ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನದಿಂದ ಹೈರಾಣಾಗಿರುವ ಟೀಂ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ತಂಡದ ನಾಯಕ ರೋಹಿತ್ ಶರ್ಮಾರನ್ನೇ ತಂಡದಿಂದ ಕೈಬಿಡಲಾಗಿದೆ. ಇದೀಗ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ಗೂ ಮುಖ್ಯ ಕೋಚ್ ಹುದ್ದೆಯಿಂದ ಗೇಟ್ ಪಾಸ್ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ನಂತರ ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕಬಹುದು. ಗೌತಮ್ ಗಂಭೀರ್ ಬದಲಿಗೆ ವಿವಿಎಸ್ ಲಕ್ಷ್ಮಣ್ ತಂಡದ ಜವಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ವಿವಿಎಸ್ ಲಕ್ಷ್ಮಣ್ ತಂಡದ ಮುಖ್ಯ ಕೋಚ್ ಆಗಲಿದ್ದು, ಗೌತಮ್ ಗಂಭೀರ್ ಅವರನ್ನು ಟೆಸ್ಟ್ ತಂಡದ ಕೋಚಿಂಗ್‌ನಿಂದ ತೆಗೆದುಹಾಕುವ ಚಿಂತನೆಯಲ್ಲಿ ಬಿಸಿಸಿಐ ಇದೇ ಎಂದು ಹೇಳಲಾಗುತ್ತಿದೆ. ಅಂದರೆ ಗಂಭೀರ್ ಅವರನ್ನು ಸೀಮಿತ ಓವರ್‌ಗಳ ಸ್ವರೂಪಕ್ಕೆ ಮುಖ್ಯ ಕೋಚ್ ಆಗಿ ಮುಂದುವರೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ತಂಡಕ್ಕೆ ಸೇರಿದಾಗಿನಿಂದ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿದ್ದಾರೆ. ಅವರ ತರಬೇತಿಯಲ್ಲಿ ತಂಡದ ಪ್ರದರ್ಶನ ಸುಧಾರಿಸುವ ಬದಲು ಸಾಕಷ್ಟು ಹದಗೆಟ್ಟಿದೆ. ಮೊದಲಿಗೆ, ಅವರ ಕೋಚಿಂಗ್‌ನಲ್ಲಿ ತಂಡವು ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡಿತು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 0-3 ಅಂತರದ ಸೋಲು ಕಂಡಿತ್ತು. ಇದೀಗ ಬಾರ್ಡರ್ ಗವಾಸ್ಕರ್ ಟ್ರೋಫಿ ಕೂಡ ಕೈ ತಪ್ಪಲಿದೆ. ಇಷ್ಟೇ ಅಲ್ಲ, ಗಂಭೀರ್ ಮತ್ತು ರೋಹಿತ್ ಶರ್ಮಾ ನಡುವೆ ವೈಮನಸು ಮೂಡಿದೆ ಎಂಬ ವರದಿಗಳಿವೆ. ಇದಲ್ಲದೆ ಅನೇಕ ಆಟಗಾರರು ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯನ್ನು ಇಷ್ಟಪಡುತ್ತಿಲ್ಲ ಎಂತಲೂ ಹೇಳಲಾಗುತ್ತಿದೆ.
ಇದೆಲ್ಲದರ ನಡುವೆ ರೋಹಿತ್ ಶರ್ಮಾ ಅವರನ್ನೂ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ರೋಹಿತ್ ನಾಯಕರಾಗಿದ್ದರೂ ಸಿಡ್ನಿ ಟೆಸ್ಟ್‌ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಆಯ್ಕೆಯಾಗಿಲ್ಲ. ರೋಹಿತ್ ಅವರೇ ವಿಶ್ರಾಂತಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದು ಎಷ್ಟು ಸತ್ಯ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ.
ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಂ ಇಂಡಿಯಾ ಈಗ ಜೂನ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಭಾರತ ತಂಡ ಐದು ಟೆಸ್ಟ್‌ಗಳ ಸರಣಿಗಾಗಿ ಇಂಗ್ಲೆಂಡ್‌ಗೆ ತೆರಳಲಿದೆ. ಇದೇ ಸರಣಿಯಿಂದ ಟೀಂ ಇಂಡಿಯಾ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನವನ್ನು ಆರಂಭಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಲಕ್ಷ್ಮಣ್ ಅವರಿಗೆ ಟೆಸ್ಟ್ ತಂಡದ ಕೋಚಿಂಗ್ ನೀಡುವುದು ಖಚಿತ ಎಂದು ಪರಿಗಣಿಸಲಾಗಿದೆ. ಲಕ್ಷ್ಮಣ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ಇದರ ಜೊತೆಗೆ ಅವರು ಆಗಾಗ್ಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಲಕ್ಷ್ಮಣ್ ಶೀಘ್ರದಲ್ಲೇ ಮುಖ್ಯ ಕೋಚ್ ಹುದ್ದೇಗರಬಹುದು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