PAK vs SL: ಟಿ20 ವಿಶ್ವಕಪ್​ನಿಂದ ಹೊರಬಿದ್ದ ‘ಪ್ಯಾಕಿ’ಸ್ತಾನ; ಕಿವೀಸ್​ಗೆ ಸೆಮೀಸ್ ಟಿಕೆಟ್

Pakistan Out of T20 WC 2026 Semis: 2026ರ ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಪಾಕಿಸ್ತಾನ ತಂಡ ತನ್ನ ಕೊನೆಯ ಅವಕಾಶವನ್ನು ಕಳೆದುಕೊಂಡು ಸೆಮಿಫೈನಲ್ ಓಟದಿಂದ ಹೊರಬಿದ್ದಿದೆ. ಶ್ರೀಲಂಕಾ ವಿರುದ್ಧ ಭಾರಿ ಗೆಲುವು ಸಾಧಿಸಲು ವಿಫಲವಾದ ಕಾರಣ, ಪಾಕ್ ತಂಡಕ್ಕೆ ಸೆಮಿಫೈನಲ್ ಬಾಗಿಲು ಅಧಿಕೃತವಾಗಿ ಮುಚ್ಚಿದೆ. ಇದರ ಪರಿಣಾಮವಾಗಿ, ನ್ಯೂಜಿಲೆಂಡ್ ತಂಡ ಗ್ರೂಪ್ 2 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

PAK vs SL: ಟಿ20 ವಿಶ್ವಕಪ್​ನಿಂದ ಹೊರಬಿದ್ದ ‘ಪ್ಯಾಕಿ’ಸ್ತಾನ; ಕಿವೀಸ್​ಗೆ ಸೆಮೀಸ್ ಟಿಕೆಟ್
Pakistan

Updated on: Feb 28, 2026 | 11:16 PM

2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026) ಸಿಕ್ಕಿದ್ದ ಕೊನೆಯ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾದ ಪಾಕಿಸ್ತಾನ (Pakistan) ತಂಡ ಸೂಪರ್ 8 ಸುತ್ತಿನಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ವಾಸ್ತವವಾಗಿ ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕೆಂದಿದ್ದರೆ, ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಿತ್ತು. ಆದರೆ ಆ ಕೆಲಸ ಮಾಡುವಲ್ಲಿ ಪಾಕಿಸ್ತಾನ ತಂಡ ವಿಫಲವಾಯಿತು. ಇದರ ಪರಿಣಾಮವಾಗಿ ಪಾಕ್ ತಂಡಕ್ಕೆ ಸೆಮಿಫೈನಲ್‌ ಬಾಗಿಲು ಅಧಿಕೃತವಾಗಿ ಮುಚ್ಚಿದೆ. ಹೀಗಾಗಿ ನ್ಯೂಜಿಲೆಂಡ್ ತಂಡ ಗ್ರೂಪ್ 2 ರಿಂದ ಎರಡನೇ ತಂಡವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.

ಪಾಕಿಸ್ತಾನದ ಕನಸು ಭಗ್ನ

ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕಿದ್ದಿದ್ದರೆ ಶ್ರೀಲಂಕಾ ತಂಡವನ್ನು ಭಾರಿ ಅಂತರದಲ್ಲಿ ಸೋಲಿಸಬೇಕಿತ್ತು. ಅದರಂತೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 213 ರನ್ ಕಲೆಹಾಕಿತು. ಹೀಗಾಗಿ ಈ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡವನ್ನು 147 ರನ್​ಗಳಿಗೆ ಕಟ್ಟಿಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಶ್ರೀಲಂಕಾ ತಂಡ 16ನೇ ಓವರ್​ನಲ್ಲಿ 150 ರನ್​ಗಳ ಗಡಿ ದಾಟುವ ಮೂಲಕ ಪಾಕಿಸ್ತಾನದ ಕನಸನ್ನು ಭಗ್ನಗೊಳಿಸಿತು.

176 ರನ್​ಗಳ ದಾಖಲೆಯ ಜೊತೆಯಾಟ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಪರ ಸಾಹಿಬ್ಜಾದಾ ಫರ್ಹಾನ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಶತಕವನ್ನು ಬಾರಿಸಿದರು. ಫರ್ಹಾನ್ ಸಾಥ್ ನೀಡಿದ ಫಖರ್ ಜಮಾನ್ ಕೂಡ 84 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರು ಮೊದಲ ವಿಕೆಟ್​ಗೆ ವಿಶ್ವದಾಖಲೆಯ 176 ರನ್‌ಗಳ ಭರ್ಜರಿ ಪಾಲುದಾರಿಕೆಯನ್ನು ಹಂಚಿಕೊಂಡರು.

