ದಿನೇಶ್ ಕಾರ್ತಿಕ್ (Dinesh Karthik) ಅಲಿಯಾಸ್ ಡಿಕೆ ಸಾಬ್…ಆರ್ಸಿಬಿ (RCB) ಅಭಿಮಾನಿಗಳ ಪಾಲಿನ ಡಿಕೆ ಬಾಸ್ ಎಂದೇ ಜನಪ್ರಿಯನಾಗಿರುವ ದಿನೇಶ್ ಕಾರ್ತಿಕ್ ಕ್ರಿಕೆಟ್ ಅಂಗಳಕ್ಕೆ ಬಂದು 18 ವರ್ಷಗಳೇ ಕಳೆದಿವೆ. ಆದರೆ ಅವರಿಗೆ ಹೆಸರು, ಖ್ಯಾತಿ, ಒಂದಷ್ಟು ಅಭಿಮಾನಿಗಳನ್ನು ತಂದುಕೊಟ್ಟಿದ್ದು ಆರ್ಸಿಬಿಗೆ ಎಂಟ್ರಿ ಕೊಟ್ಟ ಮೇಲೆ ಎಂದರೆ ತಪ್ಪಾಗಲಾರದು. ಏಕೆಂದರೆ ಆರ್ಸಿಬಿ ತಂಡದ ಗೆಲುವಿನಲ್ಲಿ ಡಿಕೆ ಅವರ ಕೊಡುಗೆ ಮಹತ್ವದ್ದು. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಇಡೀ ಪಂದ್ಯ ಚಿತ್ರಣ ಬದಲಿಸುತ್ತಿರುವ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ಗೆ ಖುದ್ದು ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ (Abd) ಅವರೇ ಫಿದಾ ಆಗಿದ್ದಾರೆ ಎಂದರೆ ಅವರ ಬ್ಯಾಟಿಂಗ್ ಅಬ್ಬರವನ್ನು ನಾವು ಊಹಿಸಿಕೊಳ್ಳಬಹುದು. ಆದರೆ ಇದೇ ಡಿಕೆ ಒಂದು ದಶಕದ ಹಿಂದೆ ಹಲವು ಕಾರಣಗಳಿಂದ ಭಾರೀ ಸುದ್ದಿಯಾಗಿದ್ದರು. ಅದು ಕೂಡ ತಾನು ಮಾಡದ ತಪ್ಪಿನಿಂದಾಗಿ ಎಂಬುದು ವಿಶೇಷ. ಅಂದರೆ ನೀವಿಂದು ನೋಡುತ್ತಿರುವುದು ಸತತವಾಗಿ ಸೋತು…ಸೋತು..ಸೋತು…ಗೆದ್ದಂತಹ ಡಿಕೆಯನ್ನು…
ಹೌದು, ಆಗ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಇದ್ದರು. ಅತ್ತ ತಂಡದಲ್ಲಿ ಧೋನಿಯ ಸ್ಥಾನವನ್ನು ಅಲುಗಾಡಿಸುವಂತಿರಲ್ಲಿಲ್ಲ. ಈ ವೇಳೆ ತಂಡಕ್ಕೆ ಆಯ್ಕೆಯಾಗಿದ್ದು ದಿನೇಶ್ ಕಾರ್ತಿಕ್. ಅದು ಕೂಡ 2ನೇ ವಿಕೆಟ್ ಕೀಪರ್ ಆಗಿ ಎಂಬುದು ವಿಶೇಷ. ಅಂದರೆ ತಮಿಳುನಾಡು ತಂಡದ ನಾಯಕರಾಗಿದ್ದ ಡಿಕೆ ಅತ್ಯುತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಇದಾಗ್ಯೂ ಧೋನಿ ತಂಡದಲ್ಲಿದ್ದ ಕಾರಣ ದಿನೇಶ್ ಕಾರ್ತಿಕ್ಗೆ ಅವಕಾಶ ಸಿಕ್ಕಿರಲಿಲ್ಲ. ದುರಂತ ಎಂದರೆ ಒಬ್ಬ ಆಟಗಾರ ಅತ್ಯುತ್ತಮ ಫಾರ್ಮ್ನಲ್ಲಿರುವಾಗ ತಂಡಕ್ಕೆ ಆಯ್ಕೆಯಾಗಿ ಬೆಂಚ್ ಕಾಯುವುದು ಇದೆಯಲ್ಲಾ, ಅದು ಆತನ ಕೆರಿಯರ್ ಅನ್ನೇ ಮುಗಿಸಿಬಿಡುತ್ತೆ. ಏಕೆಂದರೆ ಇತ್ತ ದೇಶೀಯ ಕ್ರಿಕೆಟ್ ಆಡಲು ಅವಕಾಶವಿಲ್ಲ, ಇತ್ತ ತಂಡದಲ್ಲಿ ಚಾನ್ಸ್ ಇಲ್ಲ. ಅವಕಾಶ ವಂಚಿತನಾಗಿ ಕೂತಿದ್ದ ಡಿಕೆಯ ಕಿವಿಗೆ ಇದೇ ಸಂದರ್ಭದಲ್ಲಿ ಬರ ಸಿಡಿಲಿನಂತೆ ಮತ್ತೊಂದು ಆಘಾತಕಾರಿ ಸುದ್ದಿ ಅಪ್ಪಳಿಸಿತ್ತು.
