ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ
India vs Sri Lanka Test Series 2026: 2026ರಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 15ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ನಿರ್ಣಾಯಕವಾಗಿದೆ. ಇದರೊಂದಿಗೆ ಟಿ20 ಸರಣಿಯೂ ನಿರೀಕ್ಷಿಸಲಾಗಿದೆ. ಒಂಬತ್ತು ವರ್ಷಗಳ ನಂತರ ಭಾರತ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಶುಭ್ಮನ್ ಗಿಲ್ ನಾಯಕತ್ವದಲ್ಲಿ ಯುವ ಪಡೆ ಪ್ರದರ್ಶನ ನೀಡಲಿದೆ. ಗಾಲೆ ಮತ್ತು ಕೊಲಂಬೊ ಮೈದಾನಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ (Team India) ಯಾವುದೇ ಪ್ರಯೋಜನವಾಗಿರಲಿಲ್ಲ. ಏಕೆಂದರೆ ಈ ಟೆಸ್ಟ್ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ( WTC Points Table) 6ನೇ ಸ್ಥಾನದಲ್ಲಿಯೇ ಇದೆ. ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್ ಆಡಬೇಕೆಂದರೆ ಉಳಿದಿರುವ ಸರಣಿಗಳು ನಿರ್ಣಾಯಕವಾಗಿದೆ. ಅದರಂತೆ ಟೀಂ ಇಂಡಿಯಾ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಎಲ್ಲಿ, ಯಾವಾಗ, ಯಾವ ತಂಡದ ವಿರುದ್ಧ ಆಡಲಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಆಗಸ್ಟ್ 15 ರಿಂದ ಸರಣಿ ಆರಂಭ
ಕ್ರಿಕ್‌ಬಜ್ ವರದಿಯ ಪ್ರಕಾರ, ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಜೊತೆಗೆ ಟೀಂ ಇಂಡಿಯಾ ಟಿ20 ಸರಣಿಯನ್ನು ಆಡಲಿದೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ, ಉಭಯ ದೇಶಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15, 2026 ರಂದು ಪ್ರಾರಂಭವಾಗಲಿದೆ. ಆದಾಗ್ಯೂ ಬಿಸಿಸಿಐ ಆಗಲಿ ಶ್ರೀಲಂಕಾ ಕ್ರಿಕೆಟ್ ಆಗಲಿ ಈ ಸರಣಿಯ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲವಾದರೂ, ಸಂಪೂರ್ಣ ಸರಣಿಯ ವೇಳಾಪಟ್ಟಿ ಬಹುತೇಕ ಅಂತಿಮಗೊಂಡಿದೆ.
ಈ ಟೆಸ್ಟ್ ಸರಣಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿರುವ ಕಾರಣ, ಫೈನಲ್ಗೆ ಅರ್ಹತೆ ಪಡೆಯಲು ಈ ಸರಣಿಯು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ವರದಿಯ ಪ್ರಕಾರ, ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯ ಗಾಲೆ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಿಂದ ಆಗಸ್ಟ್ 19 ರವರೆಗೆ ನಡೆಯುವ ನಿರೀಕ್ಷೆಯಿದೆ. ಮೊದಲ ಪಂದ್ಯದ ನಂತರ, ಎರಡೂ ತಂಡಗಳು ಕೊಲಂಬೊಗೆ ತೆರಳಲಿವೆ. ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಆಗಸ್ಟ್ 23 ರಿಂದ ಆಗಸ್ಟ್ 27 ರವರೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುವ ನಿರೀಕ್ಷೆಯಿದೆ.
9 ವರ್ಷಗಳ ನಂತರ ಸರಣಿ
ಒಂಬತ್ತು ವರ್ಷಗಳ ನಂತರ ಭಾರತ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಮೊದಲು 2017 ರಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಭಾರತ ತಂಡವು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಸಿಂಹಳೀಯರ ನಾಡಿಗೆ ಕಾಲಿಡುತ್ತಿರುವ ಯುವ ಪಡೆ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ
ಟೆಸ್ಟ್ ಜೊತೆಗೆ ಟಿ20 ಸರಣಿ
ಮೇಲೆ ಹೇಳಿದಂತೆ ಈ ಟೆಸ್ಟ್ ಸರಣಿಯ ಜೊತೆಗೆ, ಎರಡೂ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯನ್ನು ಸಹ ಆಡಲಿವೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯ ಕುರಿತು ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ. ಹೀಗಾಗಿ ಟೆಸ್ಟ್ ಸರಣಿಯ ನಂತರ ಟಿ20 ಸರಣಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.




