Afghanistan vs Namibia: ಇಂಡೋ-ಕಿವೀಸ್ ಪಂದ್ಯದ ನಡುವೆ ಮರೆಯದಿರಿ ಅಫ್ಘಾನಿಸ್ತಾನ vs ನಮೀಬಿಯಾ ಕದನ
AFG vs NAM, T20 World Cup: ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ನಮೀಬಿಯಾ ತಂಡ ಆಲ್ರೌಂಡ್ ಆಟದ ಮೂಲಕ ಸ್ಕಾಟ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದು ಗೊತ್ತೇಯಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ, ಸತತ ಎರಡನೇ ಜಯದ ತವಕದಲ್ಲಿದೆ.
ಐಸಿಸಿ ಟಿ-20 ವಿಶ್ವಕಪ್ನ (T20 World Cup) ಸೂಪರ್-12 ಹಂತದಲ್ಲಿಂದು ಎರಡು ಪಂದ್ಯ ನಡೆಯಲಿದೆ. ಸಂಜೆ 7:30ಕ್ಕೆ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ಜರುಗಲಿದೆ. ಆದರೆ, ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡ ನಮೀಬಿಯಾ (Afghanistan vs Namibia) ಸವಾಲು ಎದುರಿಸಲಿದೆ. ಈ ಪಂದ್ಯ ಮಧ್ಯಾಹ್ನ 3:30ಕ್ಕೆ ಶುರುವಾಗಲಿದೆ. ಈಗಾಗಲೇ ಸ್ಕಾಟ್ಲೆಂಡ್ ವಿರುದ್ಧ ನಮೀಬಿಯಾ ಗೆದ್ದು ಬೀಗಿದೆ. ಕಳೆದ ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಸೋಲನುಭವಿಸಿರುವ ಅಫ್ಘಾನ್ ಸೆಮಿಫೈನಲ್ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲು ಕಾತರಿಸುತ್ತಿದ್ದರೆ, ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ನಮೀಬಿಯಾ ಆಫ್ಘಾನ್‌ಗೂ ಶಾಕ್ ನೀಡಿದರೆ ಅಚ್ಚರಿ ಪಡಬೇಕಿಲ್ಲ. ಹೀಗೆ ಅನೇಕ ಕಾರಣಗಳಿಂದ ಈ ಪಂದ್ಯ ಕುತೂಹಲ ಕೆರಳಿಸಿದೆ.
ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ನಮೀಬಿಯಾ ತಂಡ ಆಲ್ರೌಂಡ್ ಆಟದ ಮೂಲಕ ಸ್ಕಾಟ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದು ಗೊತ್ತೇಯಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ, ಸತತ ಎರಡನೇ ಜಯದ ತವಕದಲ್ಲಿದೆ. ತಂಡದಲ್ಲಿ ವಿಲಿಯಮ್ಸ್, ಮೈಕಲ್ ವಾನ್ ಗ್ರಿನ್, ಡೇವಿಡ್ ವೈಸ್ ಹಾಗೂ ಗ್ರಿಲ್ಯಾಂಡ್ ಸ್ಫೋಟಕ ಬ್ಯಾಟಿಂಗ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಬೌಲಿಂಗ್ನಲ್ಲಿ ರೂಬೆನ್ ಟ್ರಂಪೆಲ್ಮನ್, ಜಾನ್ ಫ್ರಿಲಿಂಕ್, ಡೇವಿಡ್ ವೈಸ್ನಂತಹ ಬೌಲರ್ಗಳಿದ್ದಾರೆ.
ಇತ್ತ ಅಫ್ಘಾನಿಸ್ತಾನ ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಮೊಹಮ್ಮದ್ ನಬಿ ಅವರನ್ನು ಒಳಗೊಂಡ ಪ್ರಬಲ ಸ್ಪಿನ್ನರ್‌ಗಳು ಮತ್ತು ಭರ್ಜರಿ ಹೊಡೆತಗಳನ್ನು ಪ್ರದರ್ಶಿಸುವ ಬ್ಯಾಟರ್‌ಗಳಿರುವ ಅಫ್ಗಾನಿಸ್ತಾನ ಯಾವ ತಂಡಕ್ಕೂ ಸುಲಭವಾಗಿ ಮಣಿಯುವುದಿಲ್ಲ ಎಂಬುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಜೊತೆಗೆ ಹಜರುತುಲ್ಲಾ ಝಜೈ, ಮೊಹಮ್ಮದ್ ಸಹ್ಜಾದ್, ಮೊಹಮ್ಮದ್ ನಬಿ, ರಹಮದುಲ್ಲಾ ಗುರ್ಬಾಜ್ ಸೇರಿದಂತೆ ಅನೇಕ ಸ್ಫೋಟಕ ಬ್ಯಾಟರ್ಗಳಿದ್ದಾರೆ.
ಮಧ್ಯಾಹ್ನದ ಪಂದ್ಯದ ಪ್ರಾರಂಭದಲ್ಲಿ ಅಬುಧಾಬಿಯ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ ಎಂದು ಮುನ್ಸೂಚನೆ ಇದೆ. ಪ್ರತಿ ಬಾರಿಯಂತೆ ಸ್ಪಿನ್ನರ್‌ಗಳಿಗೆ ಅನುಕೂಲದ ನಿರೀಕ್ಷೆಯಿದೆ, ಮತ್ತು ಉದ್ದ ಬೌಂಡರಿಗಳುಳ್ಳ ಈ ಮೈದಾನ ಬೌಲಿಂಗ್ ತಂಡಕ್ಕೆ ಹೆಚ್ಚು ಅನುಕೂಲಕರವಾಗಿರಲಿದೆ.
ಇನ್ನು ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ ಆಗಲಿದೆ. ಪಾಕಿಸ್ತಾನ ವಿರುದ್ಧ ಸೋತು ಅಭಿಯಾನ ಆರಂಭಿಸಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯಕ್ಕೆ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವೇದಿಕೆ ಸಿದ್ದವಾಗಿದೆ. ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಆ ಮೂಲಕ ಟೂರ್ನಿಯಲ್ಲಿ ಭಾರತ ತಂಡ ನೀರಸ ಆರಂಭ ಕಂಡಿತ್ತು. ಹೀಗಾಗಿ ಸೆಮೀಸ್ ಹಂತಕ್ಕೇರುವ ದೃಷ್ಟಿಯಿಂದ ಎರಡು ತಂಡಗಳಿಗೂ ಈ ಪಂದ್ಯ ಕ್ವಾರ್ಟಫೈನಲ್ ಹಣಾಹಣಿಯಂತಿದೆ.
India vs New Zealand: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತದಲ್ಲಿ ಬರೋಬ್ಬರಿ 4 ಬದಲಾವಣೆಯಂತೆ!
(T20 World Cup Before India vs New Zealand Match Mohammad Nabi-led Afghanistan will lock horns with Namibia)