ಟೀಂ ಇಂಡಿಯಾದ ಬಾಲಂಗೋಚಿಗಳು ಬ್ಯಾಟಿಂಗ್ ಕಲಿಯುವುದು ಯಾವಾಗ?

|

Updated on: Aug 05, 2023 | 9:36 AM

Team India: ಟಾಪ್ ಆರ್ಡರ್, ಮಧ್ಯಮ ಕ್ರಮಾಂಕ ಹಾಗೂ ಆಲ್​​ರೌಂಡರ್ ವಿಭಾಗದಲ್ಲಿ ಟೀಂ ಇಂಡಿಯಾ ಹಲವು ಪ್ರತಿಭೆಗಳನ್ನು ಹೊಂದಿದೆ. ಆದರೆ ಬೌಲರ್​ಗಳ ವಿಚಾರಕ್ಕೆ ಬಂದಾಗ, ಭಾರತಕ್ಕೆ ಅದೊಂದು ಸಮಸ್ಯೆಗೆ ಇನ್ನು ಸಹ ಉತ್ತರ ಸಿಕ್ಕಿಲ್ಲ.

ಟೀಂ ಇಂಡಿಯಾದ ಬಾಲಂಗೋಚಿಗಳು ಬ್ಯಾಟಿಂಗ್ ಕಲಿಯುವುದು ಯಾವಾಗ?
ಟೀಂ ಇಂಡಿಯಾ
Follow us on

ಇಡೀ ದೇಶವೇ ಟೀಂ ಇಂಡಿಯಾ (Team India) ವಿಶ್ವ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. ರೋಹಿತ್ ಶರ್ಮಾ (Rohit Sharma) ನೇತೃತ್ವದ ತಂಡ ಕೂಡ ಅದೇ ಕನಸನ್ನು ಕಾಣುತ್ತಿದ್ದು, ಈ ಕನಸನ್ನು ನನಸಾಗಿಸಲು ಆಟಗಾರರು ಸಹ ಎಲ್ಲ ರೀತಿಯ ತಯಾರಿಯಲ್ಲಿ ನಿರತರಾಗಿದ್ದಾರೆ. ವಿಶ್ವಕಪ್‌ನಲ್ಲಿ (World Cup) ಯಾವುದೇ ಕೊರತೆಯಾಗದಂತೆ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಯಾವ ಕಾಂಬಿನೇಷನ್​ನೊಂದಿಗೆ ಫೀಲ್ಡಿಗೆ ಇಳಿಯಬೇಕು ಎಂಬ ತಯಾರಿ ಕೂಡ ಶುರುವಾಗಿದೆ. ಆದರೆ ಬಹಳ ವರ್ಷಗಳಿಂದ ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಅದೊಂದು ಸಮಸ್ಯೆಗೆ ಇನ್ನು ಸಹ ಉತ್ತರ ಸಿಕ್ಕಿಲ್ಲ. ವಾಸ್ತವವಾಗಿ ಟೀಂ ಇಂಡಿಯಾ ವಿಶ್ವ ಕ್ರಿಕೆಟ್​ಗೆ ಹಲವು ದಿಗ್ಗಜ ಆಟಗಾರರನ್ನು ನೀಡಿದೆ. ಕಪಿಲ್ ದೇವ್​​ರಿಂದ ಹಿಡಿದು, ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾವರೆಗೆ ಹಲವು ಟೀಂ ಇಂಡಿಯಾ ಆಟಗಾರರು ವಿಶ್ವ ಕ್ರಿಕೆಟ್​ ಅನ್ನು ಆಳಿದ್ದಾರೆ. ಟಾಪ್ ಆರ್ಡರ್, ಮಧ್ಯಮ ಕ್ರಮಾಂಕ ಹಾಗೂ ಆಲ್​​ರೌಂಡರ್ ವಿಭಾಗದಲ್ಲಿ ಟೀಂ ಇಂಡಿಯಾ ಹಲವು ಪ್ರತಿಭೆಗಳನ್ನು ಹೊಂದಿದೆ. ಆದರೆ ಬೌಲರ್​ಗಳ ವಿಚಾರಕ್ಕೆ ಬಂದಾಗ, ಭಾರತಕ್ಕೆ ಅದೊಂದು ಸಮಸ್ಯೆ ಪ್ರಶ್ನೆಯಾಗಿಯೇ ಉಳಿದಿದೆ.

