India vs England: 77 ಓವರ್​ಗಳಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ಆಂಗ್ಲರು..!

| Updated By: ಝಾಹಿರ್ ಯೂಸುಫ್

Updated on: Jul 05, 2022 | 10:06 PM

India vs England: ಎಡ್ಜ್​ಬಾಸ್ಟನ್​ ಟೆಸ್ಟ್​ನಲ್ಲಿ ಭಾರತದ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ತಂಡವು ಟೆಸ್ಟ್ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸಿದೆ. ಈ ಮೂಲಕ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಲು ಯಶಸ್ವಿಯಾಗಿದೆ.

India vs England: 77 ಓವರ್​ಗಳಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ಆಂಗ್ಲರು..!
Root-Bairstow
Follow us on

India vs England 5th Test: ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಎಂದೇ ಕರೆಸಿಕೊಳ್ಳುವ ಟೀಮ್ ಇಂಡಿಯಾ (Team India) ಬೌಲರ್​ಗಳನ್ನು ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳು ಬೆಂಡೆತ್ತಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ತಾಳ್ಮೆಯ ಪ್ರತೀಕವಾಗಿರುವ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹೊಸ ಆಕ್ರಮಣಕಾರಿ ತಂಡವಾಗಿ ಗುರುತಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯೇ ಇಂಗ್ಲೆಂಡ್ ತಂಡವು ಕಳೆದ ನಾಲ್ಕು ಟೆಸ್ಟ್ ಪಂದ್ಯಗಳನ್ನು ಚೇಸ್ ಮಾಡಿ ಗೆದ್ದಿರುವುದು. ಈ ಬಾರಿ ಬೃಹತ್ ಮೊತ್ತವನ್ನೇ ಚೇಸ್ ಮಾಡಿ ಐತಿಹಾಸಿಕ ಸಾಧನೆ ಮಾಡಿರುವುದು ವಿಶೇಷ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ರಿಷಭ್ ಪಂತ್ (146) ಹಾಗೂ ಜಡೇಜಾ (104) ಅವರ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 416 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 284 ರನ್ ಮಾತ್ರ. ಇತ್ತ 3ನೇ ದಿನದಾಟದಲ್ಲೇ ಸೆಕೆಂಡ್ ಇನಿಂಗ್ಸ್ ಅವಕಾಶ ಪಡೆದ ಟೀಮ್ ಇಂಡಿಯಾಗೆ ಬೃಹತ್ ಮೊತ್ತ ಪೇರಿಸುವ ಉತ್ತಮ ಅವಕಾಶವಿತ್ತು.

ಆದರೆ ಭಾರತೀಯ ಬ್ಯಾಟ್ಸ್​ಮನ್​ಗಳು ಬಾರಿಸಿದ್ದು ಕೇವಲ 245 ರನ್​ಗಳು ಮಾತ್ರ. ಇದಾಗ್ಯೂ ಮೊದಲ ಇನಿಂಗ್ಸ್​ನಲ್ಲಿ 132 ರನ್​ಗಳ ಮುನ್ನಡೆ ಹೊಂದಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್​ಗೆ ಒಟ್ಟು 378 ರನ್​ಗಳ ಟಾರ್ಗೆಟ್ ನೀಡಿತು. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯವಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದೆರೆ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಟೀಮ್ ಇಂಡಿಯಾ ಪಾಲಿಗಿತ್ತು. ಆದರೆ ಕೇವಲ 77 ಓವರ್​ಗಳಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಇಂಗ್ಲೆಂಡ್ ತಂಡ ತಲೆಕೆಳಗಾಗಿಸಿದೆ.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

