IND vs AUS: 4ನೇ ದಿನ ಟೀಂ ಇಂಡಿಯಾ ಮಾಡಿದ ತಪ್ಪುಗಳು ಒಂದೆರಡಲ್ಲ.. ಬರೋಬ್ಬರಿ 5 ತಪ್ಪುಗಳು

|

Updated on: Dec 29, 2024 | 4:03 PM

India's Blunders in Melbourne Test: ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಐದು ಪ್ರಮುಖ ತಪ್ಪುಗಳನ್ನು ಮಾಡಿದೆ. ಇದರಿಂದಾಗಿ ಭಾರತ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದಂತೆ ತೊರುತ್ತಿದೆ. ತಂಡದ ಪರ ಜೈಸ್ವಾಲ್ ಮೂರು ಕ್ಯಾಚ್‌ಗಳನ್ನು ಕೈಬಿಟ್ಟರೆ, ಸಿರಾಜ್ ಒಂದು ಕಷ್ಟಕರವಾದ ಕ್ಯಾಚ್ ಅನ್ನು ಮಿಸ್ ಮಾಡಿದರು. ಇತ್ತ ಬುಮ್ರಾ ಮಾಡಿದ ನೋ ಬಾಲ್ ಕೂಡ ತಂಡಕ್ಕೆ ತುಂಬಾ ದುಬಾರಿಯಾಯಿತು.

IND vs AUS: 4ನೇ ದಿನ ಟೀಂ ಇಂಡಿಯಾ ಮಾಡಿದ ತಪ್ಪುಗಳು ಒಂದೆರಡಲ್ಲ.. ಬರೋಬ್ಬರಿ 5 ತಪ್ಪುಗಳು
ಟೀಂ ಇಂಡಿಯಾ
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ ಆತಿಥೇಯ ತಂಡ ಇದೀಗ ಸೋಲಿನ ಸುಳಿಗೆ ಸಿಲುಕಿದೆ. ಟೀಂ ಇಂಡಿಯಾದ ಕರಾರುವಕ್ಕಾದ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಪೆವಿಲಿಯನ್ ಪರೇಡ್ ನಡೆಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 474 ರನ್ ಕಲೆಹಾಕಿದ್ದ ಆಸೀಸ್ ಪಡೆ ಎರಡನೇ ಇನ್ನಿಂಗ್ಸ್​ನಲ್ಲಿ 228 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡಿದೆ. ಅದರಲ್ಲೂ ಕೊನೆಯ ವಿಕೆಟ್​ಗೆ 50 ರನ್​ಗಳ ಜೊತೆಯಾಟ ಬಂದ ಕಾರಣದಿಂದಾಗಿ ಆತಿಥೇಯರು 200 ರನ್​ಗಳ ಗಡಿ ದಾಟಿದ್ದಾರೆ. ಇಲ್ಲದಿದ್ದರೆ ಅವರ ಇನ್ನಿಂಗ್ಸ್ ಇನ್ನೂ ಬೇಗನೇ ಮುಗಿಯುತ್ತಿತ್ತು. ಆದಾಗ್ಯೂ ಆಸ್ಟ್ರೇಲಿಯಾ ತಂಡ ಇಷ್ಟು ರನ್ ಕಲೆಹಾಕಲು ಟೀಂ ಇಂಡಿಯಾ ಮಾಡಿದ ತಪ್ಪುಗಳು ಕೂಡ ಪ್ರಮುಖ ಕಾರಣವಾದವು. ಪಂದ್ಯದ ನಾಲ್ಕನೇ ದಿನ ಟೀಂ ಇಂಡಿಯಾ ಮಾಡಿದ ಐದು ತಪ್ಪುಗಳು ಆಸ್ಟ್ರೇಲಿಯಾಕ್ಕೆ ವರವಾದವು.

ವಾಸ್ತವವಾಗಿ ಪಂದ್ಯದ ನಾಲ್ಕನೇ ದಿನ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿತ್ತು. ಒಂದು ಹಂತದಲ್ಲಿ ಭಾರತೀಯ ಬೌಲರ್‌ಗಳು ಕೇವಲ 91 ರನ್‌ಗಳಲ್ಲಿ ಆಸ್ಟ್ರೇಲಿಯಾದ 6 ವಿಕೆಟ್‌ಗಳನ್ನು ಉರುಳಿಸಿದ್ದರು. ಆದರೆ ಫಿಲ್ಡಿಂಗ್​ನಲ್ಲಿ ಟೀಂ ಇಂಡಿಯಾದ ಆಟಗಾರರು ಮಾಡಿದ ಎಡವಟ್ಟುಗಳು ಹಾಗೂ ನೋ ಬಾಲ್​ಗಳು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಹೀಗಾಗಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ಸೋಲಿನ ಭೀತಿಯಲ್ಲಿದೆ. ಅಷ್ಟಕ್ಕೂ ಟೀಂ ಇಂಡಿಯಾ ಮಾಡಿದ ತಪ್ಪುಗಳು ಏನು ಎಂಬುದನ್ನು ನೋಡಲು ಹೋದರೆ..

