IND vs ENG: ‘ಭಾರತ ಕಂಡ ಅತ್ಯಂತ ಕೆಟ್ಟ ಕೋಚ್’; ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ

Gautam Gambhir: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಯ್ಕೆಯ ಬಗ್ಗೆ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಗೌತಮ್ ಗಂಭೀರ್ ಅವರ ಕೋಚಿಂಗ್ ಮತ್ತು ಪ್ಲೇಯಿಂಗ್ 11 ಆಯ್ಕೆಯನ್ನು ಟೀಕಿಸುತ್ತಿದ್ದಾರೆ. ಬುಮ್ರಾ ಅವರ ಅನುಪಸ್ಥಿತಿ, ಸಾಯಿ ಸುದರ್ಶನ್ ಅವರನ್ನು ತೆಗೆದುಹಾಕುವುದು ಮತ್ತು ಅರ್ಶ್‌ದೀಪ್ ಸಿಂಗ್‌ಗೆ ಅವಕಾಶ ನೀಡದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗಂಭೀರ್ ಅವರನ್ನು ಕೆಟ್ಟ ಕೋಚ್ ಎಂದು ಕರೆಯುವಷ್ಟು ಅಭಿಮಾನಿಗಳು ಕೋಪಗೊಂಡಿದ್ದಾರೆ.

IND vs ENG: ‘ಭಾರತ ಕಂಡ ಅತ್ಯಂತ ಕೆಟ್ಟ ಕೋಚ್’; ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ
Gautam Gambir

Updated on: Jul 02, 2025 | 6:29 PM

ಎಡ್ಜ್‌ಬಾಸ್ಟನ್ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ವಿರುದ್ಧ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ವಾಸ್ತವವಾಗಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸವನ್ನು ಉತ್ತಮ ರೀತಿಯಲ್ಲಿ ಆರಂಭಿಸಿಲ್ಲ. ಲೀಡ್ಸ್‌ನಲ್ಲಿ ಗೆಲ್ಲುವ ಪಂದ್ಯದಲ್ಲಿ ಭಾರತ ಸೋತಿತ್ತು. ಇದಕ್ಕೆ ಪ್ರಮುಖ ಕಾರಣ, ತಂಡದ ಫೀಲ್ಡಿಂಗ್ ಹಾಗೂ ಬೌಲಿಂಗ್. ಅದರಲ್ಲೂ ಬೌಲಿಂಗ್​ನಲ್ಲಿ ಬುಮ್ರಾರನ್ನು ಹೊರತುಪಡಿಸಿ ಮತ್ತ್ಯಾವ ವೇಗಿಯೂ ಪರಿಣಾಮಕಾರಿಯಾಗಲಿಲ್ಲ. ಹೀಗಾಗಿ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭ್​ಮನ್ ಗಿಲ್ (Shubman Gill) ಮೇಲೆ ಅಭಿಮಾನಿಗಳು ಗರಂ ಆಗಿದ್ದರು. ಇದೀಗ ಎರಡನೇ ಟೆಸ್ಟ್ ಆರಂಭದ ಬೆನ್ನಲ್ಲೇ ತಂಡದ ಪ್ಲೇಯಿಂಗ್ 11 ನೋಡಿದ ಅಭಿಮಾನಿಗಳು ಗಂಭಿರ್ ವಿರುದ್ದ ಹರಿಹಾಯ್ದಿದ್ದಾರೆ.

ವಾಸ್ತವವಾಗಿ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್ ಟೀಂ ಇಂಡಿಯಾದ ಪ್ಲೇಯಿಂಗ್ 11 ನೋಡಿ ಕ್ರಿಕೆಟ್ ತಜ್ಞರಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಅತೃಪ್ತರಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ಗಂಭೀರ್ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಕೋಚ್ ಎಂದು ಜರಿದಿದ್ದಾರೆ. ಗಂಭೀರ್ ವಿರುದ್ಧ ಫ್ಯಾನ್ಸ್ ಗರಂ ಆಗಲು ಕಾರಣವೆನೆಂದರೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿದಿದ್ದು, ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರನ್ನು ಒಂದು ಪಂದ್ಯದ ನಂತರ ತಂಡದಿಂದ ಕೈಬಿಡಲಾಗಿದೆ. ಅಲ್ಲದೆ ಬುಮ್ರಾ ಬದಲಿಗೆ ಅರ್ಶ್‌ದೀಪ್ ಸಿಂಗ್‌ಗೆ ಏಕೆ ಅವಕಾಶ ನೀಡಲಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

ಅರ್ಶ್‌ದೀಪ್ ಸಿಂಗ್‌ಗೆ ಅವಕಾಶವಿಲ್ಲ

ಅರ್ಶ್‌ದೀಪ್ ಸಿಂಗ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸದಿದ್ದಕ್ಕೆ ಅಭಿಮಾನಿಗಳು ತುಂಬಾ ಕೋಪಗೊಂಡಿದ್ದಾರೆ. ಅಭಿಮಾನಿಗಳ ಪ್ರಕಾರ, ಅರ್ಶ್‌ದೀಪ್ ಸ್ವಿಂಗ್ ಬೌಲರ್ ಆಗಿರುವುದರಿಂದ ಈ ಪಂದ್ಯದಲ್ಲಿ ಆಡಲು ಅರ್ಹರಾಗಿದ್ದರು. ಆದಾಗ್ಯೂ ಅವರಿಗೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆಯ ವಿಷಯದಿಂದ ಕೋಪಗೊಂಡ ಅಭಿಮಾನಿಯೊಬ್ಬರು ಗೌತಮ್ ಗಂಭೀರ್ ಅವರನ್ನು ಭಾರತದ ಕೆಟ್ಟ ಕೋಚ್ ಎಂದೂ ಜರಿದಿದ್ದಾರೆ. ಕುಲ್ದೀಪ್ ಯಾದವ್‌ಗೂ ಅವಕಾಶ ಸಿಗಬೇಕಿತ್ತು ಎಂದಿರುವ ಅಭಿಮಾನಿ, ಸಾಯಿ ಸುದರ್ಶನ್ ಅವರನ್ನು ಕೈಬಿಟ್ಟ ವಿಷಯದಲ್ಲೂ ಗೌತಮ್ ಗಂಭೀರ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಗಂಭೀರ್​ ಕೋಚಿಂಗ್​ನಲ್ಲಿ ಕಳಪೆ ಪ್ರದರ್ಶನ

ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡ ಟೆಸ್ಟ್ ಪಂದ್ಯಗಳಲ್ಲಿ ನಿರಸ ಪ್ರದರ್ಶನ ನೀಡಿದೆ. ಅವರ ಕೋಚಿಂಗ್​ನಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಅವರ ತರಬೇತಿಯಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಸರಣಿಯನ್ನು ಕಳೆದುಕೊಂಡಿತು. ಇದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ಸೋತಿತು. ಈ ಸೋಲಿನಿಂದಾಗಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದಲೂ ಹೊರಬಿದ್ದಿತು. ಈಗ ಇಂಗ್ಲೆಂಡ್‌ನಲ್ಲೂ ಅದೇ ಫಲಿತಾಂಶ ಬಂದರೆ, ಗೌತಮ್ ಗಂಭೀರ್ ತಂಡದಿಂದ ಹೊರಹೋಗುವುದು ಖಚಿತ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