T20 World Cup 2022: ಟಿ20 ವಿಶ್ವಕಪ್ನಲ್ಲಿನ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ (Team India) ವಿರುದ್ಧ ಸೋತಿರುವ ಪಾಕಿಸ್ತಾನ್ (Pakistan) ತಂಡವು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಲು ಒಂದು ಕಾರಣ ಸೌತ್ ಆಫ್ರಿಕಾ ಹಾಗೂ ಜಿಂಬಾಬ್ವೆ ನಡುವಣ ಪಂದ್ಯ ರದ್ದಾಗಿರುವುದು. ಅಂದರೆ ಮೊದಲ ಪಂದ್ಯವಾಡಿರುವ ಸೌತ್ ಆಫ್ರಿಕಾ ಸೋಲನುಭವಿಸಿಲ್ಲ. ಇತ್ತ 6 ತಂಡಗಳಲ್ಲಿ 2 ತಂಡಗಳು ಮಾತ್ರ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಆದರೆ ಇದೀಗ ಮೊದಲ ಪಂದ್ಯವನ್ನು ಸೋತಿರುವ ಪಾಕಿಸ್ತಾನ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಸೌತ್ ಆಫ್ರಿಕಾ ತಂಡವು 3ನೇ ಸ್ಥಾನ ಅಲಂಕರಿಸಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಗ್ರೂಪ್-2 ನಲ್ಲಿರುವ ಬಲಿಷ್ಠ ತಂಡಗಳೆಂದರೆ ಭಾರತ, ಪಾಕಿಸ್ತಾನ್ ಹಾಗೂ ಸೌತ್ ಆಫ್ರಿಕಾ. ಇನ್ನುಳಿದಿರುವುದು ಬಾಂಗ್ಲಾದೇಶ್, ನೆದರ್ಲ್ಯಾಂಡ್ಸ್ ಹಾಗೂ ಜಿಂಬಾಬ್ವೆ. ಅಂದರೆ ಪಾಕಿಸ್ತಾನ್ ಸೆಮಿಫೈನಲ್ಗೇರಲು ಬಾಂಗ್ಲಾ, ನೆದರ್ಲ್ಯಾಂಡ್ಸ್ ಹಾಗೂ ಜಿಂಬಾಬ್ವೆ ತಂಡವನ್ನು ಮಣಿಸುವ ಸಾಧ್ಯತೆ ಹೆಚ್ಚಿದೆ. ಅತ್ತ ಸೌತ್ ಆಫ್ರಿಕಾ ಕೂಡ ಬಾಂಗ್ಲಾ-ನೆದರ್ಲ್ಯಾಂಡ್ಸ್ ತಂಡಗಳ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ. ಅಂದರೆ ಇಲ್ಲಿ ಸೌತ್ ಆಫ್ರಿಕಾಗೆ ಪಾಕ್ ವಿರುದ್ಧ ಪಂದ್ಯ ನಿರ್ಣಾಯಕವಾಗಬಹುದು.
ಏಕೆಂದರೆ ಪಾಕಿಸ್ತಾನ್ ತಂಡವು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಒಂದು ವೇಳೆ ಪಾಕಿಸ್ತಾನ್ ತಂಡವು ಮುಂದಿನ 4 ಪಂದ್ಯಗಳಲ್ಲಿ ಒಂದರಲ್ಲೂ ಸೋತರೂ, ಸೌತ್ ಆಫ್ರಿಕಾಗೆ ಸೆಮಿಫೈನಲ್ಗೇರುವ ಅವಕಾಶ ಹೆಚ್ಚಿರಲಿದೆ. ಏಕೆಂದರೆ ಸೌತ್ ಆಫ್ರಿಕಾ ತಂಡವು ಸೋಲನುಭವಿಸಿಲ್ಲ.
ಇನ್ನು ಟೀಮ್ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಸೋತರೂ, ಪಾಕ್ ತಂಡವು ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ವೇಳೆ ಪಾಕ್ ಮುಂದಿನ 1 ಪಂದ್ಯದಲ್ಲಿ ಸೋತು, ಸೌತ್ ಆಫ್ರಿಕಾ ಮುಂದಿನ 4 ಮ್ಯಾಚ್ನಲ್ಲಿ 3 ಪಂದ್ಯಗಳನ್ನು ಗೆದ್ದರೂ ಒಟ್ಟು ಅಂಕ 7 ಆಗಿರಲಿದೆ. ಇತ್ತ ಪಾಕಿಸ್ತಾನ್ ಮುಂದಿನ ನಾಲ್ಕು ಪಂದ್ಯಗಳನ್ನು ಗೆದ್ದರೆ ಮಾತ್ರ 8 ಪಾಯಿಂಟ್ ಪಡೆದು ನೇರವಾಗಿ ಸೆಮಿಫೈನಲ್ ಪ್ರವೇಶಿಸಬಹುದು.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಸೌತ್ ಆಫ್ರಿಕಾ ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತರೂ, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಆ ಸೋಲಿನ ಲೆಕ್ಕವನ್ನು ಚುಕ್ತಾ ಮಾಡಬಹುದು. ಅಂದರೆ ಸೌತ್ ಆಫ್ರಿಕಾ ವಿರುದ್ಧ ಪಾಕಿಸ್ತಾನ್ ಸೋತು ಉಳಿದ 3 ಪಂದ್ಯಗಳಲ್ಲಿ ಗೆದ್ದರೂ ಒಟ್ಟು 6 ಪಾಯಿಂಟ್ ಮಾತ್ರ ಆಗಲಿದೆ.
ಇದನ್ನೂ ಓದಿ: India vs Pakistan: ಕ್ಲೀನ್ ಬೌಲ್ಡ್, 3 ರನ್: ಐಸಿಸಿ ನಿಯಮ ಮತ್ತು ವಿವಾದ
ಇತ್ತ ಮೊದಲ ಪಂದ್ಯ ರದ್ದಾದ ಕಾರಣ 1 ಅಂಕ ಪಡೆದಿರುವ ಸೌತ್ ಆಫ್ರಿಕಾ ಮುಂದಿನ 4 ಪಂದ್ಯಗಳಲ್ಲಿ 3 ಜಯ ಸಾಧಿಸುವ ಮೂಲಕ ಒಟ್ಟು 7 ಪಾಯಿಂಟ್ಗಳಿಸಬಹುದು. ಹೀಗಾಗಿ ಅಕ್ಟೋಬರ್ 30 ರಂದು ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯವು ಪಾಕಿಸ್ತಾನ್ ಪಾಲಿಗೆ ನಿರ್ಣಾಯಕವಾಗಿದೆ.