ಟೀಮ್ ಇಂಡಿಯಾದಲ್ಲಿ 2ನೇ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಅವರಿಗೆ ಗೆಳೆಯನೇ ದ್ರೋಹ ಬಗೆದಿದ್ದ. ಅಂದರೆ ಅತ್ತ ಡಿಕೆ ಟೀಮ್ ಇಂಡಿಯಾದಲ್ಲಿದ್ದರೆ, ಇತ್ತ ತಮಿಳುನಾಡು ತಂಡದ ಸಹ ಆಟಗಾರ ಮುರಳಿ ವಿಜಯ್ ಡಿಕೆಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಇಡೀ ತಮಿಳುನಾಡು ರಣಜಿ ತಂಡಕ್ಕೆ ಗೊತ್ತಿದ್ದರೂ, ಡಿಕೆಗೆ ಮಾತ್ರ ತಿಳಿದಿರಲಿಲ್ಲ.
ಕೊನೆಗೆ ಒಂದು ದಿನ ಪತ್ನಿ ಬಂದು ತಾನು ಮುರಳಿ ವಿಜಯ್‌ನ ಮಗುವಿನ ಗರ್ಭಿಣಿ, ನಿನ್ನಿಂದ ವಿಚ್ಛೇದನವನ್ನು ಬಯಸುವುದಾಗಿ ತಿಳಿಸಿದಳು. ಆಗಷ್ಟೇ ಕ್ರಿಕೆಟ್ ಕೆರಿಯರ್ನಲ್ಲಿ ಹೊಸ ಕನಸುಗಳನ್ನು ಹೊತ್ತಿದ್ದ ಯುವ ಆಟಗಾರನಿಗೆ ಇದಕ್ಕಿಂತ ದೊಡ್ಡ ಆಘಾತ ಮತ್ತೇನಿದೆ ಹೇಳಿ. ಅಂದು ಸಿಎಸ್ಕೆ ಹಾಗೂ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಮಿಂಚುತ್ತಿದ್ದ ಮುರಳಿ ವಿಜಯ್ ಜೊತೆ ಪತ್ನಿ ಹೊಸ ಜೀವನ ಆರಂಭಿಸಿದ್ದಳು.
ಇಂತಹದೊಂದು ಮೋಸವನ್ನು ಕನಸು ಮನಸ್ಸಿನಲ್ಲೂ ಊಹಿಸಿರದ ಡಿಕೆ ತೀವ್ರ ಖಿನ್ನತೆಗೆ ಒಳಗಾದರು. ಆಟದ ಮೇಲಿನ ಏಕಾಗ್ರತೆ ಕಳೆದುಕೊಂಡರು. ಮೈದಾನದಲ್ಲಿ ಗಡ್ಡದೊಂದಿಗೆ ಕಾಣಿಸಿಕೊಂಡರು..ಥೇಟ್ ದೇವದಾಸ್ನಂತೆ….ಅವರ ಪ್ರದರ್ಶನ ಕೂಡ ಕುಸಿಯಿತು. ಇದರ ಬೆನ್ನಲ್ಲೇ ಭಾರತ ತಂಡದಿಂದ ಸಹ ಕೈಬಿಡಲಾಯಿತು. ಇತ್ತ ರಣಜಿಯಲ್ಲಿ ವಿಫಲರಾಗಲು ಪ್ರಾರಂಭಿಸಿದರು. ನಾಯಕತ್ವದಿಂದ ಕೂಡ ಕೆಳಗಿಳಿಸಲಾಯಿತು. ದುರಂತ ಎಂದರೆ ಯಾರು ತನಗೆ ಮೋಸ ಮಾಡಿದ್ದಾರೋ ಅವರಿಗೆ ಅಂದರೆ ಮುರಳಿ ವಿಜಯ್ಗೆ ತಮಿಳುನಾಡು ತಂಡ ನಾಯಕತ್ವ ಲಭಿಸಿತು.
