Asia Cup 2023: 2-1= 4.. ಮೀಸಲು ದಿನದ ಪಂದ್ಯಗಳಲ್ಲಿ ಭಾರತ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

| Updated By: ಪೃಥ್ವಿಶಂಕರ

Updated on: Sep 11, 2023 | 12:18 PM

Asia Cup 2023: ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್ 4 ಸುತ್ತಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಆದರೆ ಈ ಮೀಸಲು ದಿನದಂದು ನಡೆಯುವ ಪಂದ್ಯಗಳು ಭಾರತದ ಪಾಲಿಗೆ ಅಷ್ಟು ಶುಭ ಸುದ್ದಿ ನೀಡಲ್ಲ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

Asia Cup 2023: 2-1= 4.. ಮೀಸಲು ದಿನದ ಪಂದ್ಯಗಳಲ್ಲಿ ಭಾರತ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?
ಟೀಂ ಇಂಡಿಯಾ
Follow us on

ಶ್ರೀಲಂಕಾ ಹಾಗೂ ಪಾಕಿಸ್ತಾನದ (Sri lanka and Pakistan) ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಕಾಂಟಿನೆಂಟಲ್ ಟೂರ್ನಮೆಂಟ್ (Asia Cup 2023)​ ಮಳೆಗೆ ಆಹುತಿಯಾಗುತ್ತಿದೆ. ಟೂರ್ನಿಯ ಮೂರನೇ ಪಂದ್ಯದಿಂದಲೇ ತನ್ನ ಹಾಜರಿಯನ್ನಾಕಲು ಆರಂಭಿಸಿದ ವರುಣ ದೇವ, ಪಂದ್ಯಾವಳಿ ಮುಗಿಯುವ ಹಂತಕ್ಕೆ ಬಂದರು ತನ್ನ ಆಟವನ್ನು ನಿಲ್ಲಿಸುತ್ತಿಲ್ಲ. ಏಷ್ಯಾಕಪ್​ಗೆ ಮಳೆ ಅಡ್ಡಿಯನ್ನುಂಟು ಮಾಡುವ ಆತಂಕದ ನಡುವೆಯೂ ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸುವ ನಿರ್ಧಾರ ಕೈಗೊಂಡಿದ್ದ ಎಸಿಸಿಗೆ (ACC) ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಾಕಿಸ್ತಾನದಲ್ಲಿ ನಡೆದ ನಾಲ್ಕೂ ಪಂದ್ಯಗಳು ಯಾವುದೇ ಅಡ್ಡಿ ಇಲ್ಲದೆ ನಡೆದರೆ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗೆ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ. ಮಳೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಲೀಗ್ ಹಂತದ ಪಂದ್ಯವೂ ರದ್ದಾಗಿತ್ತು. ಇದೀಗ ನಡೆಯುತ್ತಿರುವ ಸೂಪರ್ 4 ಸುತ್ತಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಆದರೆ ಈ ಮೀಸಲು ದಿನದಂದು ನಡೆಯುವ ಪಂದ್ಯಗಳು ಭಾರತದ ಪಾಲಿಗೆ ಅಷ್ಟು ಶುಭ ಸುದ್ದಿ ನೀಡಲ್ಲ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಮೀಸಲು ದಿನದಂದು ಭಾರತದ ಪ್ರದರ್ಶನ

ವಾಸ್ತವವಾಗಿ ಈ ಪಂದ್ಯವೂ ಸೇರಿದಂತೆ ಟೀಂ ಇಂಡಿಯಾ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದುವರೆಗೆ 5 ಪಂದ್ಯಗಳನ್ನು ಮೀಸಲು ದಿನದಲ್ಲಿ ಆಡಿದೆ. ಇದಕ್ಕೆ ಐಪಿಎಲ್​ನ್ನು ಸೇರಿದರೆ ಟೀಂ ಇಂಡಿಯಾ ಒಟ್ಟು 6 ಬಾರಿ ಮೀಸಲು ದಿನದಂದು ಪಂದ್ಯವನ್ನಾಡಿದೆ. ಇದರಲ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಟೀಂ ಇಂಡಿಯಾದ ಸೋಲು- ಗೆಲುವಿನ ಲೆಕ್ಕಾಚಾರವನ್ನು ನೋಡುವುದಾದರೆ, ಆಡಿರುವ ನಾಲ್ಕು ಪಂದ್ಯಗಳಲ್ಲಿ 1 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ, 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನುಳಿದ ಒಂದು ಪಂದ್ಯ ಮೀಸಲು ದಿನದಂದು ಪೂರ್ಣಗೊಳ್ಳದೆ ಉಭಯ ತಂಡಗಳಿಗೆ ಪ್ರಶಸ್ತಿ ಸಮಾನಾಗಿ ಹಂಚಿಕೆಯಾಗಿದೆ.

