
ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ (Team India ) ಈ ರೀತಿಯ ಪ್ರದರ್ಶನ ನೀಡುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಹಾಲಿ ಟಿ20 ಚಾಂಪಿಯನ್ ಎನಿಸಿಕೊಂಡಿರುವ ಭಾರತ ತಂಡದಲ್ಲಿ ಟಿ20 ಸ್ಪೆಷಲಿಸ್ಟ್ಗಳೇ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಐರ್ಲೆಂಡ್ ತಂಡವನ್ನು ಟೀಂ ಇಂಡಿಯಾ ಸುಲಭವಾಗಿ ಮಣಿಸುತ್ತದೆ ಮತ್ತು ಇಂಗ್ಲೆಂಡ್ ವಿರುದ್ಧವೂ ತನ್ನ ಅಜೇಯ ಓಟವನ್ನು ಮುಂದುವರೆಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಎರಡು ಸರಣಿಗಳಲ್ಲಿ ಟೀಂ ಇಂಡಿಯಾದ ಬಂಡವಾಳ ಬಟಾಬಯಲಾಗಿದೆ. ಐಪಿಎಲ್‌ನಲ್ಲಿ ಮಿಂಚಿದವರಿಗೆ ವಿದೇಶಿ ನೆಲದಲ್ಲಿ ತೀವ್ರ ಮುಖಭಂಗವಾಗಿದೆ. ಇದರ ಪರಿಣಾಮವಾಗಿ ಟೀಂ ಇಂಡಿಯಾ ಕೂಡ ಬರೋಬ್ಬರಿ 14 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
ವಾಸ್ತವವಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟಿ20 ಸರಣಿ 2012 ರ ಡಿಸೆಂಬರ್ನಿಂದ ಪ್ರಾರಂಭವಾಯಿತು. ಉಭಯ ತಂಡಗಳ ನಡುವೆ ನಡೆದ ಮೊದಲ ಸರಣಿಯು 1-1 ರ ಡ್ರಾದಲ್ಲಿ ಕೊನೆಗೊಂಡಿತ್ತು. ಅದರ ನಂತರ, ಎರಡೂ ತಂಡಗಳ ನಡುವೆ ನಡೆದ ಪ್ರತಿಯೊಂದು ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. 2012 ಮತ್ತು 2026 ರ ನಡುವೆ, ಎರಡೂ ದೇಶಗಳ ನಡುವೆ ಒಟ್ಟು ಆರು ಟಿ20 ಸರಣಿಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ ಐದು ಸರಣಿಗಳನ್ನು ಗೆದ್ದುಕೊಂಡರೆ, ಒಂದು ಸರಣಿ ಡ್ರಾದಲ್ಲಿ ಕೊನೆಗೊಂಡಿತ್ತು.
ಆದರೆ ಎರಡೂ ತಂಡಗಳ ನಡುವೆ ನಡೆದ ಏಳನೇ ಟಿ20 ಸರಣಿಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿರುವ ಇಂಗ್ಲೆಂಡ್ ತಂಡ 3-0 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಟೀಂ ಇಂಡಿಯಾದ ಕಳೆದ 14 ವರ್ಷಗಳ ಅಜೇಯ ಓಟಕ್ಕೆ ತೆರೆ ಬಿದ್ದಿದೆ.
IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು
ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕನಾಗಿ ಅಧಿಕಾರವಹಿಸಿಕೊಂಡ ಬಳಿಕ ತಂಡ ಗೆಲುವಿಗಾಗಿ ಹಾತೋರೆಯುವಂತ್ತಾಗಿದೆ. ಇದುವರೆಗೆ ಅಯ್ಯರ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿದ್ದು, ಆಡಿರುವ 5 ಪಂದ್ಯಗಳಲ್ಲೂ ಭಾರತ ಸೋತಿದೆ. ಉಳಿದಂತೆ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇಂಗ್ಲೆಂಡ್ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಬಹುದಾದರೂ, ಐರ್ಲೆಂಡ್ ವಿರುದ್ಧದ ವೈಟ್ ವಾಶ್ ಮುಖಭಂಗವನ್ನು ಭಾರತೀಯರಿಗೆ ಮರೆಯಲಾಗುತ್ತಿಲ್ಲ. ಪ್ರಸ್ತುತ ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ಟಿ20 ತಂಡ ಮುಂದಿನ ಜಿಂಬಾಬ್ವೆ ಪ್ರವಾಸದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.