T20 World Cup 2024: ಆರೋನ್ ಜೋನ್ಸ್ ಸಿಡಿಲಬ್ಬರ: ಅಮೆರಿಕಗೆ ಐತಿಹಾಸಿಕ ಜಯ

| Updated By: ಝಾಹಿರ್ ಯೂಸುಫ್

Updated on: Jun 02, 2024 | 9:42 AM

T20 World Cup 2024: ಟಿ20 ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಚೇಸ್ ಮಾಡುವ ಮೂಲಕ ಆತಿಥೇಯ ಯುಎಸ್​ಎ ತಂಡವು ಶುಭಾರಂಭ ಮಾಡಿದೆ. ಕೆನಡಾ ವಿರುದ್ಧದ ಈ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 10 ಸಿಕ್ಸ್ ಮತ್ತು 4 ಫೋರ್​ಗಳೊಂದಿಗೆ ಅಜೇಯ 94 ರನ್ ಬಾರಿಸುವ ಮೂಲಕ ಆರೋನ್ ಜೋನ್ಸ್ ಗೆಲುವಿನ ರೂವಾರಿ ಎನಿಸಿಕೊಂಡರು.

T20 World Cup 2024: ಆರೋನ್ ಜೋನ್ಸ್ ಸಿಡಿಲಬ್ಬರ: ಅಮೆರಿಕಗೆ ಐತಿಹಾಸಿಕ ಜಯ
USA
Follow us on

ಡಲ್ಲಾಸ್​ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ (T20 World Cup 2024) ಮೊದಲ ಪಂದ್ಯದಲ್ಲಿ ಯುಎಸ್​ಎ (ಅಮೆರಿಕ) ತಂಡ ಭರ್ಜರಿ ಜಯ ಸಾಧಿಸಿದೆ. ಕೆನಡಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.

ಆರಂಭಿಕರಾಗಿ ಕಣಕ್ಕಿಳಿದ ಆರೋನ್ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಮೊದಲ ವಿಕೆಟ್​ಗೆ 43 ರನ್​ಗಳ ಜೊತೆಯಾಟವಾಡಿದರು. ಆದರೆ ಪವರ್​ ಪ್ಲೇನ ಕೊನೆಯ ಓವರ್​ನ 2ನೇ ಎಸೆತದಲ್ಲಿ ಆರೋನ್ ಜಾನ್ಸನ್ (23) ವಿಕೆಟ್ ಪಡೆಯುವಲ್ಲಿ ಹರ್ಮೀತ್ ಸಿಂಗ್ ಯಶಸ್ವಿಯಾಗಿದ್ದಾರೆ. ಇದಾಗ್ಯೂ ಕೆನಡಾ ತಂಡ ಮೊದಲ 6 ಓವರ್​ಗಳಲ್ಲಿ 50 ರನ್​ ಕಲೆಹಾಕಿತು.

ಈ ಹಂತದಲ್ಲಿ ಜೊತೆಗೂಡಿದ ನವನೀತ್ ಮತ್ತು ನಿಕೋಲಸ್ ಕೀರ್ಟನ್ ಅರ್ಧಶತಕದ ಜೊತೆಯಾಟವಾಡಿದರು. ಇದರ ನಡುವೆ ನವನೀತ್ ಧಲಿವಾಲ್ 44 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 61 ರನ್ ಬಾರಿಸಿದರೆ, ನಿಕೋಲಸ್ ಕೀರ್ಟನ್ 31 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 51 ರನ್ ಸಿಡಿಸಿದರು.

ಇನ್ನು ಅಂತಿಮ ಓವರ್​ಗಳ ವೇಳೆ ಕಣಕ್ಕಿಳಿದ ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 32 ರನ್​ ಬಾರಿಸಿದರು. ಈ ಮೂಲಕ ಕೆನಡಾ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು.

195 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಯುಎಸ್​ಎ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಸ್ಟೀವನ್ ಟೇಲರ್ (0) ಶೂನ್ಯಕ್ಕೆ ಔಟಾದರೆ, ನಾಯಕ ಮೊನಾಕ್ ಪಟೇಲ್ 16 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಂಡ್ರೀಸ್ ಗೌಸ್ ಮತ್ತು ಆರೋನ್ ಜೋನ್ಸ್ 131 ರನ್​ಗಳ ಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ 46 ಎಸೆತಗಳಲ್ಲಿ 3 ಸಿಕ್ಸ್ ಮತ್ತು 7 ಫೋರ್​ಗಳೊಂದಿಗೆ 65 ರನ್ ಬಾರಿಸಿದ ಆಂಡ್ರೀಸ್ ಗೌಸ್ ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಆರೋನ್ ಜೋನ್ಸ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಈ ಮೂಲಕ ಕೇವಲ 40 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 94 ರನ್ ಬಾರಿಸಿದರು.  ಈ ಮೂಲಕ ಯುಎಸ್​ಎ ತಂಡ ಕೇವಲ 17.4 ಓವರ್​ಗಳಲ್ಲಿ ಗುರಿಯನ್ನು ಚೇಸ್ ಮಾಡಿ  7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: T20 World Cup 2024 Schedule: ಟಿ20 ವಿಶ್ವಕಪ್​ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಅಮೆರಿಕಗೆ ಐತಿಹಾಸಿಕ ಜಯ:

ಈ ಭರ್ಜರಿ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಸ್ಕೋರ್ ಚೇಸ್​ ಮಾಡಿದ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಅಮೆರಿಕ ತಂಡವು 169 ರನ್​ಗಳನ್ನು ಚೇಸ್ ಮಾಡಿರುವುದು ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯುಎಸ್​ಎ ತಂಡ ಯಶಸ್ವಿಯಾಗಿದೆ.

ಕೆನಡಾ (ಪ್ಲೇಯಿಂಗ್ XI): ಆರೋನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವ (ವಿಕೆಟ್ ಕೀಪರ್), ದಿಲ್‌ಪ್ರೀತ್ ಸಿಂಗ್, ಸಾದ್ ಬಿನ್ ಜಾಫರ್ (ನಾಯಕ), ನಿಖಿಲ್ ದತ್ತಾ, ದಿಲ್ಲನ್ ಹೇಲಿಗರ್, ಕಲೀಂ ಸನಾ, ಜೆರೆಮಿ ಗಾರ್ಡನ್.

ಇದನ್ನೂ ಓದಿ: T20 World Cup 2024: ಕೆನಡಾ ಪರ ಕಣಕ್ಕಿಳಿದ ಕನ್ನಡಿಗ..!

ಯುಎಸ್​ಎ (ಪ್ಲೇಯಿಂಗ್ XI): ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರೋನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಅಲಿ ಖಾನ್, ಸೌರಭ್ ನೇತ್ರವಲ್ಕರ್.

 

Published On - 9:31 am, Sun, 2 June 24