
ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಚಿತ್ರ ಮತ್ತು ನಾಚಿಕೆಗೇಡಿನ ವಂಚನೆಯೊಂದು ಬ್ರಿಟನ್ನ ಹವ್ಯಾಸಿ ಕ್ರಿಕೆಟ್ ಅಂಗಳದಲ್ಲಿ ಬಯಲಾಗಿದೆ. ಫೀಲ್ಡಿಂಗ್ ಮಾಡುವಾಗ ಬ್ಯಾಟರ್ಗಳನ್ನು ಔಟ್ ಮಾಡಲು ಬೆರಳುಗಳಿಂದ ‘ಚಿಟಿಕಿ’ ಶಬ್ದ ಮಾಡುತ್ತಾ ಅಂಪೈರ್ಗಳನ್ನೇ ದಿಕ್ಕು ತಪ್ಪಿಸುತ್ತಿದ್ದ ಆಟಗಾರನೊಬ್ಬನ ಅಸಲಿ ಮುಖವಾಡ ಕಡೆಗೂ ಕಳಚಿ ಬಿದ್ದಿದೆ.
ಬ್ರಿಟನ್ನ ಸಾಲ್ಟ್ಬರ್ನ್ ಕ್ರಿಕೆಟ್ ಕ್ಲಬ್ನ 38 ವರ್ಷದ ಹವ್ಯಾಸಿ ಆಟಗಾರ ಬ್ರಿಯಾನ್ ಡೆವೈನ್, ಫೀಲ್ಡಿಂಗ್ ಮಾಡುವಾಗ ಬ್ಯಾಟರ್ಗಳನ್ನು ಔಟ್ ಮಾಡಲು ಅಡ್ಡದಾರಿ ಹಿಡಿದಿದ್ದರು. ಇವರು ಫಸ್ಟ್ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುವಾಗ, ಚೆಂಡು ಬ್ಯಾಟ್ಗೆ ತಾಗಿ ಹೋದಂತೆ ಭ್ರಮೆ ಮೂಡಿಸಲು ತಮ್ಮ ಬೆರಳುಗಳಿಂದ ಜೋರಾಗಿ ಚಿಟಿಕಿ ಹೊಡೆಯುತ್ತಿದ್ದರು. ಈ ಶಬ್ದವನ್ನು ಕೇಳಿ ಚೆಂಡು ಬ್ಯಾಟ್ಗೆ ಎಡ್ಜ್ ಆಗಿದೆ ಎಂದು ಭಾವಿಸುತ್ತಿದ್ದ ಅಂಪೈರ್ಗಳು ಔಟ್ ನೀಡುತ್ತಿದ್ದರು.
ಇದು ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಆಗಿದ್ದರಿಂದ, ಈ ಟೂರ್ನಿಯಲ್ಲಿ ಡಿಆರ್ಎಸ್ ವ್ಯವಸ್ಥೆ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಬ್ರಿಯಾನ್ ಡೆವೈನ್, ಚೆಂಡು ಬ್ಯಾಟ್ ಹತ್ತಿರ ಬರುತ್ತಿದ್ದಂತೆ ಚಿಟಿಕೆ ಹೊಡೆಯುತ್ತಿದ್ದರು. ಇತ್ತ ವಿಕೆಟ್ ಕೀಪರ್ ಕ್ಯಾಚ್ ಹಿಡಿದು ಮನವಿ ಮಾಡುತ್ತಿದ್ದಂತೆ ಅಂಪೈರ್ ಔಟ್ ನೀಡುತ್ತಿದ್ದರು.
ಇದನ್ನು ಗಮನಿಸಿದ ವ್ಯಕ್ತಿಯೋರ್ವ ಬ್ರಿಯಾನ್ ಡೆವೈನ್ ಚಿಟಿಕಿಯ ಕಳ್ಳಾಟದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಳ್ಳಾಟಕ್ಕೆ ಇದೀಗ ‘ಕ್ಲಿಕ್ಕಿ ಪಾಂಟಿಂಗ್’ ಹೆಸರಿಡಲಾಗಿದೆ.
