USA vs WI: ಯುಎಸ್​ಎ ವಿರುದ್ಧ ವಿಂಡೀಸ್ ಪರಾಕ್ರಮ: ಅಮೋಘ ಜಯ

T20 World Cup 2024: ಯುಎಸ್​ಎ ವಿರುದ್ಧದ ಈ ಗೆಲುವಿನೊಂದಿಗೆ ವಿಂಡೀಸ್ ತಂಡ ಸೆಮಿಫೈನಲ್ ಕನಸನ್ನು ಜೀವಂತವಿರಿಸಿಕೊಂಡಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು. ಇದೀಗ ಯುಎಸ್​ಎ ವಿರುದ್ಧ ಗೆದ್ದು ಗೆಲುವಿನ ಲಯಕ್ಕೆ ಮರಳಿದೆ. ಇನ್ನು ತನ್ನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ.

USA vs WI: ಯುಎಸ್​ಎ ವಿರುದ್ಧ ವಿಂಡೀಸ್ ಪರಾಕ್ರಮ: ಅಮೋಘ ಜಯ
WI vs USA
Follow us
ಝಾಹಿರ್ ಯೂಸುಫ್
|

Updated on: Jun 22, 2024 | 9:09 AM

T20 World Cup 2024: ಟಿ20 ವಿಶ್ವಕಪ್​ನ 46ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಅಮೋಘ ಜಯ ಸಾಧಿಸಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್, ಯುಎಸ್​ಎ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಯುಎಸ್​ಎ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಸ್ಟೀವನ್ ಟೇಲರ್ 2 ರನ್​ಗಳಿಸಿ ಔಟಾದರೆ, ಆ್ಯಂಡ್ರೀಸ್ ಗೌಸ್ 29 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಿತೀಸ್ ಕುಮಾರ್ 20 ರನ್​ಗಳ ಕೊಡುಗೆ ನೀಡಿದರು.

ಇದಾದ ಬಳಿಕ ಪೆವಿಲಿಯನ್ ಪರೇಡ್ ನಡೆಸಿದ ಯುಎಸ್​ಎ ಬ್ಯಾಟರ್​ಗಳು 19.5 ಓವರ್​ಗಳಲ್ಲಿ 128 ರನ್​ಗಳಿಸಿ ಆಲೌಟ್ ಆಯಿತು. ವಿಂಡೀಸ್ ಪರ 4 ಓವರ್​ಗಳಲ್ಲಿ ಕೇವಲ 19 ರನ್ ನೀಡಿ ರೋಸ್ಟನ್ ಚೇಸ್ 3 ವಿಕೆಟ್ ಕಬಳಿಸಿದರೆ, ಆ್ಯಂಡ್ರೆ ರಸೆಲ್ 3.5 ಓವರ್​ಗಳಲ್ಲಿ 31 ರನ್ ನೀಡಿ 3 ವಿಕೆಟ್ ಪಡೆದರು.

ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟಿಂಗ್:

129 ರನ್​ಗಳ ಸುಲಭ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರಾದ ಶಾಯ್ ಹೋಪ್ ಹಾಗೂ ಜಾನ್ಸನ್ ಚಾರ್ಲ್ಸ್ ಸ್ಪೋಟಕ ಆರಂಭ ಒದಗಿಸಿದ್ದರು. 6.6 ಓವರ್​ಗಳಲ್ಲಿ 67 ರನ್​ಗಳ ಜೊತೆಯಾಟವಾಡಿದ ಬಳಿಕ ಚಾಲ್ಸ್​ (15) ವಿಕೆಟ್ ಒಪ್ಪಿಸಿದರು.

ಆ ಬಳಿಕ ಜೊತೆಗೂಡಿದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಸಿಡಿಲಬ್ಬರ ಮುಂದುವರೆಸಿದರು. ಅದರಲ್ಲೂ ಸ್ಪೋಟಕ ಇನಿಂಗ್ಸ್ ಆಡಿದ ಹೋಪ್ ಯುಎಸ್​ಎ ಬೌಲರ್​ಗಳ ಬೆಂಡೆತ್ತಿದರು.

ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಶಾಯ್ ಹೋಪ್ 39 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳನ್ನು ಬಾರಿಸಿದರು. ಅಲ್ಲದೆ ಕೇವಲ ಅಜೇಯ 82 ರನ್ ಬಾರಿಸುವ ಮೂಲಕ 10.5 ಓವರ್​ಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೂಲಕ ವೆಸ್ಟ್ ಇಂಡೀಸ್ ತಂಡವು 9 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ವಿಂಡೀಸ್ ತಂಡ ಸೆಮಿಫೈನಲ್ ಕನಸನ್ನು ಜೀವಂತವಿರಿಸಿಕೊಂಡಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು. ಇದೀಗ ಯುಎಸ್​ಎ ವಿರುದ್ಧ ಗೆದ್ದು ಗೆಲುವಿನ ಲಯಕ್ಕೆ ಮರಳಿದೆ.

ಯುಎಸ್​ಎ ಪ್ಲೇಯಿಂಗ್ 11: ಸ್ಟೀವನ್ ಟೇಲರ್ , ಆ್ಯಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ನಿತೀಶ್ ಕುಮಾರ್ , ಆರೋನ್ ಜೋನ್ಸ್ (ನಾಯಕ) , ಕೋರಿ ಆಂಡರ್ಸನ್ , ಮಿಲಿಂದ್ ಕುಮಾರ್ , ಹರ್ಮೀತ್ ಸಿಂಗ್ , ಶಾಡ್ಲಿ ವ್ಯಾನ್ ಶಾಲ್ಕ್ವಿಕ್ , ನೋಸ್ತುಶ್ ಕೆಂಜಿಗೆ , ಅಲಿ ಖಾನ್ , ಸೌರಭ್ ನೇತ್ರವಾಲ್ಕರ್.

ಇದನ್ನೂ ಓದಿ: T20 World Cup 2024: ಭಾರತದ ವಿಶ್ವ ದಾಖಲೆ ಮುರಿದ ಆಸ್ಟ್ರೇಲಿಯಾ

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಜಾನ್ಸನ್ ಚಾರ್ಲ್ಸ್ , ಶಾಯ್ ಹೋಪ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರೋಸ್ಟನ್ ಚೇಸ್ , ರೋವ್ಮನ್ ಪೊವೆಲ್ (ನಾಯಕ) , ಶೆರ್ಫೇನ್ ರುದರ್ಫೋರ್ಡ್ , ಆ್ಯಂಡ್ರೆ ರಸ್ಸೆಲ್ , ಅಕೇಲ್ ಹೋಸೇನ್ , ಅಲ್ಜಾರಿ ಜೋಸೆಫ್ , ಗುಡಕೇಶ್ ಮೋಟಿ , ಓಬೆಡ್ ಮೆಕಾಯ್.