ಇದಾಗ್ಯೂ ಡಿಕೆ ಐಪಿಎಲ್ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದರು. ಆದರೆ ಮೊದಲೇ ಕುಗ್ಗಿ ಹೋಗಿದ್ದ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲೂ ವಿಫಲರಾಗಲು ಪ್ರಾರಂಭಿಸಿದರು. ತುಂಬಾ ಖಿನ್ನತೆಗೆ ಒಳಗಾದರು. ರಣಜಿ ತಂಡದ ಸಹ ಆಟಗಾರರಿಂದ ನಿರಾಶೆಗೊಂಡಿದ್ದರು. ಎಲ್ಲಿಯತನಕ ಎಂದರೆ ಡಿಕೆ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಬಯಸಿದ್ದರು.
ಈ ಸಂದರ್ಭದಲ್ಲಿ ಜಿಮ್ ಟ್ರೈನರ್ ದಿನೇಶ್ ಕಾರ್ತಿಕ್ ಅವರ ಮನೆಗೆ ತೆರಳಿ ವಿಚಾರಿಸಿದರು. ಜಿಮ್ಗೆ ಯಾಕಾಗಿ ಬರುತ್ತಿಲ್ಲ ಎಂದು ಕೇಳಿದ್ದರು. ಈ ವೇಳೆ ತನ್ನೆಲ್ಲಾ ನೋವುಗಳನ್ನು ಡಿಕೆ ಟ್ರೈನರ್ ಬಳಿ ಹಂಚಿಕೊಂಡಿದ್ದರು. ಇದಕ್ಕೆ ಒಂದೇ ಪರಿಹಾರ ಎಂದು ಮತ್ತೆ ಜಿಮ್ಗೆ ಬರಲು ಒತ್ತಾಯಿಸಿದರು. ಅಲ್ಲದೆ ತರಬೇತಿಯನ್ನು ಮತ್ತೆ ಶುರು ಮಾಡೋಣ ಎಂದು ಧೈರ್ಯ ತುಂಬಿದರು. ಅದರಂತೆ ಡಿಕೆ ಜಿಮ್ ಕಸರತ್ತನ್ನು ಪುನರಾರಂಭಿಸಿದರು. ಅದು ಕೂಡ ಹೊಸ ಆಟಗಾರನಂತೆ.
ಈ ವೇಳೆ ಜಿಮ್ನಲ್ಲಿ ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾಗಿದ್ದರು. ಮೊದಲೇ ಡಿಕೆಯ ಬಗ್ಗೆ ಗೊತ್ತಿದ್ದ ದೀಪಿಕಾ, ಆತನ ಕಹಿ ಘಟನೆಗಳಿಗೆ ಕಿವಿಗೊಟ್ಟು ಸಮಾಧಾನಪಡಿಸಿದರು. ಈ ಗೆಳೆತನ ದಿನೇಶ್ ಕಾರ್ತಿಕ್ ಅವರಲ್ಲಿ ಹೊಸ ಭರವಸೆ ಮೂಡಿಸಿತು. ಅಲ್ಲದೆ ಡಿಕೆಯ ಮನಸ್ಥಿತಿಯನ್ನು ಅರಿತ ದೀಪಿಕಾ ಜಿಮ್ನಲ್ಲಿ ಸಲಹೆ ನೀಡಲು ಪ್ರಾರಂಭಿಸಿದಳು. ಮೊದಲೇ ಆಟಗಾರ್ತಿಯಾಗಿದ್ದ ದೀಪಿಕಾಗೆ ಕ್ರೀಡಾಳುಗಳ ಮನಸ್ಥಿತಿ ಚೆನ್ನಾಗಿ ಗೊತ್ತಿತ್ತು. ಅದರಂತೆ ಇಬ್ಬರು ಜೊತೆಯಾಗಿ ವರ್ಕೌಟ್ ಶುರು ಮಾಡಿದ್ದರು. ಇಲ್ಲಿ ಇಬ್ಬರ ಉದ್ದೇಶ ಗೆಲ್ಲುವುದೊಂದೇ ಆಗಿದ್ದ ಕಾರಣ, ಇಬ್ಬರೂ ಕೂಡ ಬೆವರಿಳಿಸಿ ಕಸರತ್ತು ಆರಂಭಿಸಿದರು.
