ಅಜೇಯ ಕೊಹ್ಲಿ: ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಪಾಕ್​ಗೆ ನಡುಕ ಶುರು..!

T20 World Cup: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 3 ಪಂದ್ಯಗಳಲ್ಲಿ 169 ರನ್ ಗಳಿಸಿದ್ದಾರೆ.

ಅಜೇಯ ಕೊಹ್ಲಿ: ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಪಾಕ್​ಗೆ ನಡುಕ ಶುರು..!
Virat kohli

ಐಪಿಎಲ್ (IPL 2021) ಬೆನ್ನಲ್ಲೇ ಟಿ20 ವಿಶ್ವಕಪ್ (T20 World Cup 2021) ಶುರುವಾಗಲಿದೆ. ಅಕ್ಟೋಬರ್ 17 ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 23 ರಿಂದ ಸೂಪರ್-12 ಪಂದ್ಯಗಳಿಗೆ ಚಾಲನೆ ಸಿಗಲಿದೆ. ಇನ್ನು ಭಾರತ ಅಕ್ಟೋಬರ್ 24 ರಂದು ಪಾಕಿಸ್ತಾನ್ ವಿರುದ್ದದೊಂದಿಗೆ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಪಾಕ್​ಗೆ ವಿರಾಟ್ ಕೊಹ್ಲಿಯ ಚಿಂತೆ ಶುರುವಾಗಿದೆ. ಏಕೆಂದರೆ ಪಾಕಿಸ್ತಾನ್ ವಿರುದ್ದ ಕೊಹ್ಲಿ ಇದುವರೆಗೆ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್​​ನಲ್ಲಿ ಪಾಕ್ ತಂಡದ ಸ್ಟಾರ್​​ ಬೌಲರುಗಳಿಗೆ ಕೊಹ್ಲಿ ಬೆವರಿಳಿಸಿದ್ದಾರೆ. ಇದೀಗ ಹೊಸ ಆಟಗಾರರೊಂದಿಗೆ ವಿಶ್ವಕಪ್​ಗೆ ಸಜ್ಜಾಗುತ್ತಿರುವ ಪಾಕ್​ಗೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವುದೇ ದೊಡ್ಡ ಸವಾಲು.

ಏಕೆಂದರೆ ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಔಟಾಗಿಲ್ಲ ಎಂದರೆ ನಂಬಲೇಬೇಕು. ಅಷ್ಟೇ ಅಲ್ಲ, ಕೊಹ್ಲಿ ಆಡಿದ ಮೂರು ಪಂದ್ಯಗಳನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದಿದೆ. ಅಂದರೆ ಪ್ರತಿ ಬಾರಿಯೂ ಟೀಮ್ ಇಂಡಿಯಾ ನಾಯಕ ಎದುರಾಳಿ ತಂಡಕ್ಕೆ ತಕ್ಕ ಉತ್ತರ ನೀಡಿದ್ದಾರೆ.

ಟಿ20 ವರ್ಲ್ಡ್​ಕಪ್​ನಲ್ಲಿ ಪಾಕ್ ವಿರುದ್ದ ವಿರಾಟ್ ಕೊಹ್ಲಿ 78*, 36* ಮತ್ತು 55* ರನ್ ಬಾರಿಸಿದ್ದಾರೆ. ಆಡಿರುವ 3 ಇನಿಂಗ್ಸ್​ನಲ್ಲೂ ಅಜೇಯರಾಗಿ ಉಳಿದಿದ್ದರು. ಅದರಲ್ಲಿ 2 ಬಾರಿ ಅರ್ಧಶತಕ ಪೂರೈಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2012 ರಲ್ಲಿ ಕೊಲಂಬೊದಲ್ಲಿ ಪಾಕ್ ವಿರುದ್ದ ಟಿ20ಯಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಮೊದಲು ಬ್ಯಾಟ್ ಮಾಡಿ ಕೇವಲ 128 ರನ್ ರನ್​ಗಳ ಗುರಿ ನೀಡಿತ್ತು. ಟೀಮ್ ಇಂಡಿಯಾ 17 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಈ ಸಾಧಾರಣ ಗುರಿಯನ್ನು ಮುಟ್ಟಿತು. ಈ ವೇಳೆ ಕೊಹ್ಲಿ 61 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 78 ರನ್ ಗಳಿಸಿ ಪಂದ್ಯಶ್ರೇಷ್ಠರಾಗಿದ್ದರು.

ಇನ್ನು 2014 ರಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡವು ಮೊದಲು ಬ್ಯಾಟ್ ಮಾಡಿ 130 ರನ್ ಗಳಿಸಿತು. ಟೀಮ್ ಇಂಡಿಯಾ 18.3 ಓವರ್ ಗಳಲ್ಲಿ 3 ವಿಕೆಟ್ ನಷ್ಟದೊಂದಿಗೆ ಗುರಿ ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 36 ರನ್ ಗಳಿಸಿ ಅಜೇಯರಾಗಿ ಉಳಿದರು. ಹಾಗೆಯೇ 2016 ರಲ್ಲಿ ಕೋಲ್ಕತ್ತಾದ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು (18 ಓವರ್) . ಈ ಗುರಿಯನ್ನು ಟೀಮ್ ಇಂಡಿಯಾ 15.5 ಓವರ್ ಗಳಲ್ಲಿ ಚೇಸ್ ಮಾಡಿ ಗೆಲುವು ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲೂ ಕೊಹ್ಲಿ 55 ರನ್ ಗಳಿಸಿ ಅಜೇಯರಾಗಿ ಉಳಿದು ಪಂದ್ಯಶ್ರೇಷ್ಠರಾದರು. ಎಲ್ಲಾ ಮೂರು ಪಂದ್ಯಗಳಲ್ಲಿ ಕೊಹ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸ್ಕೋರ್ ಗಳಿಸಿದ ಬ್ಯಾಟರ್ ಆಗಿದ್ದರು ಎಂಬುದು ವಿಶೇಷ.

ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 3 ಪಂದ್ಯಗಳಲ್ಲಿ 169 ರನ್ ಗಳಿಸಿದ್ದಾರೆ. ಇದಾಗ್ಯೂ ಟಿ20ಯಲ್ಲಿ ಪಾಕ್ ವಿರುದ್ದ ಯಾವ ಭಾರತೀಯ ಆಟಗಾರನೂ 100 ರ ಗಡಿ ದಾಟಿಲ್ಲ. ಇನ್ನು ಗೌತಮ್ ಗಂಭೀರ್ 75 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಉಭಯ ತಂಡಗಳು ಟಿ20ಯಲ್ಲಿ 5 ಬಾರಿ ಮುಖಾಮುಖಿಯಾಗಿದ್ದು, ಐದರಲ್ಲೂ ಟೀಮ್ ಇಂಡಿಯಾ ಗೆದ್ದಿದೆ. ಅದರಲ್ಲಿ ಮೂರು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ವಿರಾಟ್ ಕೊಹ್ಲಿ. ಹೀಗಾಗಿ ಪಾಕ್​ ಬೌಲರುಗಳಿಗೆ ಪಂದ್ಯ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿಯ ಚಿಂತೆ ಶುರುವಾಗಿದೆ.

 

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

 

(virat kohli yet to get out against pakistan in t20 world cup)

Read Full Article

Click on your DTH Provider to Add TV9 Kannada