T20 World Cup Qualifier: ಮೂರನೇ ಬಾರಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ಚೀನಾ..!

| Updated By: ಝಾಹಿರ್ ಯೂಸುಫ್

Updated on: Jul 30, 2023 | 7:56 PM

T20 World Cup Asia Qualifier B 2023: ಟಿ20 ವಿಶ್ವಕಪ್​ ಅರ್ಹತಾ ಸುತ್ತಿನಲ್ಲಿ ಚೀನಾ ತಂಡವು ಇದುವರೆಗೆ 50 ರನ್ ಕಲೆಹಾಕಿಲ್ಲ ಎಂಬುದು ವಿಶೇಷ.

T20 World Cup Qualifier: ಮೂರನೇ ಬಾರಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ಚೀನಾ..!
China Team
Follow us on

T20 World Cup Asia Qualifier B 2023: ಕೌಲಾಲಂಪುರದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್​ ಪಂದ್ಯದಲ್ಲಿ ಚೀನಾ ಮೂರನೇ ಬಾರಿ ಮುಗ್ಗರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭೂತಾನ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಭೂತಾನ್ ಪರ ಆರಂಭಿಕರಾದ ಟೆಂಜಿನ್ ರಾಬ್ಗೆ (50) ಹಾಗೂ ಸುಪ್ರಿತ್ ಪ್ರಧಾನ್ (59) ಅವರ ಅರ್ಧಶತಕ ಬಾರಿಸಿ ಮಿಂಚಿದರು. ಈ ಅರ್ಧಶತಕಗಳ ನೆರವಿನಿಂದ ಭೂತಾನ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 161 ರನ್ ಪೇರಿಸಿತು.

162 ರನ್​ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಚೀನಾ ತಂಡಕ್ಕೆ ವರುಣ ಅಡ್ಡಿಪಡಿಸಿದ. ಮಳೆಯಿಂದಾಗಿ ಕೆಲ ಕಾಲ ಸ್ಥಗಿತಗೊಂಡಿದ್ದ ಪಂದ್ಯ ಓವರ್ ಕಡಿತದೊಂದಿಗೆ ಮತ್ತೆ ಶುರುವಾಯಿತು. ಅದರಂತೆ ಡಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ ಚೀನಾಗೆ 17 ಓವರ್​ಗಳಲ್ಲಿ 144 ರನ್​ಗಳ ಗುರಿ ನೀಡಲಾಗಿತ್ತು.

ಆದರೆ ಭೂತಾನ್ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಚೀನಾ ಬ್ಯಾಟರ್​ಗಳು ಕೇವಲ 11.4 ಓವರ್​ಗಳಲ್ಲಿ 48 ರನ್​ಗಳಿಸಿ ಆಲೌಟ್ ಆದರು. ಇತ್ತ ಭೂತಾನ್ ತಂಡವು 95 ರನ್​ಗಳ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಮುಂದಿರುವುದು ಕೇವಲ 19 ಪಂದ್ಯಗಳು..!

ಮೂರನೇ ಬಾರಿ ಅತ್ಯಲ್ಪ ಮೊತ್ತಕ್ಕೆ ಆಲೌಟ್:

ಟಿ20 ವಿಶ್ವಕಪ್​ ಅರ್ಹತಾ ಸುತ್ತಿನಲ್ಲಿ ಚೀನಾ ತಂಡವು ಇದುವರೆಗೆ 50 ರನ್ ಕಲೆಹಾಕಿಲ್ಲ ಎಂಬುದು ವಿಶೇಷ. ಮಲೇಷ್ಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 23 ರನ್​ಗಳಿಗೆ ಆಲೌಟ್ ಆಗಿದ್ದರು. ಇನ್ನು ಥೈಲ್ಯಾಂಡ್ ವಿರುದ್ಧದ 2ನೇ ಪಂದ್ಯದಲ್ಲಿ 26 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ಭೂತಾನ್ ವಿರುದ್ಧ 48 ರನ್​ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.

 

Published On - 7:56 pm, Sun, 30 July 23