The Hundred: 16 ಸಿಕ್ಸ್, 208 ರನ್​: ದಿ ಹಂಡ್ರೆಡ್ ಲೀಗ್​ನಲ್ಲಿ ಹೊಸ ದಾಖಲೆ

| Updated By: ಝಾಹಿರ್ ಯೂಸುಫ್

Updated on: Aug 22, 2022 | 10:37 AM

Manchester Originals: ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು 23 ರನ್​ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ಮ್ಯಾಂಚೆಸ್ಟರ್ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

The Hundred: 16 ಸಿಕ್ಸ್, 208 ರನ್​: ದಿ ಹಂಡ್ರೆಡ್ ಲೀಗ್​ನಲ್ಲಿ ಹೊಸ ದಾಖಲೆ
The Hundred
Follow us on

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​​ನಲ್ಲಿ (The Hundred) ಭಾನುವಾರ ಹೊಸ ಇತಿಹಾಸ ನಿರ್ಮಾಣವಾಗಿದೆ. 100 ಎಸೆತಗಳ ಈ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡದ ಐವರು ಬ್ಯಾಟ್ಸ್​ಮನ್​ಗಳು ಅಬ್ಬರಿಸುವ ಮೂಲಕ ನೂತನ  ದಾಖಲೆ ನಿರ್ಮಿಸಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ದನ್ ಸೂಪರ್​ಚಾರ್ಜರ್ಸ್​​ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮ್ಯಾಂಚೆಸ್ಟರ್ ಪರ ಫಿಲಿಪ್ ಸಾಲ್ಟ್ ಹಾಗೂ ಲೌರಿ ಇವಾನ್ಸ್ ಇನಿಂಗ್ಸ್ ಆರಂಭಿಸಿದ್ದರು.

ಮೊದಲ ವಿಕೆಟ್​ಗೆ ಬಿರುಸಿನ ಜೊತೆಯಾಟವಾಡಿದ ಈ ಜೋಡಿ ಸೂಪರ್​ಚಾರ್ಜರ್ಸ್​ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 42 ಎಸೆತಗಳಲ್ಲಿ 102 ರನ್​ಗಳು ಮೂಡಿಬಂತು. ಇದೇ ವೇಳೆ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಸಾಲ್ಟ್ ಅಬ್ಬರಿಸಿದರು. ಇನ್ನು 19 ಎಸೆತಗಳಲ್ಲಿ 45 ರನ್ ಬಾರಿಸಿದ ಇವಾನ್ಸ್ ಈ ಹಂತದಲ್ಲಿ ಬ್ರಾವೊಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ಆ ಬಳಿಕ ಬಂದ ಸೌತ್ ಆಫ್ರಿಕಾ ಯುವ ಬ್ಯಾಟ್ಸ್​​ಮನ್ ಟ್ರಿಸ್ಟನ್ ಸ್ಟಬ್ಸ್​ ಕೂಡ ಸ್ಪೋಟಕ ಇನಿಂಗ್ಸ್ ಆಡಿದರು. 23 ಎಸೆತಗಳನ್ನು ಎದುರಿಸಿದ ಸ್ಟಬ್ಸ್​ 5 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 46 ರನ್​ ಚಚ್ಚಿದರು. ಮತ್ತೊಂದೆಡೆ 25 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 55 ರನ್ ಬಾರಿಸಿ ಸಾಲ್ಟ್ ಡೇವಿಡ್ ವೈಸ್​ಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇನ್ನು ಅಂತಿಮ ಹಂತದಲ್ಲಿ ವಾಲ್ಟರ್ 2 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ ಕೇವಲ 12 ಎಸೆತಗಳಲ್ಲಿ 26 ರನ್ ಬಾರಿಸಿದರು. ಅಲ್ಲದೆ ಐವರು ಬ್ಯಾಟ್ಸ್​ಮನ್​ಗಳು ಸೇರಿ ಒಟ್ಟು 16 ಸಿಕ್ಸ್​ಗಳನ್ನು ಸಿಡಿಸಿದ್ದರು. ಪರಿಣಾಮ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು ಮೊತ್ತವು 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ಕ್ಕೆ ಬಂದು ನಿಂತಿತು. ಇದು ಹಂಡ್ರೇಡ್ ಲೀಗ್​ನಲ್ಲಿ ತಂಡವೊಂದು ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ. ಅಲ್ಲದೆ ಈ ಲೀಗ್​ನಲ್ಲಿ 200 ಕ್ಕೂ ಅಧಿಕ ರನ್ ಬಾರಿಸಿದ ಮೊದಲ ತಂಡವಾಗಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ಹೊರಹೊಮ್ಮಿದೆ.

209 ರನ್​ಗಳ ಟಾರ್ಗೆಟ್ ಪಡೆದ ಸೂಪರ್​ಚಾರ್ಜರ್ಸ್ ತಂಡಕ್ಕೆ ಆ್ಯಡಂ ಲಿತ್ 24 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 46 ರನ್​ ಬಾರಿಸಿ ಸ್ಪೋಟಕ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಆ್ಯಡಂ ಹೋಸ್ ಪರಾಕ್ರಮ ಮೆರೆಯುವ ಮೂಲಕ 3 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 27 ಎಸೆತಗಳಲ್ಲಿ 59 ರನ್​ ಸಿಡಿಸಿದ್ದರು. ಆದರೆ ಅದಾಗಲೇ 100 ಎಸೆತಗಳು ಮುಗಿದ ಕಾರಣ ಸೂಪರ್​ಚಾರ್ಜರ್ಸ್ ಹೋರಾಟವು 7 ವಿಕೆಟ್ ನಷ್ಟಕ್ಕೆ 185 ರನ್​ಗಳಿಗೆ ಅಂತ್ಯವಾಯಿತು.

ಈ ಮೂಲಕ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು 23 ರನ್​ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ಮ್ಯಾಂಚೆಸ್ಟರ್ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.