8 ಬ್ಯಾಟ್ಸ್​ಮನ್​ಗಳ ನಿರಸ ಪ್ರದರ್ಶನ

ಇವರಿಬ್ಬರ ಬ್ಯಾಟಿಂಗ್ ನೋಡಿದವರಿಗೆ ಪಾಕಿಸ್ತಾನ ಈ ಪಂದ್ಯದಲ್ಲಿ 240 ರಿಂದ 250 ರನ್‌ಗಳನ್ನು ಸುಲಭವಾಗಿ ತಲುಪುತ್ತದೆ ಎಂದು ತೋರುತ್ತಿತ್ತು. ಆದರೆ ಫಖರ್ ಔಟಾದ ಬಳಿಕ ಪಾಕಿಸ್ತಾನದ ಕುಸಿತ ಆರಂಭವಾಯಿತು. ಕೊನೆಯ ನಾಲ್ಕು ಓವರ್‌ಗಳಲ್ಲಿ ತಂಡವು ಏಳು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 35 ರನ್‌ಗಳನ್ನು ಗಳಿಸಿತು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಉಳಿದ ಎಂಟು ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ಸುಸ್ತಾದರು. ಹೀಗಾಗಿ ಪಾಕ್ ತಂಡ 20 ಓವರ್​ಗಳಲ್ಲಿ 213 ರನ್ ಮಾತ್ರ ಕಲೆಹಾಕಿತು.

ಲಂಕಾ ತಂಡಕ್ಕೆ ಆರಂಭಿಕ ಆಘಾತ

213 ರನ್ ಕಲೆಹಾಕಿದ್ದ ಪಾಕಿಸ್ತಾನಕ್ಕೆ ಈ ಪಂದ್ಯವನ್ನು ಗೆಲ್ಲುವುದರ ಜೊತೆಗೆ ಶ್ರೀಲಂಕಾ ತಂಡವನ್ನು 147 ರನ್​ಗಳ ಒಳಗೆ ಕಟ್ಟಿಹಾಕುವ ಸವಾಲು ಇತ್ತು. ಅದರಂತೆ ಗುರಿ ಬೆನ್ನಟ್ಟಿದ ಲಂಕಾ ತಂಡದ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ ಅವರನ್ನು ಎರಡನೇ ಓವರ್​ನಲ್ಲಿಯೇ ಪೆವಿಲಿಯನ್​ಗಟ್ಟಿತು. ನಂತರ ಕೇವಲ 33 ರನ್​ಗಳಿಗೆ ಎರಡನೇ ವಿಕೆಟ್ ಕೂಡ ಪಡೆಯಿತು. ಆದರೆ ಆರಂಭಿಕ ಆಘಾತದ ನಡುವೆಯೂ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಪ್ರತಿದಾಳಿ ನಡೆಸಿದರು. ಆದಾಗ್ಯೂ, ಸ್ಪಿನ್ನರ್ ಅಬ್ರಾರ್ ಅಹ್ಮದ್ ಕಮಿಂದು ಮೆಂಡಿಸ್ ಮತ್ತು ಚರಿತ್ ಅಸಲಂಕಾ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ತಂಡದ ಭರವಸೆಯನ್ನು ಹೆಚ್ಚಿಸಿದರು.

IND vs WI: ಭಾರತ- ವಿಂಡೀಸ್ ಪಂದ್ಯಕ್ಕೆ ಮಳೆ ಅಡ್ಡಿ? ಹೇಗಿರಲಿದೆ ಕೋಲ್ಕತ್ತಾದ ಹವಾಮಾನ?

ಶನಕ- ರತ್ನಾಯಕ ಜೊತೆಯಾಟ

ಒಂದು ಹಂತದಲ್ಲಿ ಶ್ರೀಲಂಕಾ 12 ಓವರ್‌ಗಳಲ್ಲಿ 101 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಲ್ಲಿಂದ ಪಾಕಿಸ್ತಾನಿ ಬೌಲರ್‌ಗಳು ಏನಾದರೂ ಚಮತ್ಕಾರ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಶ್ರೀಲಂಕಾ ನಾಯಕ ದಾಸುನ್ ಶನಕ ಮತ್ತು ಪವನ್ ರತ್ನಾಯಕ ಒಟ್ಟಾಗಿ ಪಾಕಿಸ್ತಾನಿ ತಂಡದ ಕನಸನ್ನು ಭಗ್ನಗೊಳಿಸಿದರು. ಇಬ್ಬರು ಒಟ್ಟಾಗಿ ತಂಡವನ್ನು 147 ರನ್‌ಗಳ ಗಡಿ ದಾಟಿಸಿ, ಪಾಕಿಸ್ತಾನವನ್ನು ಪಂದ್ಯಾವಳಿಯಿಂದ ಹೊರದಬ್ಬಿದರು.

ಇದೇ ವೇಳೆ ರತ್ನಾಯಕ ಅರ್ಧಶತಕ ಗಳಿಸಿದರೆ, ಶನಕ ಶ್ರೀಲಂಕಾ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಅಂತಿಮ ಓವರ್‌ನಲ್ಲಿ ಶನಕ, ಶಹೀನ್ ಅಫ್ರಿದಿ ಎಸೆತದಲ್ಲಿ ಸತತ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಪಾಕಿಸ್ತಾನಕ್ಕೆ ಸೋಲಿನ ಆತಂಕವನ್ನು ಮೂಡಿಸಿದರು. ಆದಾಗ್ಯೂ, ಕೊನೆಯ ಎರಡು ಎಸೆತಗಳಲ್ಲಿ ಶಹೀನ್ ಯಾವುದೇ ರನ್ ನೀಡದೆ ಪಾಕಿಸ್ತಾನಕ್ಕೆ 5 ರನ್‌ಗಳ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 pm, Sat, 28 February 26

Follow Us