ಭಾರತದ ದೇಶೀಯ ಟೂರ್ನಿ ದುಲೀಪ್ ಟ್ರೋಫಿ ಇದೇ ಸೆಪ್ಟೆಂಬರ್ 5 ರಿಂದ ಪ್ರಾರಂಭವಾಗಲಿದೆ. ದುಲೀಪ್ ಟ್ರೋಫಿಗೆ ಈಗಾಗಲೇ ನಾಲ್ಕು ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ. ಈ ಬಾರಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ಕುಲ್ದೀಪ್ ಯಾದವ್ ಅವರಂತಹ ಸ್ಟಾರ್ ಆಟಗಾರರು ಕೂಡ ಈ ಟೂರ್ನಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ. ಇವರಲ್ಲದೇ ಹಲವು ಯುವ ಆಟಗಾರರಿಗೂ ಅವಕಾಶ ಸಿಕ್ಕಿದೆ. ಆದರೆ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ ಅವರಂತಹ ಯುವ ಹಾಗೂ ಅನುಭವಿ ಆಟಗಾರರಿಗೆ ಈ ಟೂರ್ನಿಯಲ್ಲಿ ಅವಕಾಶ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವಾಸ್ತವವಾಗಿ ದುಲೀಪ್ ಟ್ರೋಫಿಯಿಂದ ಟೀಂ ಇಂಡಿಯಾದ ಹಲವು ಅನುಭವಿ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಇವರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಸೇರಿದ್ದಾರೆ. ಟೀಂ ಇಂಡಿಯಾ ಮುಂದಿನ ಕೆಲವು ತಿಂಗಳುಗಳಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸವನ್ನೂ ಕೈಗೊಳ್ಳಬೇಕಿದೆ. ಹೀಗಾಗಿ ಈ ಅನುಭವಿಗಳನ್ನು ಇಂಜುರಿಯಿಂದ ದೂರವಿಡಲು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ ಇವರ ಹೊರತಾಗಿಯೂ ಇನ್ನು ಕೆಲವು ಆಟಗಾರನನ್ನು ಈ ಟೂರ್ನಿಯಿಂದ ಹೊರಗಿಡಲಾಗಿದೆ.
ಮೇಲೆ ಹೇಳಿದಂತೆ ಈ ದೇಶೀ ಟೂರ್ನಿಯಿಂದ ಟೀಂ ಇಂಡಿಯಾದ ಮಾಜಿ ಹಾಗೂ ಹಾಲಿ ಆಟಗಾರನನ್ನು ಹೊರಗಿಡಲಾಗಿದೆ. ಅವರಲ್ಲಿ ಅಜಿಂಕ್ಯ ರಹಾನೆ, ಅಭಿಷೇಕ್ ಶರ್ಮಾ, ವೆಂಕಟೇಶ್ ಅಯ್ಯರ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ಮತ್ತು ರಿಂಕು ಸಿಂಗ್ ಅವರಂತಹ ಸ್ಟಾರ್ ಬ್ಯಾಟ್ಸ್ಮನ್ಗಳೂ ಸೇರಿದ್ದಾರೆ. ಇನ್ನು ಮುಂದೆ ರಹಾನೆ ಮತ್ತು ಪೂಜಾರರನ್ನು ತಮ್ಮ ಭವಿಷ್ಯದ ಯೋಜನೆಗಳಲ್ಲಿ ನೋಡುವುದಿಲ್ಲ ಎಂದು ಆಯ್ಕೆಗಾರರು ಈಗಾಗಲೇ ಸೂಚಿಸಿದ್ದಾರೆ. ಆದರೆ, ರಿಂಕು ಸಿಂಗ್ ಹಾಗೂ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಗದಿರುವುದು ಅಚ್ಚರಿ ಮೂಡಿಸಿದೆ.
ರಿಂಕು ಸಿಂಗ್ 47 ಪ್ರಥಮ ದರ್ಜೆ ಪಂದ್ಯಗಳಲ್ಲಿ 54.70 ಸರಾಸರಿಯಲ್ಲಿ 3173 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ನಾಲ್ಕು ದಿನಗಳ ಪಂದ್ಯಕ್ಕಾಗಿ ಅವರನ್ನು ಭಾರತ ಎ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡುವುದಾದರೆ, ಅವರು 62 ಪ್ರಥಮ ದರ್ಜೆ ಪಂದ್ಯಗಳಲ್ಲಿ 38.54 ಸರಾಸರಿಯಲ್ಲಿ 3623 ರನ್ ಗಳಿಸಿದ್ದಾರೆ.
ಇನ್ನು ಪೃಥ್ವಿ ಶಾ ಬಗ್ಗೆ ಮಾತನಾಡುವುದಾದರೆ, ಅವರು ಪ್ರಸ್ತುತ ಇಂಗ್ಲೆಂಡ್ನ ನಾರ್ಥಾಂಪ್ಟನ್ಶೈರ್ ಕ್ಲಬ್ ಪರ ಆಡುತ್ತಿದ್ದಾರೆ. ವೆಂಕಟೇಶ್ ಅಯ್ಯರ್ ಕೂಡ ಏಕದಿನ ಕಪ್ನಲ್ಲಿ ಆಡುತ್ತಿದ್ದಾರೆ. ಬಿಸಿಸಿಐ ಪ್ರಸ್ತುತ ಶಿವಂ ದುಬೆ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಭವಿಷ್ಯದ ಆಲ್ರೌಂಡರ್ಗಳಾಗಿ ಸಿದ್ಧಪಡಿಸಲು ಬಯಸಿದೆ. ಹಾಗಿದ್ದರೂ ಈ ಎಲ್ಲಾ ಆಟಗಾರರಿಗೆ ದೇಶೀ ಟೂರ್ನಿಯಲ್ಲಿ ಅವಕಾಶ ನೀಡಲಾಗಿಲ್ಲ.
ಹಿರಿಯ ಬೌಲರ್ಗಳಾದ ಉಮೇಶ್ ಯಾದವ್, ಜಯಂತ್ ಯಾದವ್, ನವದೀಪ್ ಸೈನಿ ಮತ್ತು ಜಯದೇವ್ ಉನದ್ಕಟ್ ಅವರಿಗೂ ದುಲೀಪ್ ಟ್ರೋಫಿಯಲ್ಲಿ ಅವಕಾಶ ಸಿಕ್ಕಿಲ್ಲ. ಜಯಂತ್ ಕೊನೆಯ ಬಾರಿಗೆ 2021 ರಲ್ಲಿ ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ರಣಜಿಯಲ್ಲೂ ಅವರ ಪ್ರದರ್ಶನ ಉತ್ತಮವಾಗಿತ್ತು. ಇದಾದ ಬಳಿಕವೂ ಅವರಿಗೆ ಅವಕಾಶ ಸಿಕ್ಕಿಲ್ಲ. ಇತ್ತ ರಣಜಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಉಮೇಶ್ ಅವರನ್ನು ಕಡೆಗಣಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