12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2022) ನಡೆಯಲಿರುವ 12ನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ (SRH vs LSG) ಮುಖಾಮುಖಿ ಆಗಲಿದೆ. ಹೈದರಾಬಾದ್ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡಿದ್ದರೆ ಇತ್ತ ಎಲ್ಎಸ್ಜಿ ಆಡಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಒಂದರಲ್ಲಿ ಸೋಲುಂಡಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಮುಂಬೈನ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ. ಹೈದರಾಬಾದ್ಗೆ ಹೋಲಿಸಿದರೆ ಲಖನೌ ತಂಡ ಬಲಿಷ್ಠವಾಗಿದೆ. ಎಸ್ಆರ್ಹೆಚ್ ತಂಡದಲ್ಲಿ ಸ್ಟಾರ್ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಇತ್ತ ರಾಹುಲ್ (KL Rahul) ಪಡೆಯಲ್ಲಿ ಬ್ಯಾಟ್ಸ್ಮನ್ಗಳು ಕೈಕೊಟ್ಟರೂ ಬೌಲರ್ಗಳು ಪಂದ್ಯ ಗೆಲ್ಲಿಸಿ ಕೊಡುವ ಸಾಮರ್ಥ್ಯ ಹೊಂದಿದ್ದಾರೆ.
ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ 61 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್ ಎದುರು ಮುಗ್ಗರಿಸಿತ್ತು. ತಂಡದ ಬ್ಯಾಟಿಂಗ್- ಬೌಲಿಂಗ್ ವಿಭಾಗಗಳೆರಡೂ ಕೈಕೊಟ್ಟಿದ್ದವು. ರಾಜಸ್ಥಾನ್‌ಗೆ 210 ರನ್ ಬಿಟ್ಟುಕೊಟ್ಟ ಬಳಿಕ 149 ರನ್ ಗಳಿಸಿ ಶರಣಾಗಿತ್ತು. ಸನ್‌ರೈಸರ್ಸ್ ಅಗ್ರ ಸರದಿಯ ಬ್ಯಾಟಿಂಗ್‌ನಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಾದ ಅಗತ್ಯವಿದೆ. ಸ್ವತಃ ಆರಂಭಿಕನಾಗಿ ಇಳಿಯುವ ಅನಿವಾರ್ಯತೆಗೆ ಸಿಲುಕಿದ ನಾಯಕ ಕೇನ್ ವಿಲಿಯಮ್ಸನ್, ಇವರ ಜತೆಗಾರ ಅಭಿಷೇಕ್ ಶರ್ಮ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ ಬ್ಯಾಟ್‌ಗಳು ಮಾತಾಡಬೇಕಿವೆ. ವೇಗಿ ಭುವನೇಶ್ವರ್ ಕುಮಾರ್, ರೊಮಾರಿಯೊ ಶೆರ್ಡ್, ಉಮ್ರಾನ್ ಮಲಿಕ್, ಟಿ.ನಟರಾಜನ್, ವಾಷಿಂಗ್ಟನ್ ಸುಂದರ್ ಒಳಗೊಂಡ ಅನುಭವಿ ಬೌಲಿಂಗ್ ಪಡೆಯೇ ದುಬಾರಿಯಾಗಿತ್ತು. ಹೀಗಾಗಿ ಬೌಲಿಂಗ್ನಲ್ಲಿ ಸುಧಾರಿಸಬೇಕಿದೆ.
ಇತ್ತ ಅಮೋಘ ಲಯದಲ್ಲಿರುವ ಲಖನೌ ತಂಡದ ನಾಯಕ ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್, ಎವಿನ್ ಲೂಯಿಸ್ ಮತ್ತು ಆಯುಷ್ ಬದೋನಿ ಅವರಿಗೆ ತಡೆಯೊಡ್ಡುವ ಸವಾಲು ಹೈದರಾಬಾದ್ ಬೌಲರ್‌ಗಳ ಮುಂದಿದೆ. ಕನ್ನಡಿಗ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಇದುವರೆಗೂ ಸ್ಫೋಟಿಸಿಲ್ಲ. ಕೃನಾಲ್ ಪಾಂಡ್ಯ ಸಿಕ್ಕ ಅವಕಾಶ ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಜೇಸನ್ ಹೋಲ್ಡರ್ ಸೇರ್ಪಡೆ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದೆ. ಲಖನೌದ ಬೌಲಿಂಗ್ ಎರಡೂ ಪಂದ್ಯಗಳಲ್ಲಿ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ರವಿ ಬಿಷ್ಣೋಯಿ ಮಾತ್ರವೇ ಯಶಸ್ಸು ಕಂಡಿದ್ದರು. ಸ್ಟ್ರೆಕ್ ಬೌಲರ್‌ಗಳಾದ ಆವೇಶ್ ಖಾನ್, ದುಷ್ಮಂತ ಚಮೀರ ಪವರ್ ಪ್ಲೇ ಅವಧಿಯಲ್ಲಿ ನಿಯಂತ್ರಣ ಸಾಧಿಸಬೇಕಾದುದು ಅಗತ್ಯವಿದೆ. ಕೃಣಾಲ್ ಪಾಂಡ್ಯ, ಆ್ಯಂಡ್ರೊ ಟೈ ದುಬಾರಿಯಾಗಿದ್ದರು. ಲಕ್ನೋ ಬೌಲಿಂಗ್ ವಿಭಾಗದಲ್ಲಿ ಇನ್ನೂ ಉತ್ತಮ ಆಯ್ಕೆಗಳಿವೆ.
ಎಸ್ಆರ್ಹೆಚ್ ಸಂಭಾವ್ಯ ಪ್ಲೇಯಿಂಗ್ XI: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಏಡೆನ್ ಮರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯಾ ಶೆಫರ್ಡ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಶ್ರೇಯಸ್ ಗೋಪಾಲ್.
ಲಖನೌ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಎವಿನ್ ಲೂಯಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಆಂಡ್ರ್ಯೂ ಟೈ, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್.
CSK vs PBKS: ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್ಕೆ ಸಜ್ಜು?