ಬ್ಯಾಟಿಂಗ್​ನಲ್ಲೂ ತಪ್ಪು ಮಾಡಿದ ಜೈಸ್ವಾಲ್

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್​ಗೆ 4ನೇ ಟೆಸ್ಟ್ ಪಂದ್ಯ ದುಸ್ವಪ್ನದಂತೆ ಕಾಡುತ್ತಿದೆ. ಮೊದಲು ಬ್ಯಾಟಿಂಗ್​ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನ್​ಔಟ್​ಗೆ ಬಲಿಯಾಗಿದ್ದ ಜೈಸ್ವಾಲ್ ಇದರಿಂದಾಗಿ ಶತಕ ವಂಚಿತರಾಗಿದಲ್ಲದೆ ತಂಡವನ್ನು ಮತ್ತೆ ಸಂಕಷ್ಟಕ್ಕೆ ತಳ್ಳಿದರು. ಜೈಸ್ವಾಲ್ ಹಾಗೂ ಕೊಹ್ಲಿ ಉತ್ತಮ ಜೊತೆಯಾಟವನ್ನಾಡುವ ಮೂಲಕ ಆಸೀಸ್​ಗೆ ತಕ್ಕ ತಿರುಗೇಟು ನೀಡುತ್ತಿದ್ದರು. ಆದರೆ ಜೈಸ್ವಾಲ್ ಔಟಾದ ಬಳಿಕ ಲಯ ಕಳೆದುಕೊಂಡ ತಂಡದ ಬ್ಯಾಟಿಂಗ್‌ ಕ್ರಮಾಂಕ ಕೇವಲ 6 ರನ್​ಗಳಿಗೆ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಇದು ಜೈಸ್ವಾಲ್ ಬ್ಯಾಟಿಂಗ್​ನಲ್ಲಿ ಮಾಡಿದ ತಪ್ಪಾದರೆ, ಫಿಲ್ಡಿಂಗ್​ನಲ್ಲೂ ಜೈಸ್ವಾಲ್​​ಗೆ ಇದು ಕೆಟ್ಟ ದಿನವಾಗಿತ್ತು.

3 ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್

ವಾಸ್ತವವಾಗಿ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಮಾಡಿದ ಐದು ತಪ್ಪುಗಳಲ್ಲಿ ಪ್ರಮುಖ ಮೂರು ತಪ್ಪುಗಳು ಯಶಸ್ವಿ ಜೈಸ್ವಾಲ್ ಅವರಿಂದ ಜರುಗಿದವು. ನಾಲ್ಕನೇ ದಿನ ಫೀಲ್ಡಿಂಗ್ ಮಾಡುವಾಗ ಜೈಸ್ವಾಲ್ ಬರೋಬ್ಬರಿ ಮೂರು ಕ್ಯಾಚ್‌ಗಳನ್ನು ಕೈಬಿಟ್ಟರು. ಅದರಲ್ಲಿ ಒಂದು ಕ್ಯಾಚ್ ಟೀಂ ಇಂಡಿಯಾಗೆ ತುಂಬಾ ದುಬಾರಿಯಾಗಿದೆ. ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್‌ನಲ್ಲಿ 70 ರನ್ ಕಲೆಹಾಕಿದ ಮಾರ್ನಸ್ ಲಬುಶೇನ್ ಅವರ ಸುಲಭ ಕ್ಯಾಚ್ ಅನ್ನು ಜೈಸ್ವಾಲ್ ಕೈಚೆಲಿದರು. ಆಸ್ಟ್ರೇಲಿಯದ ಸ್ಕೋರ್ 99 ರನ್‌ಗಳಿಗೆ 6 ವಿಕೆಟ್‌ಗಳಾಗಿದ್ದಾಗ, ಜೈಸ್ವಾಲ್ ಲಬುಶೇನ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಇದು ಟೀಂ ಇಂಡಿಯಾಗೆ ತುಂಬಾ ದುಬಾರಿಯಾಯಿತು. ಇದಲ್ಲದೇ ಉಸ್ಮಾನ್ ಖವಾಜಾ ಮತ್ತು ಪ್ಯಾಟ್ ಕಮಿನ್ಸ್ ಅವರ ಕ್ಯಾಚ್‌ಗಳನ್ನೂ ಸಹ ಜೈಸ್ವಾಲ್ ಕೈಬಿಟ್ಟರು. ಜೈಸ್ವಾಲ್ ಅವರ ಈ ಕಳಪೆ ಫಿಲ್ಡಿಂಗ್ ನೋಡಿದ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ತಮ್ಮ ತಾಳ್ಮೆ ಕಳೆದುಕೊಂಡ ಪ್ರಸಂಗವೂ ನಡೆಯಿತು.

