ಕ್ರಿಕೆಟ್ ಪ್ರಿಯರಿಗಿಂದು ಹಬ್ಬವೋ ಹಬ್ಬ. ಒಂದು ಕಡೆ ಯುಗಾದಿ ಹಬ್ಬದ ರಂಗು ಜೋರಾಗಿ ನಡೆಯುತ್ತಿದ್ದರೆ ಇತ್ತ ಐಪಿಎಲ್‌ನಲ್ಲಿ (IPL 2022) ಎರಡು ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (MI vs RR) ಮುಖಾಮುಖಿ ಆಗಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಜರುಗಲಿರುವ ದ್ವಿತೀಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ರಿಷಭ್ ಪಂತ್ ಅವರ ಡೆಲ್ಲಿ ಕ್ಯಾಪಿಟಲ್ಸ್ (GT vs DC) ಜೊತೆಗೆ ಕಾದಾಟ ನಡೆಸಲಿದೆ. ಎಲ್ಲ ತಂಡಗಳಿಗೆ ಈ ಪಂದ್ಯ ಬಹುಮುಖ್ಯವಾಗಿದ್ದು ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.
ಮುಂಬೈ vs ರಾಜಸ್ಥಾನ್:
ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ 177 ರನ್ ಪೇರಿಸಿಯೂ ಮುಂಬೈ 4 ವಿಕೆಟ್‌ಗಳಿಂದ ಸೋತಿತ್ತು. ಬ್ಯಾಟಿಂಗ್ ಕ್ಲಿಕ್ ಆದರೂ ಬೌಲಿಂಗ್ ಕೈಕೊಟ್ಟಿತ್ತು. ಜಸ್‌ಪ್ರೀತ್ ಬೂಮ್ರಾ, ಡ್ಯಾನಿಲ್ ಸ್ಯಾಮ್ಸ್ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಬಾಸಿಲ್ ಥಂಪಿ ಮತ್ತು ಮುರುಗನ್ ಅಶ್ವಿನ್ ಯಶಸ್ವಿಯಾಗಿದ್ದರೂ ತಂಡದ ಗೆಲುವು ಸಾಧ್ಯವಾಗಿರಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಹೆಚ್ಚು ಚಿಂತೆಯಿಲ್ಲ. ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಉತ್ತಮ ಲಯದಲ್ಲಿದ್ಧಾರೆ. ಸೂರ್ಯಕುಮಾರ್ ಯಾದವ್ ಮರಳಿರುವುದು ತಂಡದ ಬಲ ಹೆಚ್ಚಿಸಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಲೈನ್‌ಅಪ್ ಭಾರೀ ಬಲಿಷ್ಠವಾಗಿದೆ. ಹೈದರಾಬಾದ್ ವಿರುದ್ಧ ಬರೋಬ್ಬರಿ 210 ರನ್ ಪೇರಿಸಿತ್ತು. ನಾಯಕ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಿಡಿದು ನಿಂತಿದ್ದರು. ಇವರನ್ನು ನಿಯಂತ್ರಿಸಲು ಮುಂಬೈಯ ಸಾಮಾನ್ಯ ಬೌಲಿಂಗ್ ಪಡೆಯಿಂದ ಸಾಧ್ಯವೇ? ಇದು ಪ್ರಶ್ನೆ. ವಿಂಡೀಸ್ ಆಟಗಾರ ಶಿಮ್ರೋನ್ ಹೆಟ್ಮೆಯರ್ ಕೂಡ ಅಬ್ಬರಿಸಿದ್ದರು. ಐಪಿಎಲ್‌ನ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಮಾರಕವಾಗಿ ಗೋಚರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಇದುವರೆಗೂ ಒಟ್ಟು 25 ಮುಖಾಮುಖಿ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಮುಖಾಮುಖಿ ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.
ಪಂದ್ಯ ಆರಂಭ: ಸಂಜೆ 3:30ಕ್ಕೆ
ಗುಜರಾತ್ vs ಡೆಲ್ಲಿ:
ಇದು ಗೆದ್ದವರ ನಡುವಿನ ಕದನ. ಮೊದಲ ಪಂದ್ಯದಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೊಸ ತಂಡ ಗುಜರಾತ್ ಟೈಟಾನ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ, ರಿಷಭ್ ಪಂತ್, ಲಲಿತ್ ಯಾದವ್, ರೋವ್ಮನ್ ಪಾಲ್, ಅಲ್‌ರೌಂಡರ್ ಅಕ್ಷರ್ ಪಟೇಲ್, ಮನದೀಪ್ ಸಿಂಗ್, ಶಾರ್ದೂಲ್ ಠಾಕೂರ್ ಅವರು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಅಲ್ಲದೆ ಮೂರು ದಿನಗಳ ಕ್ವಾರಂಟೈನ್ ಮುಗಿಸಿರುವ ಲುಂಗಿ ಗಿಡಿ, ಮುಸ್ತಫಿಜುರ್ ರೆಹಮಾನ್ ಮತ್ತು ಸರ್ಫರಾಜ್ ಖಾನ್ ಕೂಡ ಕಣಕ್ಕಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್ ತಂಡವೂ ಗೆಲುವಿನ ಆರಂಭದಿಂದ ಆತ್ಮವಿಶ್ವಾಸದಲ್ಲಿದೆ. ತಂಡದ ಸ್ಪಿನ್ನರ್ ರಶೀದ್ ಖಾನ್, ಕನ್ನಡಿಗ ಬ್ಯಾಟರ್ ಅಭಿನವ್ ಸದಾರಂಗಿನಿ, ರಾಹುಲ್ ತೆವಾಟಿಯಾ, ಶುಭಮನ್ ಗಿಲ್, ಬೌಲರ್ ಮೊಹಮ್ಮದ್ ಶಮಿ ಅಮೋಘ ಲಯದಲ್ಲಿದ್ದಾರೆ. ಡೆಲ್ಲಿ ತಂಡಕ್ಕೆ ಕಠಿಣ ಪೈಪೋಟಿಯೊಡ್ಡಲು ಸಿದ್ಧರಾಗಿದ್ಧಾರೆ.
ಪಂದ್ಯ ಆರಂಭ: ಸಂಜೆ 7:30ಕ್ಕೆ
Andre Russell: ಸಿಕ್ಸರ್ ಮ್ಯಾನ್ ರಸೆಲ್ ಅವರ ಒಂದೊಂದು ಸಿಕ್ಸ್ ಹೇಗಿತ್ತು ಗೊತ್ತೇ?: ಇಲ್ಲಿದೆ ನೋಡಿ