2022ರ ಏಷ್ಯಾಕಪ್‌ನಲ್ಲಿ (Asia Cup 2022) ಭಾರತ ತಂಡದ ಪಯಣ ಅಂತ್ಯಗೊಂಡಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 101 ರನ್‌ಗಳ ಗೆಲುವಿನೊಂದಿಗೆ ವಿದಾಯ ಹೇಳಿತು. ಇದೀಗ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ತಯಾರಿ ಆರಂಭಿಸಲಿದೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕವಾಗಲಿದೆ.
ಏಷ್ಯಾಕಪ್‌ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿರಬಹುದು. ಆದರೆ, ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಈ ಪಂದ್ಯಾವಳಿ ತುಂಬಾ ವಿಶೇಷವಾಗಿತ್ತು. ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಸುಮಾರು ಮೂರು ವರ್ಷಗಳ ಶತಕಗಳ ಬರಗಾಲವನ್ನು ಕೊನೆಗೊಳಿಸಿದರು. 2022ರ ಏಷ್ಯಾಕಪ್‌ನಲ್ಲಿ ಕೊಹ್ಲಿ 5 ಪಂದ್ಯಗಳಲ್ಲಿ 276 ರನ್ ಗಳಿಸಿದ್ದರು. ಈ ಸಮಯದಲ್ಲಿ, ಅವರು ಬ್ಯಾಟ್‌ನಿಂದ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದರು. ಸದ್ಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ.
ಇದೀಗ ವಿರಾಟ್ ಕೊಹ್ಲಿ ಮತ್ತೊಮ್ಮೆ ಇನ್‌ಸ್ಟಾಗ್ರಾಮ್‌ನಲ್ಲಿ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇದು ಕೊಹ್ಲಿಯ ಬಾಲ್ಯದ ಫೋಟೋವಾಗಿದ್ದು, ಅದರಲ್ಲಿ ಅವರು ಆಹಾರವನ್ನು ಸೇವಿಸುತ್ತಿರುವುದನ್ನು ಕಾಣಬಹುದು. ಜೊತೆಗೆ ಖಾವೋ ಪಿಯೋ ಐಶ್ ಕರೋ ಮಿತ್ರೋ, ದಿಲ್ ಪರ್ ಕಿಸೆ ದ ದುಖಾಯೇ ನಾ (ತಿನ್ನಿ, ಕುಡೀರಿ, ಮಜಾ ಮಾಡಿ ಸ್ನೇಹಿತರೇ,ಆದ್ರೆ ಯಾರ ಮನಸನ್ನೂ ನೋಯಿಸಬೇಡಿ) ಎಂದು ಕೊಹ್ಲಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಯಾರೂ ನನಗೆ ಮೆಸೇಜ್ ಅಥವಾ ಕಾಲ್ ಮಾಡಲಿಲ್ಲ
ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಹಲವು ಸಂದರ್ಭಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಏಷ್ಯಾಕಪ್ 2022 ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ಮಾತನಾಡಿದ್ದ ಕೊಹ್ಲಿ, ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಂತರ ಎಂಎಸ್ ಧೋನಿ ಮಾತ್ರ ತನಗೆ ಸಂದೇಶವನ್ನು ನೀಡಿದ್ದರು ಎಂದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ‘ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ನಾನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಾಗ, ನನಗೆ ಒಬ್ಬ ವ್ಯಕ್ತಿಯಿಂದ ಸಂದೇಶ ಬಂದಿತು. ಅದು ಮಹೇಂದ್ರ ಸಿಂಗ್ ಧೋನಿ. ಅನೇಕ ಜನರ ಬಳಿ ನನ್ನ ನಂಬರ್ ಇದೆ. ಟಿವಿಯಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ನನ್ನ ನಂಬರ್ ಇರುವ ಯಾರೂ ನನಗೆ ಮೆಸೇಜ್ ಮಾಡಿಲ್ಲ.
ಯಾರಿಗಾದರೂ ಗೌರವ ಮತ್ತು ವಾತ್ಸಲ್ಯ ಇದ್ದಾಗ ಹೀಗೆ ಆಗುತ್ತದೆ’ ಎಂದು ಕೊಹ್ಲಿ ಹೇಳಿದ್ದಾರೆ. ನಾನು ಅವರೊಂದಿಗೆ ಎಂದಿಗೂ ಅಭದ್ರತೆಯನ್ನು ಅನುಭವಿಸಲಿಲ್ಲ. ನಾನು ಯಾರಿಗಾದರೂ ಏನನ್ನಾದರೂ ಹೇಳಲು ಬಯಸಿದರೆ, ನಾನು ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸುತ್ತೇನೆ ಎಂದು ನಾನು ಹೇಳಬಲ್ಲೆ. ನನ್ನ ಅಭಿಪ್ರಾಯದಲ್ಲಿ, ಇಡೀ ಪ್ರಪಂಚದ ಮುಂದೆ ಅಭಿಪ್ರಾಯವನ್ನು ನೀಡುವುದು ಸೂಕ್ತವಲ್ಲ, ನೀವು ನನಗೆ ಸಹಾಯ ಮಾಡಲು ಬಯಸಿದರೆ, ನೀವು ನನಗೆ ವೈಯಕ್ತಿಕವಾಗಿ ಹೇಳಬಹುದು ಎಂದು ಕೊಹ್ಲಿ ಹೇಳಿಕೊಂಡಿದ್ದರು.
Published On - 2:50 pm, Sun, 11 September 22