ಟೀಂ ಇಂಡಿಯಾಕ್ಕೆ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟು, ಚುಟುಕು ಮಾದರಿಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ ರಾಜಕೀಯ ಕ್ಷೇತ್ರದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಇದೀಗ ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯತ್ವ ಸ್ವೀಕರಿಸಿದ್ದಾರೆ. ವಾಸ್ತವವಾಗಿ ರವೀಂದ್ರ ಜಡೇಜಾ ಅವರ ಪತ್ನಿ ಈಗಾಗಲೇ ಬಿಜೆಪಿಯಲ್ಲಿದ್ದು, ಅವರು ಗುಜರಾತ್‌ನ ಜಾಮ್‌ನಗರ ಉತ್ತರ ಕ್ಷೇತ್ರದ ಶಾಸಕರೂ ಆಗಿದ್ದಾರೆ. ಇದೀಗ ಪತಿ ರವೀಂದ್ರ ಜಡೇಜಾ ಬಿಜೆಪಿಯ ಸದಸ್ಯತ್ವ ಸ್ವೀಕರಿಸಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ರಿವಾಬಾ ಜಡೇಜಾ ಈ ಮಾಹಿತಿ ನೀಡಿದ್ದಾರೆ.
ಈ ದಿನಗಳಲ್ಲಿ, ಗುಜರಾತ್ ಮತ್ತು ಕೇಂದ್ರದ ಆಡಳಿತಾರೂಢ ಬಿಜೆಪಿ ದೇಶಾದ್ಯಂತ ಸದಸ್ಯತ್ವ ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಇದೀಗ ಜಡೇಜಾ ಕೂಡ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ರಿವಾಬಾ ತಮ್ಮ ‘ಎಕ್ಸ್’ ಖಾತೆಯಲ್ಲಿ ಇಬ್ಬರ ಸದಸ್ಯತ್ವ ಪ್ರಮಾಣಪತ್ರಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ರವೀಂದ್ರ ಜಡೇಜಾ ಈ ಹಿಂದೆ 2022 ರಲ್ಲಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪತ್ನಿ ಪರ ಪ್ರಚಾರ ಮಾಡಿದ್ದರು.
🪷 #SadasyataAbhiyaan2024 pic.twitter.com/he0QhsimNK
— Rivaba Ravindrasinh Jadeja (@Rivaba4BJP) September 2, 2024
ಮೇಲೆ ಹೇಳಿದಂತೆ ಕಳೆದ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಟಿ20 ವಿಶ್ವ ಚಾಂಪಿಯನ್ ಮಾಡಿದ ಬಳಿಕ ಜಡೇಜಾ ಈ ಸ್ವರೂಪಕ್ಕೆ ನಿವೃತ್ತಿ ಘೋಷಿಸಿದ್ದರು. ಅಂದಿನಿಂದ ಕ್ರಿಕೆಟ್ ಆ್ಯಕ್ಷನ್‌ನಿಂದ ದೂರ ಉಳಿದಿರುವ ಜಡೇಜಾ, ಕಳೆದ ತಿಂಗಳು ಶ್ರೀಲಂಕಾ ಪ್ರವಾಸದಲ್ಲಿ ನಡೆದ ಏಕದಿನ ಸರಣಿಯಲ್ಲೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇನ್ನು ಗುರುವಾರದಿಂದ ಅಂದರೆ ಇಂದಿನಿಂದ ಆರಂಭವಾದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ತಂಡದಲ್ಲಿ ಆಯ್ಕೆಯಾಗಿದ್ದ ಅವರು ಟೂರ್ನಿಯ ಆರಂಭಕ್ಕೆ ಒಂದು ವಾರದ ಮೊದಲು ಟೂರ್ನಿಯಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ಆಯ್ಕೆ ಸಮಿತಿ ಕೂಡ ಅವರ ಕೋರಿಕೆಯನ್ನು ಸ್ವೀಕರಿಸಿ ವಿರಾಮ ತೆಗೆದುಕೊಳ್ಳಲು ಅನುಮೋದಿಸಿತು.
ಪ್ರಸ್ತುತ ರಾಜಕೀಯ ಲೋಕಕ್ಕೆ ಕಾಲಿಟ್ಟಿರುವ ರವೀಂದ್ರ ಜಡೇಜಾ ಇದೀಗ ಈ ತಿಂಗಳಿನಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯಿಂದ ಭಾರತ ತಂಡಕ್ಕೆ ಮರಳಲಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಟೆಸ್ಟ್‌ಗಳ ಸರಣಿಯು ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಜಡೇಜಾ ತಂಡದ ಪ್ರಮುಖ ಭಾಗವಾಗಲಿದ್ದಾರೆ. ಈ ಸರಣಿ ಮಾತ್ರವಲ್ಲ, ಆ ಬಳಿಕ ನಡೆಯಲಿರುವ ನ್ಯೂಜಿಲೆಂಡ್ ಸರಣಿಯಲ್ಲೂ ಅವರ ಪಾತ್ರ ದೊಡ್ಡದಿದೆ. ಜಡೇಜಾ ಇದುವರೆಗೆ 72 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 294 ವಿಕೆಟ್‌ಗಳ ಜೊತೆಗೆ 3036 ರನ್‌ಗಳನ್ನು ಸಹ ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Thu, 5 September 24