T20 World Cup 2022: ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಬಲಿಷ್ಠ ಪಾಕಿಸ್ತಾನ್ (India vs Pakistan) ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ (Team India) ಶುಭಾರಂಭ ಮಾಡಿದೆ. ಇಂತಹದೊಂದು ಭರ್ಜರಿ ಗೆಲುವಿನ ಕಾರಣಕರ್ತ ಕಿಂಗ್ ಕೊಹ್ಲಿ. ಏಕೆಂದರೆ ಪಾಕಿಸ್ತಾನ್ ನೀಡಿದ 160 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 31 ರನ್ಗಳಿಗೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 113 ರನ್ಗಳ ಜೊತೆಯಾಟವಾಡಿದರು. ಈ ಉತ್ತಮ ಜೊತೆಯಾಟದ ಪರಿಣಾಮ ಟೀಂ್ ಇಂಡಿಯಾಗೆ ಅಂತಿಮ 3 ಓವರ್ಗಳ ವೇಳೆ 48 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಅಕ್ಷರಶಃ ವಿರಾಟ್ ಕೊಹ್ಲಿ ಅಬ್ಬರಿಸಲಾರಂಭಿಸಿದರು.
ಶಾಹೀನ್ ಅಫ್ರಿದಿ ಎಸೆದ 18ನೇ ಓವರ್ನಲ್ಲಿ ಕೊಹ್ಲಿ ಮೂರು ಭರ್ಜರಿ ಬೌಂಡರಿ ಬಾರಿಸಿದರು. ಅಲ್ಲದೆ ಆ ಓವರ್ನಲ್ಲಿ 17 ರನ್ ಕಲೆಹಾಕಿದರು. ಅಂತಿಮ 12 ಎಸೆತಗಳಲ್ಲಿ 31 ರನ್ ಗಳಿಸಬೇಕಿತ್ತು. ಪಾಕ್ ವೇಗಿ ಹ್ಯಾರಿಸ್ ರೌಫ್ ಎಸೆದ 19ನೇ ಓವರ್ನಲ್ಲಿ ಭರ್ಜರಿ 2 ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದರು. ಹಾಗೆಯೇ ಕೊನೆಯ ಓವರ್ನಲ್ಲಿ 16 ರನ್ಗಳ ಗುರಿಯೊಂದಿಗೆ ಬ್ಯಾಟ್ ಬೀಸಿದ ಕೊಹ್ಲಿ ಬೌಲರ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದರಲ್ಲೂ ಮೊಹಮ್ಮದ್ ನವಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಅಶ್ವಿನ್ 1 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸಿತು.
ಇತ್ತ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದ ವಿರಾಟ್ ಕೊಹ್ಲಿಯ ಇನಿಂಗ್ಸ್ಗೆ ಇದೀಗ ಬಹುಪರಾಕ್ ಕೇಳಿ ಬರುತ್ತಿದೆ. ಅದರಲ್ಲೂ ದೇಶ-ವಿದೇಶದ ಸ್ಟಾರ್ ಕ್ರಿಕೆಟಿಗರು ಕೂಡ ಕೊಹ್ಲಿ ಬ್ಯಾಟಿಂಗ್ಗೆ ಮೆಚ್ಚುಗೆಗಳ ಸುರಿಮಳೆ ಸುರಿಸಿದ್ದಾರೆ. ಮುಖ್ಯವಾಗಿ ಎಬಿ ಡಿವಿಲಿಯರ್ಸ್ ವಿಶೇಷವಾಗಿ ಟ್ವೀಟ್ ಮಾಡಿ ಗೆಳೆಯನನ್ನು ಹಾಡಿಹೊಗಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಬಿ ಡಿವಿಲಿಯರ್ಸ್, ಗೆಳೆಯಾ, ಈ ಇನಿಂಗ್ಸ್ ಅತ್ಯದ್ಭುತವಾಗಿತ್ತು. ಇದು ಶ್ರೇಷ್ಠ ಇನಿಂಗ್ಸ್ಗಳಲ್ಲೇ ಅತೀ ಶ್ರೇಷ್ಠ ಇನಿಂಗ್ಸ್ ಎಂದು ಕಿಂಗ್ ಕೊಹ್ಲಿಯ ಬ್ಯಾಟಿಂಗ್ಗೆ ಮಿಸ್ಟರ್ 360 ಡಿಗ್ರಿ ಬಹುಪರಾಕ್ ಅಂದಿದ್ದಾರೆ.
ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ
ಇದೀಗ ಎಬಿಡಿಯ ಈ ಟ್ವೀಟ್ ವೈರಲ್ ಆಗಿದ್ದು, ಅಭಿಮಾನಿಗಳು ಇಬ್ಬರ ಗೆಳೆತನವನ್ನೂ ಕೂಡ ಹಾಡಿಹೊಗಳುತ್ತಿದ್ದಾರೆ. ಜೊತೆಯಾಗಿ ಆರ್ಸಿಬಿ ಪರ ಆಡಿದ್ದ ಕಿಂಗ್ ಕೊಹ್ಲಿ-ಎಬಿಡಿ ಹಲವು ಅದ್ಭುತ ಇನಿಂಗ್ಸ್ಗಳನ್ನು ಆಡಿದ್ದರು. ಇದೀಗ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಆಡಿರುವ ಇನಿಂಗ್ಸ್ಗೆ ಎಬಿಡಿ ಮೆಚ್ಚುಗೆಗಳನ್ನು ಸೂಚಿಸಿರುವುದು ವಿಶೇಷ.