ಕ್ರಿಕೆಟ್ ಆಡುವ ವಿಶ್ವದ ಇತರ ತಂಡಗಳಿಗೆ ಹೋಲಿಸಿದರೆ, ಟೀಂ ಇಂಡಿಯಾದಲ್ಲಿ ಕ್ವಾಲಿಟಿ ಬೌಲರ್​ಗಳು ಸಿಗುತ್ತಾರೆ. ಆದರೆ ಈ ಬೌಲರ್​ಗಳು ಬೌಲಿಂಗ್​ಗೆ ಮಾತ್ರ ಸೀಮಿತವಾಗಿರುವುದು ತಂಡಕ್ಕೆ ಸಾಕಷ್ಟು ಹಿನ್ನಡೆಯುಂಟು ಮಾಡಿದೆ. ತಮ್ಮ ಬೌಲಿಂಗ್ ಮೂಲಕ ಎಂತಹ ದಾಂಡಿಗನನ್ನೂ ಹೊಡೆದುರುಳಿಸುವ ಭಾರತದ ಬೌಲಿಂಗ್ ಪಡೆ, ಬ್ಯಾಟಿಂಗ್ ವಿಚಾರಕ್ಕೆ ಬಂದರೆ, ಗಲ್ಲಿ ಕ್ರಿಕೆಟಿಗರಿಗಿಂತಲೂ ಕೀಳಾಗಿ ಕಾಣುತ್ತಾರೆ. ಒಂದೇ ಒಂದು ಬಾಲ್ ಎದುರಿಸಲು ಹರಸಾಹಸ ಪಡುವ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ನಿರ್ಣಾಯಕ ಸಮಯದಲ್ಲಿ ಹಲವು ಬಾರಿ ಕೈ ಕೊಟ್ಟಿದೆ. ಹೀಗಾಗಿ ತಂಡ ಕೂಡ ಸಾಕಷ್ಟು ಬಾರಿ ಸೋಲಿನ ಭಾರ ಹೊತ್ತಿದೆ.

2 ವಿಕೆಟ್​ಗಳ ಹೊರತಾಗಿಯೂ ಮೊದಲ ಟಿ20 ಪಂದ್ಯದಲ್ಲಿ ಬೇಡದ ದಾಖಲೆ ಬರೆದ ಯುಜ್ವೇಂದ್ರ ಚಹಾಲ್..!

ಕೊನೆಯ ಓವರ್‌ನಲ್ಲಿ 10 ರನ್‌ ಬೇಕಿತ್ತು

ಇದಕ್ಕೆ ತಾಜಾ ಉದಾಹರಣೆ ವಿಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯ. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಭಾರತದ ಪರ ತಂಡದ ಬೌಲರ್​ಗಳು ಅದ್ಭುತ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ತಂಡವನ್ನು ಕೇಲವ 149 ರನ್‌ಗಳಿಗೆ ಕಟ್ಟಿಹಾಕಿದರು. ಆದರೆ ಈ ಗುರಿ ಬೆನ್ನಟ್ಟುವ ಸಮಯ ಬಂದಾಗ ಇದೇ ಬೌಲರ್​ಗಳು ನಿರ್ಣಾಯಕ ಸಮಯದಲ್ಲಿ ತಂಡದ ಕೈಹಿಡಿಯುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ತಂಡದ ಟಾಪ್ ಆರ್ಡರ್ ಸೇರಿದಂತೆ ಮಧ್ಯಮ ಕ್ರಮಾಂಕ ಕೂಡ ಕೈಕೊಟ್ಟಿತು. ಆದರೆ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಅವರ ಕೊಂಚ ಹೋರಾಟದ ಇನ್ನಿಂಗ್ಸ್​ನಿಂದಾಗಿ ತಂಡ ಗೆಲುವಿನ ಸಮೀಪಕ್ಕೆ ಬಂದಿತು.