ಒಂದೆಡೆ ದಿನೇಶ್ ಕಾರ್ತಿಕ್ ಪಾಲಿಗೆ ದೀಪಿಕಾ ಪಲ್ಲಿಕಲ್ ಹೊಸ ಭರವಸೆ ಮೂಡಿಸಿದರೆ, ಮತ್ತೊಂದೆಡೆ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದ ಮುರಳಿ ವಿಜಯ್ ವೈಫಲ್ಯ ಶುರುವಾಗಿತ್ತು. ಮೊದಲು ಭಾರತ ತಂಡದಿಂದ ಕೈ ಬಿಡಲಾಯಿತು. ಇದರ ಬೆನ್ನಲ್ಲೇ CSK ತಂಡದಿಂದ ಕೂಡ ಔಟ್ ಆದರು.
ಇತ್ತ ಕಡೆ ಡಿಕೆ ನಿಧಾನವಾಗಿ ಫಾರ್ಮ್ಗೆ ಮರಳಿದ್ದರು. ದೀಪಿಕಾ ಅವರ ಪ್ರೋತ್ಸಾಹದೊಂದಿಗೆ ದಿನೇಶ್ ಕಾರ್ತಿಕ್ ನೆಟ್ಸ್ನಲ್ಲೂ ಹೆಚ್ಚಿನ ಸಮಯ ಕಳೆದರು. ದೇಶೀಯ ಪಂದ್ಯಗಳಲ್ಲಿ ಹೆಚ್ಚು ಸ್ಕೋರ್ ಮಾಡಿದರು. ಗೆಳೆತಿಯ ಪ್ರೋತ್ಸಾಹದೊಂದಿಗೆ ಡಿಕೆ ಖಿನ್ನತೆಯಿಂದ ಹೊರಬಂದರು. ಹೊಸ ಭರವಸೆಯೊಂದಿಗೆ ಬ್ಯಾಟ್ ಬೀಸಲಾರಂಭಿಸಿದರು. ತಮಿಳುನಾಡು ತಂಡಕ್ಕೆ ರಿಎಂಟ್ರಿ ಕೊಟ್ಟರು. ಭರ್ಜರಿ ಬ್ಯಾಟಿಂಗ್ ಮುಂದುವರೆಸಿ ಮತ್ತೆ ನಾಯಕನ ಸ್ಥಾನಕ್ಕೇರಿದರು.
ಅಷ್ಟೇ ಯಾಕೆ ಐಪಿಎಲ್‌ನಲ್ಲೂ ಮಿಂಚಲಾರಂಭಿಸಿದರು. ಮತ್ತೆ ಟೀಮ್ ಇಂಡಿಯಾದಲ್ಲೂ ಚಾನ್ಸ್ ಪಡೆದರು. ಜೊತೆಗೆ ಕೆಕೆಆರ್ ತಂಡದ ನಾಯಕರಾಗಿ ಕಾಣಿಸಿಕೊಂಡರು. 34ನೇ ವಯಸ್ಸಿನಲ್ಲಿ ಮತ್ತೆ ಕೆರಿಯರ್ನ ಉತ್ತುಂಗಕ್ಕೇರುವ ತವಕದಲ್ಲಿದ್ದ ಡಿಕೆಗೆ ಮತ್ತೆ ಸವಾಲು ಎದುರಾಗಿತ್ತು. ಈ ಬಾರಿ ರಿಷಭ್ ಪಂತ್ ಮೂಲಕ ಎಂಬುದು ವಿಶೇಷ. ಪಂತ್ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿ ಎಂಟ್ರಿ ಕೊಟ್ಟಿದ್ದರು.
ಸೋತು ಗೆದ್ದಿದ್ದ ಡಿಕೆಗೆ ಇದ್ಯಾವುದೂ ದೊಡ್ಡ ವಿಷಯವಾಗಿರಲಿಲ್ಲ. ದೇಶೀಯ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದರು. ಅದಾಗಲೇ ಕೆಕೆಆರ್ ತಂಡದಿಂದ ಕೈಬಿಡುವುದು ಡಿಕೆಗೆ ಖಚಿತವಾಗಿತ್ತು. ಆದರೆ ದಿನೇಶ್ ಕಾರ್ತಿಕ್ಗೆ ಅಂದೊಂದು ಕರೆ ಬಂದಿತ್ತು. ನೀವು ಸಿಎಸ್ಕೆ ಪರ ಆಡುತ್ತೀರಲ್ವೇ? ಎಂದು ಕರೆ ಮಾಡಿದ ವ್ಯಕ್ತಿ ಕೇಳಿದ್ದರು.
