
ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ (Champions Trophy 2025) ಆಡುತ್ತಿರುವ ಟೀಂ ಇಂಡಿಯಾ (Team India) ದುಬೈನಲ್ಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಗುಂಪು ಹಂತದ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯಾವಳಿಯ ಮಧ್ಯದಲ್ಲಿ, ಟೀಂ ಇಂಡಿಯಾದ ಪ್ರಮುಖ ಸದಸ್ಯರೊಬ್ಬರ ಮನೆಯಲ್ಲಿ ಸೂತಕ ಮನೆ ಮಾಡಿದೆ. ವಾಸ್ತವವಾಗಿ, ತಂಡದ ವ್ಯವಸ್ಥಾಪಕ ಆರ್ ದೇವರಾಜ್ ಅವರ ತಾಯಿ ನಿಧನರಾಗಿದ್ದಾರೆ. ಹೀಗಾಗಿ ಅವರು ಚಾಂಪಿಯನ್ಸ್ ಟ್ರೋಫಿಯನ್ನು ಅರ್ಧದಲ್ಲೇ ಬಿಟ್ಟು ಭಾರತಕ್ಕೆ ವಾಪಸ್ಸಾಗಿದ್ದಾರೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಅಭಿಮಾನಿಗಳಿಗೆ ಈ ಮಾಹಿತಿ ನೀಡಿದೆ.
ಮೇಲೆ ಹೇಳಿದಂತೆ ಭಾರತ ತಂಡದ ವ್ಯವಸ್ಥಾಪಕ ಆರ್ ದೇವರಾಜ್ ಅವರ ತಾಯಿ ನಿಧನರಾಗಿದ್ದಾರೆ. ದೇವರಾಜ್ ಪ್ರಸ್ತುತ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ದೇವರಾಜ್ ಹೈದರಾಬಾದ್‌ಗೆ ಮರಳಿದ್ದಾರೆ. ಪ್ರಸ್ತುತ ಹೈದರಾಬಾದ್‌ಗೆ ಬಂದಿರುವ ಆರ್ ದೇವರಾಜ್ ದುಬೈಗೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕ್ರಿಕ್‌ಬಜ್ ವರದಿಯ ಪ್ರಕಾರ, ಆರ್. ದೇವರಾಜ್ ದುಬೈಗೆ ಹಿಂತಿರುಗುತ್ತಾರೋ ಇಲ್ಲವೋ ಎಂಬ ಬಗ್ಗೆ ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ದೇವರಾಜ್ ಅವರ ತಾಯಿಯ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿರುವ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್, ‘ನಮ್ಮ ಕಾರ್ಯದರ್ಶಿ ದೇವರಾಜ್ ಅವರ ತಾಯಿ ಕಮಲೇಶ್ವರಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರಾಜ್ ಮತ್ತು ಅವರ ಕುಟುಂಬಕ್ಕೆ ನಮ್ಮ ಹೃತ್ಪೂರ್ವಕ ಸಂತಾಪಗಳು ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಎಂಟ್ರಿ? NCA ಯಿಂದ ಹೊರಬಿತ್ತು ಗುಡ್ ನ್ಯೂಸ್
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಗೆ ಸ್ವಲ್ಪ ಮೊದಲು, ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಅವರ ತಂದೆ ಕೂಡ ನಿಧನರಾದರು, ಇದರಿಂದಾಗಿ ಅವರು ದುಬೈನಿಂದ ದಕ್ಷಿಣ ಆಫ್ರಿಕಾದ ತಮ್ಮ ಮನೆಗೆ ಮರಳಬೇಕಾಯಿತು. ಆದಾಗ್ಯೂ, ಕರ್ಮಗಳನ್ನೆಲ್ಲ ಮುಗಿಸಿದ ಬಳಿಕ ಮೋರ್ನೆ ಮೋರ್ಕೆಲ್ ದುಬೈಗೆ ಮರಳಿ ಟೀಂ ಇಂಡಿಯಾವನ್ನು ಮತ್ತೆ ಕೂಡಿಕೊಂಡರು. ಆದರೆ ತಂಡದ ವ್ಯವಸ್ಥಾಪಕ ಆರ್. ದೇವರಾಜ್ ಹಿಂತಿರುಗುತ್ತಾರೋ ಇಲ್ಲವೋ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಪ್ರತಿ ಪ್ರಮುಖ ಟೂರ್ನಿಗಳಿಗೂ ಟೀಂ ಇಂಡಿಯಾಗೆ ಹೊಸ ಮ್ಯಾನೇಜರ್ ಆಯ್ಕೆಯಾಗುತ್ತಾರೆ. ವ್ಯವಸ್ಥಾಪಕರ ಜವಾಬ್ದಾರಿಗಳು ಸಾಮಾನ್ಯವಾಗಿ ಆಟಗಾರರ ಶಿಸ್ತು, ತರಬೇತುದಾರ ಮತ್ತು ತಂಡದ ನಡುವಿನ ಸಮನ್ವಯ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವುದಾಗಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 pm, Sun, 2 March 25