19ನೇ ಓವರ್‌ನ ಮೊದಲ ಎಸೆತದಲ್ಲಿ ಅಕ್ಷರ್ ಪಟೇಲ್ ಔಟಾದರು. ಇದಾದ ಬಳಿಕ ಭಾರತಕ್ಕೆ 11 ಎಸೆತಗಳಲ್ಲಿ 21 ರನ್‌ಗಳ ಅಗತ್ಯವಿದ್ದು, ಕೈಯಲ್ಲಿ 3 ವಿಕೆಟ್‌ಗಳಿದ್ದವು. ಭಾರತ 19ನೇ ಓವರ್‌ನಲ್ಲಿ 11 ರನ್ ಸೇರಿಸಿತು. ಹೀಗಾಗಿ ಕೊನೆಯ ಓವರ್‌ನಲ್ಲಿ 10 ರನ್‌ಗಳ ಅಗತ್ಯವಿತ್ತು. ಒಂದು ಹಂತದಲ್ಲಿ ಭಾರತ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ ತಂಡದ ಬಾಲಂಗೋಚಿಗಳ ಬ್ಯಾಟ್ ಕೆಲಸ ಮಾಡಲಿಲ್ಲ. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಕುಲ್ದೀಪ್ 9 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರು.

ಕೊನೆಯ ಓವರ್‌ನಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ

ನಂತರದ 3 ಎಸೆತಗಳಲ್ಲಿ ಅರ್ಷದೀಪ್ ಮತ್ತು ಚಾಹಲ್ ಒಟ್ಟಿಗೆ 3 ರನ್ ಸೇರಿಸಲಷ್ಟೇ ಶಕ್ತರಾದರು. 5ನೇ ಎಸೆತದಲ್ಲಿ ಅರ್ಷದೀಪ್ ರನೌಟ್ ಆದರು. ಹೀಗಾಗಿ ಕೊನೆಯ ಎಸೆತದಲ್ಲಿ ತಂಡದ ಗೆಲುವಿಗೆ 5 ರನ್‌ಗಳು ಅಂದರೆ ಒಂದು ಸಿಕ್ಸರ್‌ ಅಗತ್ಯವಿತ್ತು. ಆದರೆ ಯುವ ವೇಗಿ ಮುಖೇಶ್‌ಗೆ ಸಿಕ್ಸರ್ ಸಿಡಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈ ಪಂದ್ಯದಲ್ಲಿ ಭಾರತ 4 ರನ್‌ಗಳಿಂದ ಸೋತಿತ್ತು. ಒಂದು ವೇಳೆ ಭಾರತದ ಈ ಕೆಳ ಕ್ರಮಾಂಕಕ್ಕೆ ಬಿಗ್ ಶಾಟ್ ಆಡುವ ಸಾಮಥ್ಯ್ರ ಇದ್ದಿದ್ದರೆ ಭಾರತ ಸುಲಭವಾಗಿ ಗೆಲ್ಲುತ್ತಿತ್ತು. ಆದರೆ ಭಾರತದ ಬೌಲಿಂಗ್ ವಿಭಾಗದ ಚೆಂಡನ್ನು ಎದುರಿಸುವುದಕ್ಕೆ ತಿಣುಕಾಡುತ್ತಿತ್ತು. ಇದು ಈ ಪಂದ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಇಂತಹ ಹಲವು ಪಂದ್ಯಗಳಲ್ಲಿ ಟೀಂ ಇಂಡಿಯಾ ಈ ಸಮಸ್ಯೆಯ ಭಾರವನ್ನು ಹೊತ್ತಿದೆ.

ಕೆಳ ಕ್ರಮಾಂಕದ ಬ್ಯಾಟಿಂಗ್ ಅನುಕೂಲ

ಟೆಸ್ಟ್‌ನಲ್ಲಿ, 2018 ರಿಂದ, 9 ನೇ ಕ್ರಮಾಂಕದಿಂದ ಹನ್ನೊಂದನೇ ಕ್ರಮಾಂಕದರವರೆಗೆ ಭಾರತದ ಬ್ಯಾಟ್ಸ್‌ಮನ್‌ಗಳು ಕೇವಲ 7.89 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಅಚ್ಚರಿಯೆಂದರೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ ತಂಡಗಳು ಭಾರತಕ್ಕಿಂತ ಉತ್ತಮವಾದ ರನ್ ರೇಟ್ ಹೊಂದಿವೆ. ಭಾರತದಂತೆ ಬಲಿಷ್ಠ ತಂಡಗಳೆನಿಸಿಕೊಂಡರುವ ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ತಂಡಗಳ ಕೆಳ ಕ್ರಮಾಂಕ ಅಗತ್ಯವಿದ್ದಾಗ ಉತ್ತಮವಾಗಿ ಬ್ಯಾಟಿಂಗ್ ಮಾಡಿ, ಇನ್ನಿಂಗ್ಸ್ ಸಹ ನಿಭಾಯಿಸುತ್ತದೆ. ಆದರೆ ಭಾರತದ ಬೌಲಿಂಗ್​ ವಿಭಾಗಕ್ಕೆ ಈ ಕಲೆ ಗೊತ್ತಿಲ್ಲ.

