
ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ಬಿಸಿಸಿಐ (BCCI), ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು (India Squad For Australia Tour) ಪ್ರಕಟಿಸಿದೆ. ಪ್ರಸ್ತುತ ವಿಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿರುವ ಟೀಂ ಇಂಡಿಯಾ ಈ ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಈ ಪ್ರವಾಸ ಅಕ್ಟೋಬರ್ 19 ರಿಂದ ಏಕದಿನ ಸರಣಿಯೊಂದಿಗೆ ಆರಂಭವಾಗಲಿದ್ದು, ನವೆಂಬರ್ 8 ರಂದು ನಡೆಯಲಿರುವ ಕೊನೆಯ ಟಿ20 ಪಂದ್ಯದೊಂದಿಗೆ ಅಂತ್ಯವಾಗಲಿದೆ. ಆಸೀಸ್ ಪ್ರವಾಸಕ್ಕೆ ಆಯ್ಕೆಯಾಗಿರುವ ಟಿ20 ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗದಿದ್ದರೂ, ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಆ ಪ್ರಕಾರ ತಂಡದ ನಾಯಕತ್ವವನ್ನು ಬದಲಾಯಿಸಲಾಗಿದ್ದು, ರೋಹಿತ್ ಶರ್ಮಾ (Rohit Sharma) ಬದಲಿಗೆ ಶುಭ್ಮನ್ ಗಿಲ್ಗೆ (Shubman Gill) ವಹಿಸಲಾಗಿದೆ. ಹಾಗೆಯೇ ತಂಡದ ಉಪನಾಯಕತ್ವದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ಗೆ ನೀಡಲಾಗಿದೆ.
ಏಕದಿನ ತಂಡದ ನಾಯಕತ್ವ ಬದಲಾಗಿದ್ದರೂ ಇಬ್ಬರು ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಲು ಕಾರಣ ಏನೆಂಬುದು ಸಧ್ಯಕ್ಕೆ ಬಹಿರಂಗವಾಗಿಲ್ಲ. ಆದಾಗ್ಯೂ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಈ ಬದಲಾವಣೆ ಮಾಡಿದೆ ಎನ್ನಲಾಗುತ್ತಿದೆ. ಇದರರ್ಥ ರೋಹಿತ್, ಕೊಹ್ಲಿಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆಯ ಸರಣಿ ಆದರೂ ಆಗಬಹುದು.
ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟವಾಗಿರುವ ಎರಡೂ ತಂಡಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ಗೆ ಸ್ಥಾನ ನೀಡಲಾಗಿಲ್ಲ. ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕಾಲಿಗೆ ಗಂಭೀರವಾಗಿ ಗಾಯಮಾಡಿಕೊಂಡಿದ್ದ ಪಂತ್ ಪ್ರಸ್ತುತ ಚೇತರಿಕೆಯ ಹಂತದಲಿದ್ದಾರೆ. ಹೀಗಾಗಿ ಅವರಿಗೆ ಈ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಅವರ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ತಂಡದ ಮೊದಲ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದು, ಧ್ರುವ್ ಜುರೇಲ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಅಂದರೆ ರಾಹುಲ್ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುವುದು ಖಚಿತವಾಗಿದೆ. ಇತ್ತ ಟಿ20 ತಂಡದಲ್ಲಿ ಜಿತೇಶ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ಗಳಾಗಿ ಆಯ್ಕೆಯಾಗಿದ್ದು, ಇವರಿಬ್ಬರಲ್ಲಿ ಯಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿದೆ ಎಂಬುದನ್ನು ಕಾದುನೋಡಬೇಕು.
ಪ್ರಸ್ತುತ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾಗೆ ಏಕದಿನ ತಂಡದಲ್ಲಿ ಅವಕಾಶ ನೀಡಿಲ್ಲ. ಆದಾಗ್ಯೂ ಅವರನ್ನು ಟಿ20 ಸರಣಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹಾಗೆಯೇ ಏಷ್ಯಾಕಪ್ ವೇಳೆ ಗಾಯಕ್ಕೆ ತುತ್ತಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಇಡೀ ಪ್ರವಾಸದಿಂದಲೇ ಕೈಬಿಡಲಾಗಿದೆ. ಅವರ ಚೇತರಿಕೆಗೆ ಇನ್ನು ಕಾಲಾವಕಾಶ ಹಿಡಿಯುವುದರಿಂದ ಈ ನಿರ್ಧಾರಕ್ಕೆ ಆಯ್ಕೆ ಮಂಡಳಿ ಬಂದಿದೆ.
🚨 India’s squad for Tour of Australia announced
Shubman Gill named #TeamIndia Captain for ODIs
The #AUSvIND bilateral series comprises three ODIs and five T20Is against Australia in October-November pic.twitter.com/l3I2LA1dBJ
— BCCI (@BCCI) October 4, 2025
ಭಾರತ ಏಕದಿನ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ , ಮೊಹಮ್ಮದ್ ಸಿರಾಜ್ , ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೆಲ್ , ಯಶಸ್ವಿ ಜೈಸ್ವಾಲ್ .
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ( ಉಪನಾಯಕ ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ , ಶಿವಂ ದುಬೆ , ಅಕ್ಷರ್ ಪಟೇಲ್, ಜಿತೇಶ್ ಶರ್ಮಾ ( ವಿಕೆಟ್ ಕೀಪರ್ ) , ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ , ಅರ್ಷ್‌ದೀಪ್ ಸಿಂಗ್, ಕುಲ್ದೀಪ್ ಯಾದವ್ , ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್ , ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Sat, 4 October 25