ಕರ್ನಾಟಕದ ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ (Robin Uthappa) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬುಧವಾರ ಟ್ವೀಟರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಮೂಲಕ 20 ವರ್ಷಗಳ ತಮ್ಮ ಕ್ರಿಕೆಟ್‌ಗೆ ಗುಡ್ ಬೈ ಹೇಳಿದರು. 2006 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮೂಲಕ ಉತ್ತಪ್ಪ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದ ಉತ್ತಪ್ಪ 96 ಎಸೆತಗಳಲ್ಲಿ 86 ರನ್ ಬಾರಿಸಿ ಮಿಂಚಿದ್ದರು.
ಅಷ್ಟೇ ಅಲ್ಲದೆ 2007 ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ವಿಶೇಷ ಎಂದರೆ ಅಂದು ಪಾಕಿಸ್ತಾನ್ ವಿರುದ್ಧ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸ್ನೊಂದಿಗೆ 50 ರನ್ ಬಾರಿಸಿ ಮಿಂಚಿದ್ದರು. ಈ ಅರ್ಧಶತಕ ರಾಬಿನ್ ಉತ್ತಪ್ಪ ಹೆಸರಿನಲ್ಲಿರುವ ವಿಶೇಷ ದಾಖಲೆ ಕೂಡ ಹೌದು. ಅಂದರೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಮೊದಲ ಅರ್ಧಶತಕ ಬಾರಿಸಿದ ದಾಖಲೆ ಉತ್ತಪ್ಪ ಹೆಸರಿನಲ್ಲಿದೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ರಾಬಿನ್ ಉತ್ತಪ್ಪ ಟೀಮ್ ಇಂಡಿಯಾ ಪರ ದಾಖಲೆ ಬರೆದ ದಿನವೇ ವಿದಾಯ ಕೂಡ ಹೇಳಿದ್ದಾರೆ. ಅಂದರೆ 2007 ರ ಸೆಪ್ಟೆಂಬರ್ 14 ರಂದು ಪಾಕಿಸ್ತಾನ್ ವಿರುದ್ದ ಉತ್ತಪ್ಪ ಅರ್ಧಶತಕ ಬಾರಿಸಿ ಟೀಮ್ ಇಂಡಿಯಾ ಚೊಚ್ಚಲ ಹಾಫ್ ಸೆಂಚುರಿ ಸಿಡಿಸಿದ ದಾಖಲೆ ಬರೆದಿದ್ದರು. ಇದೀಗ 2022, ಸೆಪ್ಟೆಂಬರ್ 14 ರಂದೇ ಕ್ರಿಕೆಟ್ ಕೆರಿಯರ್ಗೆ ವಿದಾಯ ಹೇಳಿದ್ದಾರೆ.
ಇನ್ನು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ನಡುವೆ ಉತ್ತಪ್ಪ ಐಪಿಎಲ್ನಲ್ಲೂ ಸಹ ಮಿಂಚಿದ್ದರು. ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ್ದ ಉತ್ತಪ್ಪ, ಆ ಬಳಿಕ ಆರ್ಸಿಬಿ, ಪುಣೆ ವಾರಿಯರ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಹಾಗೂ ಸಿಎಸ್ಕೆ ಪರ ಆಡಿದ್ದರು. ವಿಶೇಷ ಎಂದರೆ ಕೆಕೆಆರ್ 2014 ರಲ್ಲಿ ಚಾಂಪಿಯನ್ ಆಗಿದ್ದ ವೇಳೆ ಉತ್ತಪ್ಪ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು.
ಕಳೆದ ಸೀಸನ್ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ರಾಬಿನ್ ಉತ್ತಪ್ಪ ಸ್ಪೋಟಕ ಇನಿಂಗ್ಸ್ ಮೂಲಕ ಗಮನ ಸೆಳೆದಿದ್ದರು. ಇದಾಗ್ಯೂ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ನೀಡುವ ಮೂಲಕ ಕೊಡಗಿನ ಕುವರ ಅಚ್ಚರಿ ಮೂಡಿಸಿದ್ದಾರೆ.