ವಾರಣಾಸಿಯಲ್ಲಿ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಬಿಸಿಸಿಐ ಮುಂದಾಗಿದೆ. 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸ್ಡೇಡಿಯಂನ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇನ್ನು ಈ ಸ್ಡೇಡಿಯಂ ಅತ್ಯಾಧುನಿಕ ಸೌಕರ್ಯಗಳೊಂದಿಗೆ 31 ಎಕರೆ ಜಾಗದಲ್ಲಿ ತಲೆ ಎತ್ತಲಿದೆ. ವಿಶೇಷ ಎಂದರೆ ಹೊಸ ಸ್ಟೇಡಿಯಂ ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಲಿದೆ. ಈಗಾಗಲೇ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಮತ್ತು ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯವಹಿಸುತ್ತಿದೆ. ಇದೀಗ ವಾರಣಾಸಿಯಲ್ಲಿ ಮೂರನೇ ಇಂಟರ್ನ್ಯಾಷನಲ್ ಕ್ರಿಕೆಟ್ ಗ್ರೌಂಡ್ ನಿರ್ಮಿಸಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ.
ಬಿಸಿಸಿಐ ಹಾಗೂ ಉತ್ತರ ಪ್ರದೇಶ ಕ್ರಿಕೆಟ್ ಅಸೋಷಿಯೇಷನ್ನ (ಯುಪಿಸಿಎ) ಹೊಸ ಸ್ಟೇಡಿಯಂಗಾಗಿ ಉತ್ತರ ಪ್ರದೇಶ ಸರ್ಕಾರ ವಾರಣಾಸಿ ಜಿಲ್ಲೆಯ ರಜತಲಾಬ್ ತೆಹಸಿಲ್‌ನಲ್ಲಿ ಗಂಜಾರಿ ಎಂಬ ಕುಗ್ರಾಮವನ್ನು ಗೊತ್ತುಪಡಿಸಿದೆ. ಯುಪಿಸಿಎ ಒಪ್ಪಂದದ ಬದಲಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ವಾರ್ಷಿಕ 10 ಲಕ್ಷ ರೂಪಾಯಿಗಳನ್ನು ನೀಡಲಿದೆ ಎಂದು ವರದಿಯಾಗಿದೆ.
ನೂತನವಾಗಿ ನಿರ್ಮಾಣವಾಗಲಿರುವ ಸ್ಟೇಡಿಯಂನಲ್ಲಿ 30 ಸಾವಿರ ಆಸನ ವ್ಯವಸ್ಥೆ ಇರಲಿದೆ. ಅಂದರೆ 39 ಸಾವಿರ ಆಸನ ವ್ಯವಸ್ಥೆಯಿರುವ ಕಾನ್ಪುರ ಸ್ಟೇಡಿಯಂಗಿಂತ ಸಣ್ಣ ಕ್ರೀಡಾಂಗಣ ಇದಾಗಿರಲಿದೆ.
ವಾರಣಾಸಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಟೆಂಡರ್ ಖ್ಯಾತ ಲಾರ್ಸೆನ್ ಮತ್ತು ಟೂಬ್ರೊ ಕಂಪೆನಿ ಗೆದ್ದುಕೊಂಡಿದೆ. ಪ್ರಸ್ತುತ ಮಾಹಿತಿ ಪ್ರಕಾರ ಕಂಪೆನಿಯು 30 ತಿಂಗಳ ಒಳಗಾಗಿ ನೂತನ ಸ್ಟೇಡಿಯಂ ನಿರ್ಮಾಣವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದೆ. ಅಂದರೆ 2026 ರ ಟಿ20 ವಿಶ್ವಕಪ್ ವೇಳೆಗೆ ಹೊಸ ಸ್ಟೇಡಿಯಂ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ರೆಡ್ ಕಾರ್ಡ್ ರೂಲ್ಸ್: ಕ್ರಿಕೆಟ್ ಅಂಗಳದಲ್ಲಿ ಹೊಸ ನಿಯಮ
ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಸ್ಟೇಡಿಯಂ ಎಂಬ ಖ್ಯಾತಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ಗೆ ಸಲ್ಲುತ್ತದೆ. ಏಕೆಂದರೆ ಈ ಕ್ರೀಡಾಂಗಣವನ್ನು ನಿರ್ಮಿಸಿದ್ದು 1864 ರಲ್ಲಿ. ಹಾಗೆಯೇ 1934 ರಲ್ಲಿ ಇಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಾಗಿತ್ತು. ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಿದ್ದು 1969 ರಲ್ಲಿ. ನವೆಂಬರ್ 14, 1974 ರಲ್ಲಿ ಈ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಾಯಿತು.
Published On - 10:18 pm, Mon, 14 August 23