ಆಸ್ಟ್ರೇಲಿಯಾದ ಆಕ್ರಮಣಕಾರಿ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರನ್ನು ಪ್ರಸ್ತಾಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬ್ರಿಯಾನ್ ಡೆವೈನ್ನನ್ನು ಈಗ ‘ಕ್ಲಿಕ್ಕಿ ಪಾಂಟಿಂಗ್’ ಎಂದು ಟ್ರೋಲ್ ಮಾಡಲಾಗುತ್ತಿದೆ.
ಬ್ರಿಯಾನ್ ಡೆವೈನ್ ಅವರ ಕಳ್ಳಾಟ ಬೆಳಕಿಗೆ ಬರುತ್ತಿದ್ದಂತೆ ಇಂಟರ್ನೆಟ್ ವಿಶ್ಲೇಷಕರು ಈತನ ಹಳೆಯ ಪಂದ್ಯಗಳ ದಾಖಲೆಗಳನ್ನು ಕೆದಕಿದಿದ್ದಾರೆ. ಈ ವೇಳೆ ಆಘಾತಕಾರಿ ಸತ್ಯ ಹೊರಬಿದ್ದಿದೆ…
ಒಂದು ಪಂದ್ಯದಲ್ಲಂತೂ ವಿಕೆಟ್ ಕೀಪರ್ ಬರೋಬ್ಬರಿ 8 ಕ್ಯಾಚ್ಗಳನ್ನು ಹಿಡಿದು ದಾಖಲೆ ಬರೆದಿದ್ದರು. ಇದೆಲ್ಲವೂ ಈ ಚಿಟಿಕಿ ತಂತ್ರದ ಭಾಗವಾಗಿತ್ತು ಎಂಬುದು ಈಗ ಸಾಬೀತಾಗಿದೆ.
ಈ ವಂಚನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಸಾಲ್ಟ್ಬರ್ನ್ ತಂಡದ ಪ್ರಾಯೋಜಕರಾದ ‘ಸ್ಪೈಸಸ್’ (Spices) ಹೆಸರಿನ ಸ್ಥಳೀಯ ಭಾರತೀಯ ರೆಸ್ಟೋರೆಂಟ್, ಬ್ರಿಯಾನ್ ಡೆವೈನ್ ಹಾಗೂ ತಂಡಕ್ಕೆ ನೀಡಿದ್ದ ಪ್ರಾಯೋಜಕತ್ವವನ್ನು ತಕ್ಷಣವೇ ಹಿಂಪಡೆದಿದೆ. ಕ್ರೀಡಾ ಸ್ಫೂರ್ತಿಗೆ ಧಕ್ಕೆ ತರುವ ಇಂತಹ ನಡವಳಿಕೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ರೆಸ್ಟೋರೆಂಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!
ಪ್ರಸ್ತುತ ನಾರ್ತ್ ಯಾರ್ಕ್ಶೈರ್ ಮತ್ತು ಸೌತ್ ಡರ್ಹಾಮ್ (NYSD) ಕ್ರಿಕೆಟ್ ಲೀಗ್ ಈ ಬಗ್ಗೆ ಅಧಿಕೃತ ದೂರನ್ನು ಸ್ವೀಕರಿಸಿದ್ದು, ಪೂರ್ಣ ಪ್ರಮಾಣದ ತನಿಖೆ ಆರಂಭಿಸಿದೆ. ನಿಯಮ ಉಲ್ಲಂಘನೆಗಾಗಿ ಬ್ರಿಯಾನ್ ಡೆವೈನ್ಗೆ ದೀರ್ಘಾವಧಿಯ ನಿಷೇಧ ಹೇರುವ ಸಾಧ್ಯತೆಯಿದೆ.
Published On - 2:13 pm, Wed, 29 July 26