ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಹೊಂದಿರುವ ಭಾರತದಲ್ಲಿ ಮತ್ತೊಂದು ಬೃಹತ್ ಕ್ರೀಡಾಂಗಣ ತಲೆ ಎತ್ತಲಿದೆ. ಅದು ಸಹ ನಮ್ಮ ರಾಜ್ಯದ ಪಕ್ಕದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಂಬುದು ವಿಶೇಷ. ಹೌದು, ದೇಶದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ತಮಿಳುನಾಡು ರಾಜ್ಯ ಸರ್ಕಾರ ಟೆಂಡರ್ ಕರೆದಿದ್ದು , ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಆಸನ ಸಾಮರ್ಥ್ಯದ ಸೌಲಭ್ಯವನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ತಮಿಳುನಾಡಿನಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಈ ವರ್ಷದ ಏಪ್ರಿಲ್‌ನಲ್ಲಿ ರಾಜ್ಯದ ಸಿಎಂ ಎಂಕೆ ಸ್ಟಾಲಿನ್ ಘೋಷಿಸಿದ್ದರು. ಇದೀಗ ಅದರ ಮೊದಲ ಹೆಜ್ಜೆ ಎಂಬಂತೆ ಸ್ಟೇಡಿಯಂ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ತಮಿಳುನಾಡು ರಾಜ್ಯ ಸರ್ಕಾರ ಟೆಂಡರ್ ಕರೆದಿದೆ. ಈ ಟೆಂಡರ್ ಬಳಿಕ ಸಂಪೂರ್ಣ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ನೂತನ ಕ್ರಿಕೆಟ್ ಸ್ಟೇಡಿಯಂಗಾಗಿ ಕೊಯಮತ್ತೂರು ನಗರದಿಂದ 16 ಕಿಮೀ ದೂರದಲ್ಲಿ ಸ್ಥಳವನ್ನು ಮೀಸಲಿಡಲಾಗಿದೆ. ಈ ಸ್ಥಳವು ಸೇಲಂ ಮತ್ತು ಕೊಚ್ಚಿಯನ್ನು ಸಂಪರ್ಕಿಸುವ NH 544 ಹೈವೇ ಪಕ್ಕದಲ್ಲಿರುವುದು ವಿಶೇಷ. ರಾಜ್ಯ ಕಾರಾಗೃಹ ಇಲಾಖೆಯು ಅಲ್ಲಿ 200 ಎಕರೆ ಭೂಮಿಯನ್ನು ಹೊಂದಿದ್ದು, ಡಿಪಿಆರ್ ಸಿದ್ಧಪಡಿಸಿದ ನಂತರ ಅದರಲ್ಲಿ 198 ಎಕರೆಯನ್ನು ಕ್ರೀಡಾಂಗಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ತಮಿಳುನಾಡು ಸರ್ಕಾರ ಭಾರತದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಮುಂದಾಗಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇರುವುದು ಅಹಮದಾಬಾದ್ನಲ್ಲಿ. ನರೇಂದ್ರ ಮೋದಿ ಸ್ಟೇಡಿಯಂ ಹೆಸರಿನಲ್ಲಿ ವಿಶ್ವ ಗಮನ ಸೆಳೆದಿರುವ ಈ ವಿಶೇಷತೆಗಳನ್ನು ಗಮನಿಸುವುದಾದರೆ…
ಇದನ್ನೂ ಓದಿ: Dinesh Karthik: ರಾಯಲ್ಸ್ ತಂಡಕ್ಕೆ ಡಿಕೆ ಎಂಟ್ರಿ..!
ಇದೀಗ ತಮಿಳುನಾಡು ಸರ್ಕಾರವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ನೂತನ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಮುಂದಾಗಿದೆ. ಅಲ್ಲದೆ ಇದು ದೇಶದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರಲಿದೆ ಎಂದು ಘೋಷಿಸಿದ್ದಾರೆ. ಅಂದರೆ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಮೀರಿಸಿ ಕೊಯಮತ್ತೂರಿನಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತುವುದನ್ನು ಎದುರು ನೋಡಬಹುದು.