ಟೆಸ್ಟ್ ಸರಣಿ ಗೆಲ್ಲಲು ಮೂರು ಆಯ್ಕೆಗಳಿವೆ. ಒಂದು ಬ್ಯಾಟಿಂಗ್ ಮೂಲಕ ಗುರಿ ಬೆನ್ನತ್ತಿ ಜಯ ಸಾಧಿಸುವುದು. ಎರಡನೇಯದು ಬೌಲಿಂಗ್ ಮೂಲಕ ಆಲೌಟ್ ಮಾಡಿ ಗೆಲುವು ದಾಖಲಿಸುವುದು. ಮೂರನೇದು ಪಂದ್ಯವನ್ನು ಡ್ರಾಗೊಳಿಸಿ ಗೆಲ್ಲುವುದು. ಎಡ್ಜ್ಬಾಸ್ಟನ್ನಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೊದಲ ಆಯ್ಕೆಯನ್ನು ಆಯ್ದುಕೊಂಡಿತು. ಅದರಂತೆ 378 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿ ಜಯ ಸಾಧಿಸಿದೆ. ಆದರೆ ಇಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಅನ್ನೇ ಮರೆತು ಸೋಲುಂಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ನೀಡಿದ 416 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಇಂಗ್ಲೆಂಡ್ ಕಲೆಹಾಕಿದ್ದು ಕೇವಲ 284 ರನ್ಗಳು ಮಾತ್ರ.
ಇತ್ತ 2ನೇ ಇನಿಂಗ್ಸ್ ಆರಂಭಿಸುವ ಮುನ್ನವೇ ಟೀಮ್ ಇಂಡಿಯಾ 132 ರನ್ಗಳ ಮುನ್ನಡೆ ಹೊಂದಿತ್ತು. ಹೀಗಾಗಿ ಬೃಹತ್ ಮೊತ್ತ ಪೇರಿಸುವ ಉತ್ತಮ ಅವಕಾಶ ಕೂಡ ಭಾರತದ ಮುಂದಿತ್ತು. ಆದರೆ ಟೀಮ್ ಇಂಡಿಯಾ ಎಡವಟ್ಟು ಮಾಡಿಕೊಂಡಿದ್ದೇ ಇಲ್ಲಿ. ಏಕೆಂದರೆ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆಟಗಾರರು ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನವನ್ನು ಮಾಡಲೇ ಇಲ್ಲ.
ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಮಾತ್ರ 168 ಎಸೆತಗಳನ್ನು ಎದುರಿಸಿ 66 ರನ್ ಬಾರಿಸಿದ್ದರು. ಉಳಿದ ಯಾವುದೇ ಬ್ಯಾಟ್ಸ್ಮನ್ 100 ಎಸೆತಗಳನ್ನು ಸಹ ಆಡಲಿಲ್ಲ. ಅಂದರೆ ತಾಳ್ಮೆಯ ಪರೀಕ್ಷೆಯಾಗಿರುವ ಟೆಸ್ಟ್ ಕ್ರಿಕೆಟ್ನಲ್ಲಿ ಕ್ರೀಸ್ ಕಚ್ಚಿ ನಿಂತಷ್ಟು 3ನೇ ಇನಿಂಗ್ಸ್ ಆಡುವ ತಂಡಕ್ಕೆ ಲಾಭ. ಅದರಲ್ಲೂ ಮೊದಲ ಇನಿಂಗ್ಸ್ ಮುನ್ನಡೆ ಹೊಂದಿದ್ದ ಟೀಮ್ ಇಂಡಿಯಾ ಹೆಚ್ಚು ಹೊತ್ತು ಬ್ಯಾಟಿಂಗ್ ನಡೆಸಿದರೆ ಇಂಗ್ಲೆಂಡ್ ತಂಡದ ಗೆಲುವನ್ನು ಕಸಿದುಕೊಳ್ಳುವ ಅವಕಾಶ ಹೊಂದಿತ್ತು. ಏಕೆಂದೆರೆ ಈ ಸರಣಿಯಲ್ಲಿ ಅದಾಗಲೇ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಪಡೆದಿತ್ತು.