378 ರನ್​ಗಳ ಬೃಹತ್ ಗುರಿಯನ್ನು ಕೇಂದ್ರವಾಗಿಸಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಆರಂಭಿಕ ಆಟಗಾರ ಅಲೆಕ್ಸ್ ಲೀಸ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 65 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮತ್ತೊಂದೆಡೆ ಜಾಕ್ ಕ್ರಾವ್ಲಿ ಕೂಡ ಉಪಯುಕ್ತ 46 ರನ್​ಗಳ ಕಾಣಿಕೆ ನೀಡಿದರು. ಇದಾಗ್ಯೂ ಟೀಮ್ ಇಂಡಿಯಾ 109 ರನ್​ಗಳಿಗೆ 3 ವಿಕೆಟ್ ಪಡೆದು ತುಸು ಮೇಲುಗೈ ಸಾಧಿಸಿತ್ತು. ಆದರೆ ಜೋ ರೂಟ್ ಹಾಗೂ ಜಾನಿ ಬೈರ್​ಸ್ಟೋವ್ ಆಗಮನದೊಂದಿಗೆ ಇಂಗ್ಲೆಂಡ್ ತಂಡದ ಗುರಿಯೇನು ಎಂಬುದು ಸಹ ಸ್ಪಷ್ಟವಾಗಿತ್ತು.

ನಾಲ್ಕನೇ ದಿನದಾಟದಲ್ಲೇ ರೂಟ್ ಹಾಗೂ ಬೈರ್​ಸ್ಟೋವ್ ಬಿರುಸಿನ ಇನಿಂಗ್ ಆಡಿದ್ದರು. ಟೀಮ್ ಇಂಡಿಯಾ ಬೌಲರ್​ಗಳನ್ನು ಬೆಂಡೆತ್ತಿದ್ದ ಈ ಜೋಡಿ ದಿನದಾಟದ ಅಂತ್ಯಕ್ಕೆ 259 ರನ್​ ಕಲೆಹಾಕಿದ್ದರು. ಅಂದರೆ 378 ರನ್​ಗಳ ಟಾರ್ಗೆಟ್​ನ ಬಹುತೇಕ ಸ್ಕೋರ್​ ಅನ್ನು ನಾಲ್ಕನೇ ದಿನದಾಟದಲ್ಲಿ ಕಲೆಹಾಕಿ ಗೆಲುವನ್ನು ಖಚಿತಪಡಿಸಿಕೊಂಡಿದ್ದರು.

ಇನ್ನು ಐದನೇ ದಿನದಾಟದಲ್ಲೂ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಭಾರತೀಯ ಬೌಲರ್​ಗಳ ಬೆವರಿಳಿಸಿದ ಜೋ ರೂಟ್ ಕೇವಲ 136 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಜಾನಿ ಬೈರ್​ಸ್ಟೋವ್ ಕೂಡ 138 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಅಂದರೆ ಶತಕ ಬಾರಿಸಲು ಇಬ್ಬರು ಬ್ಯಾಟ್ಸ್​ಮನ್​ಗಳು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದು ಕೇವಲ 36 ಹಾಗೂ 38 ಎಸೆತಗಳನ್ನು ಮಾತ್ರ ಎಂಬುದು ಇಲ್ಲಿ ಗಮನಾರ್ಹ.

ಅಂತಿಮವಾಗಿ ಜೋ ರೂಟ್ 173 ಎಸೆತಗಳಲ್ಲಿ 146 ರನ್​ ಬಾರಿಸಿದರೆ, ಜಾನಿ ಬೈರ್​ಸ್ಟೋವ್ 145 ಎಸೆತಗಳಲ್ಲಿ 114 ರನ್​ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ ನೀಡಿದ 378 ರನ್​ಗಳ ಟಾರ್ಗೆಟ್​ ಅನ್ನು ಇಂಗ್ಲೆಂಡ್ ತಂಡವು ಕೇವಲ 77 ಓವರ್​ಗಳಲ್ಲೇ ಚೇಸ್ ಮಾಡಿತು. ಅಂದರೆ ಪ್ರತಿ ಓವರ್​ಗೆ 4.9 ಸರಾಸರಿಯಲ್ಲಿ ರನ್​ಗಳಿಸಿದ ಇಂಗ್ಲೆಂಡ್ ತಂಡವು ಬೃಹತ್ ಮೊತ್ತವನ್ನು ಚೇಸ್ ಮಾಡಿ ಹೊಸ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ದ 359 ಚೇಸ್ ಮಾಡಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿರುವ ಆಂಗ್ಲರು, 77 ಓವರ್​ಗಳಲ್ಲಿ 378 ರನ್​ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಟೀಮ್ ಇಂಡಿಯಾ ವಿರುದ್ದ ಎಂಬುದು ವಿಶೇಷ.

 

 

Published On - 5:09 pm, Tue, 5 July 22