ಹೌದು, ಸಿಎಸ್ಕೆ ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ಡಿಕೆಯನ್ನು ತಂಡಕ್ಕೆ ಆಯ್ಕೆ ಮಾಡಲು ಬಯಸಿದ್ದರು. ಹೀಗಾಗಿ ಸಿಎಸ್ಕೆ ಸಿಇಒ ಕಾಶಿ ವಿಶ್ವಾನಾಥನ್ ಡಿಕೆಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೆ ಮೆಗಾ ಹರಾಜಿನಲ್ಲೂ ದಿನೇಶ್ ಕಾರ್ತಿಕ್ಗಾಗಿ ಸಿಎಸ್ಕೆ ಫ್ರಾಂಚೈಸಿ ಬಿಡ್ಡಿಂಗ್ ಮಾಡಿತ್ತು. ಆದರೆ ಅದಾಗಲೇ ಡಿಕೆ ಸಾಬ್ನನ್ನು ಖರೀದಿಸಬೇಕೆಂದು ಪಣ ತೊಟ್ಟಿದ್ದ ಆರ್ಸಿಬಿ ಭರ್ಜರಿ ಪೈಪೋಟಿ ನೀಡಿ ತನ್ನದಾಗಿಸಿಕೊಂಡಿತು. ಇದೀಗ ದಿನೇಶ್ ಕಾರ್ತಿಕ್ ಅಲಿಯಾಸ್ ಡಿಕೆ ಆರ್ಸಿಬಿ ತಂಡದ ಹೊಸ ಭರವಸೆಯಾಗಿದ್ದಾರೆ. ಅಲ್ಲದೆ ಈ ಬಾರಿ ಆರ್ಸಿಬಿಗೆ ಕಪ್ ಗೆಲ್ಲಿಸಿಕೊಡುವ ವಿಶ್ವಾಸವನ್ನೂ ಕೂಡ ಮೂಡಿಸಿದ್ದಾರೆ.
ಮತ್ತೊಂದೆಡೆ ದೀಪಿಕಾ ಪಲ್ಲಿಕಲ್ ಸ್ಕ್ವಾಷ್ ವಿಶ್ವ ಚಾಂಪಿಯನ್‌ಶಿಪ್ ಅನ್ನು ಆಡಿದರು. ಜೋಶ್ನಾ ಪೊನ್ನಪ್ಪ ಅವರೊಂದಿಗೆ ಮಿಶ್ರ ಡಬಲ್ಸ್ ಮತ್ತು ಮಹಿಳೆಯರ ಡಬಲ್ಸ್ ಎರಡನ್ನೂ ಗೆದ್ದರು. ವಿಶೇಷ ಎಂದರೆ ದೀಪಿಕಾ ಪಲ್ಲಿಕಲ್ ಈಗ ದಿನೇಶ್ ಕಾರ್ತಿಕ್ ಅವರ ಪತ್ನಿ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ.
ಇದೀಗ ಆರ್ಸಿಬಿ ಪರ ಅಬ್ಬರಿಸುವ ಮೂಲಕ ದಿನೇಶ್ ಕಾರ್ತಿಕ್ ಮತ್ತೆ ಟೀಮ್ ಇಂಡಿಯಾಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಡಿಕೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಅದು ಕೂಡ ತಮ್ಮ 36ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಅಂದಹಾಗೆ ಮುರಳಿ ವಿಜಯ್ ಕ್ರಿಕೆಟ್ ಕೆರಿಯರ್ ಮುಗಿದು 2 ವರ್ಷಗಳೇ ಕಳೆದಿವೆ. ಎಲ್ಲಿ ಮುರಳಿ ವಿಜಯ್ ಪತನ ಆರಂಭವಾಯಿತೋ, ಅಲ್ಲಿಂದಲೇ ದಿನೇಶ್ ಕಾರ್ತಿಕ್ ಅವರ ಯುಗ ಶುರುವಾಗಿತ್ತು ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
Published On - 3:14 pm, Thu, 21 April 22