BREAKING: ಸೆ. 17 ರಂದು ನಡೆಯಲ್ಲಿರುವ ಏಷ್ಯಾಕಪ್ ಫೈನಲ್ ಪಂದ್ಯ ಕೊಲಂಬೊದಿಂದ ಸ್ಥಳಾಂತರ..!

ಮೊದಲ ಪಂದ್ಯ

ಟೀಂ ಇಂಡಿಯಾ ಮೊದಲ ಬಾರಿಗೆ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ 1999 ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ ಮೀಸಲು ದಿನದಂದು ಪಂದ್ಯವನ್ನಾಡಿತ್ತು. ಆಗ ಸೌರವ್ ಗಂಗೂಲಿಯ ಆಲ್‌ರೌಂಡ್ ಪ್ರದರ್ಶನದಿಂದಾಗಿ ಮೆನ್ ಇನ್ ಬ್ಲೂ ಪಡೆ ಆಂಗ್ಲರನ್ನು ಬಗ್ಗು ಬಡಿದಿತ್ತು.

ಎರಡನೇ ಪಂದ್ಯ

ಮೂರು ವರ್ಷಗಳ ನಂತರ, ಭಾರತ ಮತ್ತು ಶ್ರೀಲಂಕಾ ನಡುವಿನ 2002 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಕೂಡ ಮೀಸಲು ದಿನಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ ಮೀಸಲು ದಿನದಂದೂ ಸಹ ಮಳೆ ಬಂದಿದ್ದರಿಂದ ಪಂದ್ಯವನ್ನು ಪೂರ್ಣಗೊಳಿಸಲಾಗದೆ ಎರಡೂ ತಂಡಗಳು ಟ್ರೋಫಿಯನ್ನು ಹಂಚಿಕೊಂಡಿದ್ದವು.

ಮೂರನೇ ಪಂದ್ಯ

ಇನ್ನು ಮೂರನೇ ಮತ್ತು ನಾಲ್ಕನೇ ಬಾರಿಗೆ ನಡೆದ ಮೀಸಲು ದಿನದ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಸೋಲಿನ ಶಾಕ್ ಎದುರಾಗಿತ್ತು. 2019 ರಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯವೂ ಮಳೆಯಿಂದಾಗಿ ಮೀಸಲು ದಿನಕ್ಕೆ ಮುಂದೂಡಲ್ಪಟ್ಟಿತ್ತು. ನ್ಯೂಜಿಲೆಂಡ್ ಮತ್ತು ಭಾರತದ ನಡುವೆ ನಡೆದ ಈ ಸೆಮಿಫೈನಲ್ ಪಂದ್ಯದಲ್ಲಿ ನಿಗದಿತ ದಿನದಂದು ಕಿವೀಸ್ ಎದುರು ಉತ್ತಮ ಆಟ ಪ್ರದರ್ಶಿಸಿದ್ದ ಭಾರತ, ಮೀಸಲು ದಿನದಂದು ಮುಗ್ಗರಿಸಿತ್ತು. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಎದುರು ಸೋತ ಭಾರತ ಪ್ರಶಸ್ತಿಯಿಂದ ವಂಚಿತವಾಗಿತ್ತು.

ನಾಲ್ಕನೇ ಪಂದ್ಯ

ಆ ಬಳಿಕ ಅಂದರೆ ಎರಡು ವರ್ಷಗಳ ನಂತರ, ವಿರಾಟ್ ಕೊಹ್ಲಿ ನೇತೃತ್ವದ ತಂಡ 2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಅದೇ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿತ್ತು. ಆದರೆ ಮಳೆಯಿಂದಾಗಿ ಮೀಸಲು ದಿನಕ್ಕೆ ಹೋದ ಈ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಎದುರು ಭಾರತ ಮತ್ತೊಮ್ಮೆ ಮುಗ್ಗರಿಸಿತ್ತು. ಹೀಗಾಗಿ ಆಡಿರುವ 4 ಮೀಸಲು ದಿನದ ಪಂದ್ಯಗಳಲ್ಲಿ ಭಾರತ 1-2 ಅಂತರದಿಂದ ಹಿನ್ನಡೆ ಅನುಭವಿಸಿದೆ.

ಇದೀಗ ಪಾಕಿಸ್ತಾನದ ವಿರುದ್ಧ ಮೀಸಲು ದಿನದಂದು ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ ತನ್ನ ಹಳೆಯ ದಾಖಲೆಗಳನ್ನೆಲ್ಲ ಮರೆತು, ಈ ಪಂದ್ಯವನ್ನು ಗೆದ್ದು ತೋರಿಸಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