13 ಡಾಲ್ ಬಾಲ್​ನೊಂದಿಗೆ 5 ವಿಕೆಟ್ ಕಬಳಿಸಿದ ಟಿಮ್ ಸೌಥಿ

13 ಡಾಲ್ ಬಾಲ್​ನೊಂದಿಗೆ 5 ವಿಕೆಟ್ ಕಬಳಿಸಿದ ಟಿಮ್ ಸೌಥಿ

ಝಾಹಿರ್ ಯೂಸುಫ್
|

Updated on: Aug 13, 2024 | 2:18 PM

The Hundred 2024: ದಿ ಹಂಡ್ರೆಡ್ ಲೀಗ್​ನಲ್ಲಿ ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ಪರ ಕಣಕ್ಕಿಳಿಯುತ್ತಿರುವ ಟಿಮ್ ಸೌಥಿ ಕಾರುವಾಕ್ ದಾಳಿ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅದು ಸಹ 20 ಎಸೆತಗಳಲ್ಲಿ ಕೇವಲ 12 ರನ್ ನೀಡಿ 5 ವಿಕೆಟ್​ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ. ಸೌಥಿಯ ಈ ಭರ್ಜರಿ ಪ್ರದರ್ಶನದಿಂದಾಗಿ ಟ್ರೆಂಟ್ ರಾಕೆಟ್ಸ್ ವಿರುದ್ಧದ ಪಂದ್ಯದಲ್ಲಿ ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ತಂಡದ ಜಯ ಸಾಧಿಸಿದೆ.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ ಮಿಂಚಿನ ದಾಳಿಯೊಂದಿಗೆ ಗಮನ ಸೆಳೆದಿದ್ದಾರೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಮತ್ತು ಟ್ರೆಂಟ್ ರಾಕೆಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡವು ಟಿಮ್ ಸೌಥಿ ಅವರ ಮಾರಕ ದಾಳಿಗೆ ತತ್ತರಿಸಿತು.

ಕರಾರುವಾಕ್ ದಾಳಿಯೊಂದಿಗೆ ಗಮನ ಸೆಳೆದ ಟಿಮ್ ಸೌಥಿ 20 ಎಸೆತಗಳಲ್ಲಿ 13 ಡಾಟ್ ಬಾಲ್ ಎಸೆದಿದ್ದರು. ಅಲ್ಲದೆ ಕೇವಲ 12 ರನ್ ನೀಡುವ ಮೂಲಕ 5 ವಿಕೆಟ್ ಕಬಳಿಸಿದರು. ಸೌಥಿಯ ಈ ಬಿಗಿ ದಾಳಿಯ ಪರಿಣಾಮ ಟ್ರೆಂಟ್ ರಾಕೆಟ್ಸ್ ತಂಡವು 100 ಎಸೆತಗಳಲ್ಲಿ 118 ರನ್​ಗಳಿಸಿ ಆಲೌಟ್ ಆಯಿತು.

119 ರನ್​ಗಳ ಸುಲಭ ಗುರಿ ಪಡೆದ ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ಪರ ಆರಂಭಿಕ ಆಟಗಾರ ಬೆನ್ ಡಕೆಟ್ 30 ರನ್ ಬಾರಿಸಿದರೆ, ಲಿಯಾಮ್ ಲಿವಿಂಗ್​ಸ್ಟೋನ್ ಅಜೇಯ 30 ರನ್​ ಸಿಡಿಸಿದರು. ಇನ್ನು ಜಾಕೊಬ್ ಬೆಥೆಲ್ ಅಜೇಯ 38 ರನ್​ಗಳೊಂದಿಗೆ 93 ಎಸೆತಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಬರ್ಮಿಂಗ್​ಹ್ಯಾಮ್ ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಈ ಸೋಲಿನೊಂದಿಗೆ ಟ್ರೆಂಟ್ ರಾಕೆಟ್ಸ್​ ತಂಡವು ದಿ ಹಂಡ್ರೆಡ್ ಲೀಗ್​ನಿಂದ ಹೊರಬಿದ್ದಿದೆ. ಈವರೆಗೆ 7 ಪಂದ್ಯಗಳನ್ನಾಡಿರುವ ಟ್ರೆಂಟ್ ರಾಕೆಟ್ ತಂಡವು 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 4 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಈ ಮೂಲಕ 2024ರ ದಿ ಹಂಡ್ರೆಡ್ ಲೀಗ್​ನ ನಾಕೌಟ್ ಹಂತಕ್ಕೇರುವಲ್ಲಿ ವಿಫಲವಾಗಿದೆ.