ಹೀಗಾಗಿ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಡ್ರಾ ಸಾಧಿಸಿದರೂ ಸರಣಿ ಗೆಲುವು ಟೀಮ್ ಇಂಡಿಯಾ ಪಾಲಾಗುತ್ತಿತ್ತು. ಆದರೆ ಭಾರತೀಯ ಬ್ಯಾಟ್ಸ್ಮನ್ಗಳು ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನವನ್ನೇ ಮಾಡಿರಲಿಲ್ಲ. ಅದರಲ್ಲೂ ನಾಲ್ಕನೇ ದಿನದಾಟವನ್ನು ಭಾರತ ಪೂರ್ಣಗೊಳಿಸಿದರೆ ಮಾತ್ರ ಗೆಲುವು ದಕ್ಕಲಿದೆ ಎಂಬುದು ಸ್ಪಷ್ಟವಾಗಿದ್ದರೂ, ಭಾರತೀಯ ಬ್ಯಾಟ್ಸ್ಮನ್ಗಳು ಟೆಸ್ಟ್ನಲ್ಲಿ ಏಕದಿನ ಕ್ರಿಕೆಟ್ ಆಡಿ ಪಂದ್ಯವನ್ನು ಕೈಚೆಲ್ಲಿಕೊಂಡಿದೆ ಎಂದರೆ ತಪ್ಪಾಗಲಾರದು.
ಏಕೆಂದರೆ ಇಂಗ್ಲೆಂಡ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಚೇಸಿಂಗ್ ಮಾಡಿ ಗೆದ್ದುಕೊಂಡಿದೆ. ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ 277 ರನ್ಗಳನ್ನು ಚೇಸ್ ಮಾಡಿತ್ತು. ಇನ್ನು ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ 2ನೇ ಪಂದ್ಯವನ್ನು ಚೇಸ್ ಮಾಡಿ ಹೊಸ ದಾಖಲೆ ಬರೆದಿತ್ತು. ಕೊನೆಯ ದಿನದಾಟದಲ್ಲಿ 299 ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ 22 ಓವರ್ಗಳು ಬಾಕಿಯಿರುವಂತೆ ಬೆನ್ನತ್ತಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಹಾಗೆಯೇ ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಪಂದ್ಯವನ್ನೂ ಕೂಡ ಇಂಗ್ಲೆಂಡ್ 296 ರನ್ಗಳ ಗುರಿ ಬೆನ್ನತ್ತಿ ಗೆದ್ದುಕೊಂಡಿತ್ತು.
ಅಂದರೆ ಟೀಮ್ ಇಂಡಿಯಾ ಎಷ್ಟು ರನ್ಗಳ ಟಾರ್ಗೆಟ್ ನೀಡಿದರೂ ಚೇಸಿಂಗ್ ಮಾಡುವುದು ಸ್ಪಷ್ಟವಾಗಿತ್ತು. ಏಕೆಂದರೆ ಈ ಸರಣಿಯನ್ನು ಸಮಬಲಗೊಳಿಸಬೇಕಿದ್ದರೆ ಇಂಗ್ಲೆಂಡ್ಗೆ ಗೆಲುವು ಅನಿವಾರ್ಯವಾಗಿತ್ತು. ಇತ್ತ ಸರಣಿ ಜಯಿಸಬೇಕಿದ್ದರೆ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದರೆ ಸಾಕಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಬಿರುಸಿನ ಆಟವಾಡಲು ಹೋದ ಟೀಮ್ ಇಂಡಿಯಾ ಕೇವಲ 245 ರನ್ಗಳಿಗೆ ಆಲೌಟ್ ಆಗಿದೆ.