ಕೆಳ ಕ್ರಮಾಂಕದ ಬ್ಯಾಟರ್​ಗಳು ಬ್ಯಾಟ್ ಮಾಡಿದರೆ ತಂಡಕ್ಕೆ ಹೇಗೆ ಲಾಭವಾಗುತ್ತದೆ ಎಂಬುದಕ್ಕೆ ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ತಂಡವು ಒಂದು ಉದಾಹರಣೆಯನ್ನು ನೀಡಿತ್ತು. ಮಾರ್ಚ್‌ನಲ್ಲಿ, ಚೆನ್ನೈನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಮೂರನೇ ಏಕದಿನ ಪಂದ್ಯ ನಡೆದಿತ್ತು. ಅಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು 21 ರನ್‌ಗಳಿಂದ ಸೋಲಿಸಿತು. ಭಾರತದ ಈ ಸೋಲಿಗೆ ಆಸೀಸ್ ಪಡೆಯ ಕೆಳಕ್ರಮಾಂಕ ಬ್ಯಾಟಿಂಗ್​ನಲ್ಲಿ ನೀಡಿದ ಅದ್ಭುತ ಪ್ರದರ್ಶನ ಪ್ರಮುಖ ಕಾರಣವಾಗಿತ್ತು.

ಟೀಮ್ ಇಂಡಿಯಾದ ದೊಡ್ಡ ದೌರ್ಬಲ್ಯ

ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕೆಳ ಕ್ರಮಾಂಕದ ಬ್ಯಾಟರ್​ಗಳಾದ ಸೀನ್ ಅಬಾಟ್ 26, ಆಶ್ಟನ್ ಅಗರ್ 17, ಮಿಚೆಲ್ ಸ್ಟಾರ್ಕ್ 10 ಮತ್ತು ಆಡಮ್ ಜಂಪಾ ಔಟಾಗದೆ 10 ರನ್ ಬಾರಿಸಿದ್ದರು. ಈ ಬಾಲಂಗೋಚಿಗಳ ಆಟದಿಂದಾಗಿ ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ 269 ರನ್‌ ಕಲೆಹಾಕಿತ್ತು. ಈ ಕೆಳ ಕ್ರಮಾಂಕದ ಬ್ಯಾಟರ್​ಗಳು ಸಂಗ್ರಹಿಸಿದ ರನ್‌ಗಳೆ ಆಸೀಸ್ ಗೆಲುವಿಗೆ ಪ್ರಮುಖ ಕಾರಣವಾಯಿತು. ಆಸ್ಟ್ರೇಲಿಯ, ಇಂಗ್ಲೆಂಡ್‌ನಂತಹ ತಂಡಗಳಿಗೆ ತಂಡದ ಕೆಳ ಕ್ರಮಾಂಕವೇ ದೊಡ್ಡ ಬಲವಾದರೆ, ಟೀಂ ಇಂಡಿಯಾಕ್ಕೆ ಇದು ದೊಡ್ಡ ದೌರ್ಬಲ್ಯವಾಗಿದೆ. ಒಂದು ವೇಳೇ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಬೇಗನೇ ಪೆವಿಲಿಯನ್ ಸೇರಿಕೊಂಡರೆ, ತಂಡದ ಗೆಲುವಿನ ಕನಸು ಕೂಡ ಅವರೊಂದಿಗೆ ಕಮರಿ ಹೋಗುತ್ತದೆ. ಏಕೆಂದರೆ ಟೀಂ ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಬ್ಯಾಟಿಂಗ್ ಮಾಡುವ ಶಕ್ತಿ ಇನ್ನು ಲಭಿಸಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 5 August 23