
ಟಿ20 ವಿಶ್ವಕಪ್ (T20 World Cup 2022) ಲೀಗ್ ಹಂತ ಪೂರ್ಣಗೊಂಡಿದೆ. ಇಂದು ನಡೆದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ (Team India), ಜಿಂಬಾಬ್ವೆ ತಂಡವನ್ನು ಸುಲಭವಾಗಿ ಮಣಿಸುವುದರೊಂದಿಗೆ ಗ್ರೂಪ್ ಬಿಯಲ್ಲಿ ಅಗ್ರಸ್ಥಾನಗಳಿಸಿದೆ. ಈಗ ಬುದವಾರದಿಂದ ಸೆಮಿಫೈನಲ್ ಆರಂಭವಾಗಲಿದ್ದು, ಗ್ರೂಪ್-ಎ ಯಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದ್ದರೆ, ಗ್ರೂಪ್-ಬಿಯಿಂದ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ಗೆ ಹೋಗಿವೆ. ಮೊದಲ ಸೆಮಿಫೈನಲ್ ಬುಧವಾರ ಸಿಡ್ನಿಯಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಹೋರಾಟ ಗುರುವಾರ ಅಡಿಲೇಡ್‌ನಲ್ಲಿ ನಡೆಯಲಿದೆ.
ಸದ್ಯದ ವಿಶ್ಲೇಷಣೆ ಮತ್ತು ಆಯಾ ತಂಡಗಳ ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಾರೆ. ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ನ್ಯೂಜಿಲೆಂಡ್ ಮೇಲೆ ಪ್ರಾಬಲ್ಯ ಸಾಧಿಸುವುದು ಬಹುತೇಕ ಕಷ್ಟವಾಗಲಿದೆ ಎನ್ನಲಾಗಿದೆ. ಪಾಕಿಸ್ತಾನಕ್ಕೆ ಯಶಸ್ಸು ಸಾಧಿಸಲು ಬೌಲಿಂಗ್ ಜೊತೆಗೆ ಬಾಬರ್-ರಿಜ್ವಾನ್ ಅವರ ಫಾರ್ಮ್ ತುಂಬಾ ನಿರ್ಣಾಯಕವಾಗಿದೆ ಎಂದು ಹೇಳಲಾಗುತ್ತದೆ.
ಟೀಂ ಇಂಡಿಯಾ ಗೆಲ್ಲುತ್ತೆ
ಇನ್ನು ಎರಡನೇ ಸೆಮಿಫೈನಲ್ ವಿಚಾರಕ್ಕೆ ಬಂದರೆ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತೆ ಅಂತಾರೆ ಕ್ರಿಕೆಟ್ ಅಭಿಮಾನಿಗಳು. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಾಹುಲ್, ರೋಹಿತ್ ಶರ್ಮಾ ಕೂಡ ಒಳ್ಳೆ ಇನ್ನಿಂಗ್ಸ್ ಆಡಿದರೆ.. ದೊಡ್ಡ ಸ್ಕೋರ್ ಮಾಡೋದು ಮಾತ್ರವಲ್ಲ.. ಟೀಂ ಇಂಡಿಯಾ ತೀಕ್ಷ್ಣ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು ಸೋಲಿಸಲಿದೆ ಎಂಬುದು ಪರಿಣಿತರ ವಾದ. ಇದೇ ವೇಳೆ ಅಂತಿಮ ಹೋರಾಟ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಆದರೆ ಇಲ್ಲಿಯೇ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿಜವಾದ ಆತಂಕ ಎದುರಾಗಿರುವುದು.
ನ್ಯೂಜಿಲೆಂಡ್ ಟೀಮ್ ಇಂಡಿಯಾವನ್ನು ಸೋಲಿಸಿದೆ
ಇದುವರೆಗೆ ನಡೆದ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಮೇಲುಗೈ ಸಾಧಿಸಿಲ್ಲ. 2007 ಮತ್ತು 2010 ರ ಟಿ20 ವಿಶ್ವಕಪ್‌ಗಳಲ್ಲಿ, ಹಾಗೆಯೇ 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021 ಟೆಸ್ಟ್ ಚಾಂಪಿಯನ್‌ಶಿಪ್, ಹಾಗೆಯೇ 2021 ಟಿ20 ವಿಶ್ವಕಪ್ ಲೀಗ್ ಹಂತಗಳಲ್ಲಿ, ನ್ಯೂಜಿಲೆಂಡ್ ಈ ಎಲ್ಲದರಲ್ಲೂ ಟೀಮ್ ಇಂಡಿಯಾವನ್ನು ಸೋಲಿಸಿದೆ. ರೋಹಿತ್ ಅವರ ಫಾರ್ಮ್ ಕೊರತೆ, ಮಧ್ಯಮ ಕ್ರಮಾಂಕದ ಅಸ್ಥಿರತೆ, ಸ್ಪಿನ್ನರ್ಗಳು ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗದಿರುವುದು ಭಾರತ ತಂಡವನ್ನು ಕಾಡಿದಂತಿದೆ.
ಬ್ಯಾಟಿಂಗ್ ವಿಭಾಗ ಹೆಚ್ಚಾಗಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಮೇಲೆ ಅವಲಂಬಿತವಾಗಿದೆ ಎಂಬುದು ಈಗಾಗಲೇ ನಡೆದಿರುವ ಎಲ್ಲಾ ಪಂದ್ಯಗಳಲ್ಲೂ ಸಾಭೀತಾಗಿದೆ. ಟೀಂ ಇಂಡಿಯಾ ಈ ತಪ್ಪುಗಳನ್ನು ಮೆಟ್ಟಿ ನಿಲ್ಲದಿದ್ದರೆ ನ್ಯೂಜಿಲೆಂಡ್ ಎದುರು ಮತ್ತೊಂದು ಸೋಲು ಖಚಿತ. ಹಾಗೆಯೇ ಕಪ್ ಕೈ ತಪ್ಪುವುದು ಖಚಿತ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.