ಒಂದು ವೇಳೆ ಟೀಮ್ ಇಂಡಿಯಾ ನಾಲ್ಕನೇ ದಿನದಾಟವನ್ನು ಸಂಪೂರ್ಣವಾಗಿ ಆಡಿದ್ದರೂ, ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿತ್ತು. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಡ್ರಾ ಮಾಡಿಕೊಳ್ಳುವ ಆಯ್ಕೆ ಇದೆ ಎಂಬುದನ್ನು ಮರೆತಂತಿತ್ತು ಟೀಮ್ ಇಂಡಿಯಾ ಬ್ಯಾಟಿಂಗ್. ಟೀಮ್ ಇಂಡಿಯಾ ಆಟಗಾರರು ಪಂದ್ಯವನ್ನು ಐದನೇ ದಿನದಾಟಕ್ಕೆ ಕೊಂಡೊಯ್ಯುವ ಅಗತ್ಯವಿದ್ದರೂ ವಿನಾಕಾರಣ ವಿಕೆಟ್ ಒಪ್ಪಿಸಿದ್ದೇಕೆ ಎಂಬ ಪ್ರಶ್ನೆ ಮೂಡುತ್ತೆ. ಅಂದರೆ ಇಲ್ಲಿ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಯಾವುದೇ ಇರಾದೆಯಲ್ಲಿ ಇರಲಿಲ್ಲ. ಬೃಹತ್ ಮೊತ್ತ ಪೇರಿಸಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮಾಸ್ಟರ್ ಪ್ಲ್ಯಾನ್ನೊಂದಿಗೆ ಕಣಕ್ಕಿಳಿದಿದ್ದೇ ದೊಡ್ಡ ತಪ್ಪು.
ಒಂದಾರ್ಥದಲ್ಲಿ ಟೆಸ್ಟ್ ಕ್ರಿಕೆಟ್ ಇರುವುದೇ ಆಟಗಾರರ ತಾಳ್ಮೆಯನ್ನು ತೆರೆದಿಡಲು. ಅಂತಹದೊಂದು ತಾಳ್ಮೆಯ ಪರೀಕ್ಷೆಗೆ ಟೀಮ್ ಇಂಡಿಯಾ ಆಟಗಾರರು ಮುಂದಾಗಲಿಲ್ಲ. ಅತ್ತ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಆಲೌಟ್ ಆದ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್ ದಿನದಾಂತ್ಯಕ್ಕೆ 259 ರನ್ ಬಾರಿಸಿ ಗೆಲುವಿಗೆ ಅಡಿಪಾಯ ಹಾಕಿದ್ದರು. ಅಲ್ಲದೆ 2ನೇ ಇನಿಂಗ್ಸ್ನಲ್ಲಿ 378 ರನ್ಗಳ ಬೃಹತ್ ಗುರಿ ಚೇಸಿಂಗ್ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿದೆ.
ಅಂದರೆ ಇಲ್ಲಿ ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಗುರಿ ಬೆನ್ನತ್ತಿ ಜಯ ಸಾಧಿಸುವ ಆಯ್ಕೆಯನ್ನು ಆಯ್ದುಕೊಂಡಿದೆ. ಆದರೆ ಇದೇ ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದ್ದರೂ ಟೀಮ್ ಇಂಡಿಯಾ ಅದನ್ನು ಕೈಚೆಲ್ಲಿಕೊಂಡಿತು. ಇಂದಿಗೂ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ನಂತಹ ಆಟಗಾರರು ನಮ್ಮ ನೆನಪಿನಲ್ಲಿ ಉಳಿಯುವುದು ಕೂಡ ಸೋಲುವ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದ ಕಾರಣಕ್ಕೆ ಹೊರತು, ಟೆಸ್ಟ್ ಕ್ರಿಕೆಟ್ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಗೆದ್ದ ಕಾರಣಕ್ಕಲ್ಲ. ಅಂದರೆ ಟೆಸ್ಟ್ ಅನ್ನು ಡ್ರಾನಲ್ಲೂ ಅಂತ್ಯಗೊಳಿಸಿ ಸರಣಿ ಗೆಲ್ಲುವುದು ಕೂಡ ಒಂದು ತಂತ್ರ ಎಂಬುದು ಟೀಮ್ ಇಂಡಿಯಾ ಆಟಗಾರರಿಗೆ ಮನದಟ್ಟು ಮಾಡಬೇಕಾದ ಅನಿವಾರ್ಯತೆ ಇದೆ ಎಂಬುದಕ್ಕೆ ಈ ಪಂದ್ಯದ ಫಲಿತಾಂಶವೇ ಸಾಕ್ಷಿ.