ಟಿ20 ವಿಶ್ವಕಪ್ಗೆ ದಿನಗಣನೆಗೆ ಶುರುವಾಗಿದೆ. ಅಕ್ಟೋಬರ್ 17 ರಿಂದ ಚುಟುಕು ಕ್ರಿಕೆಟ್ ಕದನಕ್ಕೆ ಚಾಲನೆ ಸಿಗಲಿದ್ದು, ಭಾರತ ತಂಡವು ಅಕ್ಟೋಬರ್ 24 ರಂದು ಮೊದಲ ಪಂದ್ಯವನ್ನಾಡಲಿದೆ. ಅಂದರೆ ಅ.17 ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದ್ದು, ಅ.23 ರಿಂದ ಸೂಪರ್-12 ಹಂತದ ಪಂದ್ಯಗಳು ಆರಂಭವಾಗಲಿದೆ. ಅದರಂತೆ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ದ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇತ್ತ ಚುಟುಕು ಕ್ರಿಕೆಟ್ ಕದನಕ್ಕೆ ದಿನಗಣನೆ ಶುರುವಾದ ಬೆನ್ನಲ್ಲೇ ಯಾವ ತಂಡ ಬಲಿಷ್ಠ ಎಂಬ ಲೆಕ್ಕಾಚಾರಗಳು ಕೂಡ ಶುರುವಾಗಿದೆ. ಈ ಲೆಕ್ಕಾಚಾರದ ಎಲ್ಲಾ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಮುಂಚೂಣಿಯಲ್ಲಿರುವ ತಂಡ ಟೀಮ್ ಇಂಡಿಯಾ.
ಹೌದು, ಪ್ರಸ್ತುತ ಟಿ20 ಅಂಗಳದ ಬಲಿಷ್ಠ ತಂಡಗಳಲ್ಲಿ ಟೀಮ್ ಇಂಡಿಯಾ ಮುಂಚೂಣಿಯಲ್ಲಿದೆ. ಏಕೆಂದರೆ ಟೀಮ್ ಇಂಡಿಯಾ ವಿರುದ್ದ ಟಿ20 ಕ್ರಿಕೆಟ್ನಲ್ಲಿ ಯಾವುದೇ ತಂಡ ಇದುವರೆಗೆ ಶೇ. 50 ರಷ್ಟು ಪಂದ್ಯಗಳನ್ನು ಗೆದ್ದಿಲ್ಲ. ಅಂದರೆ ಭಾರತ ತಂಡವು ಬಹುತೇಕ ತಂಡಗಳ ವಿರುದ್ದ ಶೇ.50 ಕ್ಕೂ ಅಧಿಕ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾರುಪತ್ಯ ಮೆರೆದಿದೆ.
ಇದುವರೆಗೆ ಟಿ20 ಕ್ರಿಕೆಟ್ನಲ್ಲಿ ಭಾರತ ಪಾಕ್ 8 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಟೀಮ್ ಇಂಡಿಯಾ 7 ಪಂದ್ಯಗಳನ್ನು ಗೆದ್ದುಕೊಂಡಿರುವುದು ವಿಶೇಷ. ಇನ್ನು 8 ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಮೂಡಿಬಂದಿಲ್ಲ. ಅಂದರೆ ಪಾಕ್ ತಂಡವು ಇದುವರೆಗೆ ಟಿ20ಯಲ್ಲಿ ಭಾರತದ ವಿರುದ್ದ ಗೆದ್ದಿಲ್ಲ. ಇನ್ನು ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ದ ಐದು ಬಾರಿ ಆಡಿದ್ದು, ಐದರಲ್ಲೂ ಪಾಕ್ಗೆ ಸೋಲುಣಿಸಿದೆ.
ಇನ್ನು ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 16 ಟಿ20 ಪಂದ್ಯಗಳನ್ನು ಆಡಿದೆ. ಎರಡೂ ತಂಡಗಳೂ ತಲಾ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಾಗ್ಯೂ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಕೊನೆಯ ಪಂದ್ಯವನ್ನು ಗೆದ್ದು ಮೇಲುಗೈ ಹೊಂದಿದೆ. ಇದಲ್ಲದೇ, ಅಫ್ಘಾನಿಸ್ತಾನ ವಿರುದ್ಧ ಆಡಿದ 2 ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದಿದೆ.
ಇನ್ನು ಟೀಮ್ ಇಂಡಿಯಾ 13 ತಂಡಗಳ ವಿರುದ್ಧ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿದೆ. ಅದರಲ್ಲಿ 11 ತಂಡಗಳ ವಿರುದ್ಧ ಶೇ.50 ಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಭಾರತವು ಶ್ರೀಲಂಕಾ ವಿರುದ್ಧ ಆಡಿದ 22 ಪಂದ್ಯಗಳಲ್ಲಿ 14 ಪಂದ್ಯಗಳನ್ನು ಗೆದ್ದಿದೆ. ಇದರ ಹೊರತಾಗಿ, ಆಸ್ಟ್ರೇಲಿಯಾ ವಿರುದ್ದ 23 ರಲ್ಲಿ 13 , ಬಾಂಗ್ಲಾದೇಶ ವಿರುದ್ದ 11 ರಲ್ಲಿ 10, ಇಂಗ್ಲೆಂಡ್ ವಿರುದ್ದ 19 ರಲ್ಲಿ 10, ವೆಸ್ಟ್ ಇಂಡೀಸ್ ವಿರುದ್ದ 17 ರಲ್ಲಿ 10 ಹಾಗೂ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಜಿಂಬಾಬ್ವೆ, ಐರ್ಲೆಂಡ್, ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧವೂ ಹೆಚ್ಚಿನ ಗೆಲುವುಗಳನ್ನು ದಾಖಲಿಸಿದೆ. ಇನ್ನು ನ್ಯೂಜಿಲೆಂಡ್ ವಿರುದ್ದ ಸಮಬಲ ಸಾಧಿಸಿದೆ.
ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಕೇವಲ 2 ತಂಡಗಳು ಮಾತ್ರ 20 ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದಿವೆ. ಇದರಲ್ಲಿ ಟೀಮ್ ಇಂಡಿಯಾ ಕೂಡ ಸೇರಿದೆ. ಶ್ರೀಲಂಕಾ 22 ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಟೀಮ್ ಇಂಡಿಯಾ 20 ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ 19 ಪಂದ್ಯಗಳನ್ನು ಗೆದ್ದಿದೆ. ಇನ್ನು ದಕ್ಷಿಣ ಆಫ್ರಿಕಾ 18 ಮತ್ತು ವೆಸ್ಟ್ ಇಂಡೀಸ್ 16 ಪಂದ್ಯಗಳನ್ನು ಗೆದ್ದಿದೆ. ಇದಲ್ಲದೇ ಆಸ್ಟ್ರೇಲಿಯಾ 16 ಪಂದ್ಯಗಳನ್ನು ಗೆದ್ದಿದೆ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಲಾ 15 ಪಂದ್ಯಗಳನ್ನು ಗೆದ್ದಿವೆ. ಬೇರೆ ಯಾವುದೇ ತಂಡವು 10 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದಿಲ್ಲ.
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
(T20 World Cup: Team India one of the strongest team In T20 WC 2021)