ಕಷ್ಟಕರ ಕ್ಯಾಚ್ ಬಿಟ್ಟ ಸಿರಾಜ್

ಇದು ಜೈಸ್ವಾಲ್ ಕಥೆಯಾದರೆ ಇತ್ತ ವೇಗಿ ಸಿರಾಜ್​ ಕೂಡ ಕ್ಯಾಚ್ ಕೈಚೆಲ್ಲಿದರು. ಈ ಕ್ಯಾಚ್ ಹಿಡಿಯುವುದು ಕಷ್ಟಕರವಾಗಿದ್ದರೂ, ಸಿರಾಜ್ ಆ ಕ್ಯಾಚ್ ಹಿಡಿದಿದ್ದರೆ ಆಸ್ಟ್ರೇಲಿಯಾ ಬೇಗನೇ ಆಲೌಟ್ ಆಗುತ್ತಿತ್ತು. ವಾಸ್ತವವಾಗಿ ಆಸ್ಟ್ರೇಲಿಯಾ ಪರ ಕೊನೆಯ ಜೋಡಿ ನಾಥನ್ ಲಿಯಾನ್ ಮತ್ತು ಸ್ಕಾಟ್ ಬೋಲ್ಯಾಂಡ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ದಾಳಿಗಿಳಿದ ಸಿರಾಜ್, ನಾಥನ್ ಲಿಯಾನ್ ನೀಡಿದ ಬೌಲರ್ ಕ್ಯಾಚ್ ಅನ್ನು ಸಿರಾಜ್ ಮಿಸ್ ಮಾಡಿದರು. ಮೇಲೆ ಹೇಳಿದಂತೆ ಈ ಕ್ಯಾಚ್ ಅಷ್ಟು ಸುಲಭವಾಗಿರಲಿಲ್ಲ. ಆದಾಗ್ಯೂ ಸಿರಾಜ್ ಈ ಕ್ಯಾಚ್ ಹಿಡಿದಿದ್ದರೆ ಆಸ್ಟ್ರೇಲಿಯಾಕ್ಕೆ 300 ರನ್ ಮುನ್ನಡೆ ಸಿಗುತ್ತಿರಲಿಲ್ಲ.

ದುಬಾರಿಯಾಯ್ತು ಬುಮ್ರಾ ಮಾಡಿದ ನೋಬಾಲ್

ಇದಲ್ಲದೆ, ನಾಲ್ಕನೇ ದಿನದ ಅಂತ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ದೊಡ್ಡ ತಪ್ಪು ಮಾಡಿದರು. ವಾಸ್ತವವಾಗಿ ಬುಮ್ರಾ ಎಸೆತದಲ್ಲಿ ನಾಥನ್ ಸ್ಲಿಪ್‌ನಲ್ಲಿ ನಿಂತಿದ್ದ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದ್ದರು. ಆರಂಭದಲ್ಲಿ ರಾಹುಲ್ ಈ ಕ್ಯಾಚ್ ಅನ್ನು ಕೈಚೆಲ್ಲಿದರಾದರೂ ಅದೃಷ್ಟವಶಾತ್ ಚೆಂಡು ರಾಹುಲ್ ಅವರ ಕಾಲುಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದರಿಂದ ರಾಹುಲ್ ಈ ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಆದರೆ ಬುಮ್ರಾ ಬೌಲ್ ಮಾಡಿದ್ದ ಆ ಎಸೆತ ನೋ ಬಾಲ್ ಆಗಿತ್ತು. ಇದರಿಂದ ಆಸ್ಟ್ರೇಲಿಯಾ ಆಲೌಟ್ ಆಗುವುದರಿಂದ ಪಾರಾಗಿ ಐದನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Sun, 29 December 24