂನ್ 22 | ಭಾರತ vs D2 | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 22 | ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ | ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ಜೂನ್ 23 | ಯುಎಸ್ಎ vs B1 | ಬಾರ್ಬಡೋಸ್ |
ಜೂನ್ 23 | ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 24 | ಆಸ್ಟ್ರೇಲಿಯಾ vs ಭಾರತ | ಸೇಂಟ್ ಲೂಸಿಯಾ |
ಜೂನ್ 24 | ಅಫ್ಘಾನಿಸ್ತಾನ್ vs D2 | ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
* ಇಲ್ಲಿ B1 ಎಂಬುದು ಮೊದಲ ಸುತ್ತಿನಲ್ಲಿ ಗ್ರೂಪ್-ಬಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ. ಹಾಗೆಯೇ D2 ಅಂದರೆ ಗ್ರೂಪ್-ಡಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸುವ ತಂಡ.
Published On - 2:04 pm, Sat, 15 June 24