ಫೆಬ್ರವರಿ 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವುದು ಹಳೆಯ ವಿಚಾರ. ಆ ಪ್ರಕಾರ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದರೆ ಉಳಿದ ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಆಡಲಿವೆ. ಏತನ್ಮಧ್ಯೆ, ಈ ಐಸಿಸಿ ಟೂರ್ನಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರನ್ನು ತಮ್ಮ ಜೆರ್ಸಿಯಲ್ಲಿ ನಮೂದಿಸಲು ಭಾರತ ತಂಡ ನಿರಾಕರಿಸಿದೆ ಎಂದು ವರದಿಯಾಗಿತ್ತು. ನಿನ್ನೆಯಿಂದ ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಾಮಾನ್ಯವಾಗಿ, ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುವ ದೇಶದ ಹೆಸರು ಎಲ್ಲಾ ತಂಡಗಳ ಜೆರ್ಸಿಯ ಮೇಲೆ ನಮೂದಿಸಲೇಬೇಕು. ಆದರೀಗ ಬಿಸಿಸಿಐ, ಪಾಕಿಸ್ತಾನದ ಹೆಸರನ್ನು ತಂಡದ ಜೆರ್ಸಿಯ ಮೇಲೆ ನಮೂದಿಸಲು ತಗಾದೆ ತೆಗೆದಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ ಬಳಿಕ ಹೊಸ ವಿವಾದವೊಂದು ಹುಟ್ಟಿಕೊಂಡಿತ್ತು. ಆದರೆ, ಇದೀಗ ಈ ವಿಚಾರವಾಗಿ ಬಿಸಿಸಿಐ ಸ್ಪಷ್ಟನೆ ನೀಡಿ, ವದಂತಿಗಳಿಗೆ ತೆರೆ ಎಳೆದಿದೆ.
ಐಸಿಸಿ ನಿಯಮಗಳ ಪ್ರಕಾರ, ಐಸಿಸಿ ಬ್ಯಾನರ್ ಅಡಿಯಲ್ಲಿ ನಡೆಯುವ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ತಮ್ಮ ಜೆರ್ಸಿಯಲ್ಲಿ ಆತಿಥೇಯ ದೇಶದ ಹೆಸರು ಮತ್ತು ಪಂದ್ಯಾವಳಿಯ ವರ್ಷವನ್ನು ಪಂದ್ಯಾವಳಿಯ ಹೆಸರಿನೊಂದಿಗೆ ನಮೂದಿಸುವುದು ಕಡ್ಡಾಯವಾಗಿದೆ. ಆ ಪ್ರಕಾರ, ಇದೀಗ ಎದ್ದಿರುವ ವದಂತಿಗೆ ತೆರೆ ಎಳೆದಿರುವ ಬಿಸಿಸಿಐನ ಹೊಸ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಅವರು ಐಸಿಸಿಯ ಪ್ರತಿಯೊಂದು ನಿಯಮವನ್ನು ಬಿಸಿಸಿಐ ಅನುಸರಿಸಲಿದೆ ಎಂದು ಖಚಿತಪಡಿಸಿದ್ದಾರೆ. ಅಂದರೆ ಈ ಟೂರ್ನಿಯ ಆತಿಥೇಯ ಪಾಕಿಸ್ತಾನದ ಹೆಸರು ಟೀಂ ಇಂಡಿಯಾದ ಜೆರ್ಸಿ ಮೇಲೆ ಕಾಣಿಸಿಕೊಳ್ಳಲಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಧ್ಯಮಗಳು ಈ ವಿಷಯವನ್ನು ಪ್ರಸ್ತಾಪಿಸಿ ಟೀಂ ಇಂಡಿಯಾದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಮುದ್ರಿಸಲು ಬಿಸಿಸಿಐ ನಿರಾಕರಿಸಿದೆ ಎಂದು ಆರೋಪಿಸಿದ್ದವು. ಪಿಸಿಬಿ ಕೂಡ ಈ ಸಮಸ್ಯೆಯನ್ನು ಐಸಿಸಿ ಮುಂದಿಡಲು ಬಯಸಿತ್ತು. ಆದರೆ ಬಿಸಿಸಿಐ ಈಗ ಈ ಎಲ್ಲಾ ವರದಿಗಳನ್ನು ತಿರಸ್ಕರಿಸಿದ್ದು, ಜೆರ್ಸಿಗೆ ಸಂಬಂಧಿಸಿದ ಪ್ರತಿಯೊಂದು ಐಸಿಸಿ ನಿಯಮವನ್ನು ಅನುಸರಿಸುವುದಾಗಿ ಘೋಷಿಸಿದೆ.
ಫೆಬ್ರವರಿ 20 ರಿಂದ ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಅಭಿಯಾನ ಆರಂಭವಾಗಲಿದ್ದು, ಚೊಚ್ಚಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ನಂತರ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. ಇದರ ನಂತರ, ಗುಂಪಿನ ಕೊನೆಯ ಪಂದ್ಯದಲ್ಲಿ, ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಟೀಂ ಇಂಡಿಯಾ ಸೆಮಿಫೈನಲ್ ಮತ್ತು ಫೈನಲ್‌ಗೆ ಅರ್ಹತೆ ಪಡೆದರೆ, ಈ ಪಂದ್ಯಗಳು ಕೂಡ ದುಬೈನಲ್ಲಿ ಮಾತ್ರ ನಡೆಯಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