ಟಿ20 ರ‍್ಯಾಂಕಿಂಗ್ ಪಟ್ಟಿಗೆ​ ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Aug 17, 2023 | 5:57 PM

T20 Rankings: ನೂತನ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸೂರ್ಯಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 907 ರೇಟಿಂಗ್ ಪಡೆದಿರುವ ಸೂರ್ಯ ಕಳೆದ ನಾಲ್ಕೈದು ತಿಂಗಳುಳಿಂದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಟಿ20 ರ‍್ಯಾಂಕಿಂಗ್ ಪಟ್ಟಿಗೆ​ ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್ ಎಂಟ್ರಿ
Tilak Varma - Yashasvi jaiswal
Follow us on

ಟೀಮ್ ಇಂಡಿಯಾ ಪರ ಚೊಚ್ಚಲ ಟಿ20 ಸರಣಿ ಆಡಿರುವ ಯಶಸ್ವಿ ಜೈಸ್ವಾಲ್ (Yashasvi jaiswal) ಹಾಗೂ ತಿಲಕ್ ವರ್ಮಾ (Tilak Varma) ನೂತನ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅದು ಕೂಡ ಕೆಲ ಸ್ಟಾರ್ ಆಟಗಾರರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 5 ಪಂದ್ಯಗಳನ್ನಾಡಿರುವ ತಿಲಕ್ ವರ್ಮಾ ಒಂದು ಅರ್ಧಶತಕ ಸೇರಿದಂತೆ ಒಟ್ಟು 173 ರನ್ ಕಲೆಹಾಕಿದ್ದರು. ಈ ಭರ್ಜರಿ ಬ್ಯಾಟಿಂಗ್ ಫಲವಾಗಿ ಇದೀಗ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ 46ನೇ ಸ್ಥಾನ ಅಲಂಕರಿಸಿದ್ದಾರೆ.

ಮತ್ತೊಂದೆಡೆ ವಿಂಡೀಸ್ ವಿರುದ್ಧ 3 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಒಟ್ಟು 90 ರನ್ ಬಾರಿಸಿದ್ದರು. ಈ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ 88ನೇ ಸ್ಥಾನ ಅಲಂಕರಿಸಿದ್ದಾರೆ. ಅಂದರೆ ಈ ಇಬ್ಬರು ಯುವ ದಾಂಡಿಗರು ಚೊಚ್ಚಲ ಸರಣಿ ಮೂಲಕವೇ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ಆಟಗಾರರನ್ನು ಹಿಂದಿಕ್ಕಿದ ತಿಲಕ್:

ಹೊಸ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ತಿಲಕ್ ವರ್ಮಾ 46ನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿರುವ ರ‍್ಯಾಂಕಿಂಗ್ 54 ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ ಟೀಮ್ ಇಂಡಿಯಾ ಪರ ಸತತ ಅವಕಾಶ ಪಡೆದಿರುವ ಇಶಾನ್ ಕಿಶನ್ 57ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ 73ನೇ ಸ್ಥಾನದಲ್ಲಿದ್ದಾರೆ.

ಅಂದರೆ ಟೀಮ್ ಇಂಡಿಯಾ ಪರ ಹಲವು ಪಂದ್ಯಗಳನ್ನಾಡಿರುವ ಸ್ಟಾರ್ ಆಟಗಾರರನ್ನು ಒಂದೇ ಸರಣಿ ಮೂಲಕ ತಿಲಕ್ ವರ್ಮಾ ಹಿಂದಿಕ್ಕಿದ್ದಾರೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಯುವ ಎಡಗೈ ದಾಂಡಿಗ ಟಾಪ್ 20 ಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಸೂರ್ಯ ನಂಬರ್ 1:

ನೂತನ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸೂರ್ಯಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 907 ರೇಟಿಂಗ್ ಪಡೆದಿರುವ ಸೂರ್ಯ ಕಳೆದ ನಾಲ್ಕೈದು ತಿಂಗಳುಳಿಂದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್. ಒಟ್ಟು 811 ರೇಟಿಂಗ್​ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಹಾಗೆಯೇ ಮೂರನೇ ಸ್ಥಾನದಲ್ಲಿ ಬಾಬರ್ ಆಝಂ ಇದ್ದು, ಪಾಕಿಸ್ತಾನ್ ತಂಡದ ನಾಯಕ ಒಟ್ಟು 756 ರೇಟಿಂಗ್ ಹೊಂದಿದ್ದಾರೆ.
ಅಚ್ಚರಿ ಎಂದರೆ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿದರೆ ಟೀಮ್ ಇಂಡಿಯಾದ ಯಾವುದೇ ಬ್ಯಾಟರ್ ಟಾಪ್​-10 ನಲ್ಲಿ ಕಾಣಿಸಿಕೊಂಡಿಲ್ಲ.

ಇನ್ನು ಟಾಪ್-20 ಯಲ್ಲಿ ಭಾರತದ ಏಕೈಕ ಬ್ಯಾಟರ್ ಸ್ಥಾನ ಪಡೆದಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ. ಒಟ್ಟು 582 ರೇಟಿಂಗ್​ನೊಂದಿಗೆ ಕಿಂಗ್ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಜಸ್​ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ

ಹಾಗೆಯೇ ಶುಭ್​ಮನ್ ಗಿಲ್ 25ನೇ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ 37ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಟಿ20 ತಂಡದಿಂದ ಹೊರಗುಳಿದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ 40ನೇ ಸ್ಥಾನ ಅಲಂಕರಿಸಿದ್ದಾರೆ. ಇದಾದ ಬಳಿಕ 46ನೇ ಸ್ಥಾನ ಅಲಂಕರಿಸುವ ಮೂಲಕ ತಿಲಕ್ ವರ್ಮಾ ಟಾಪ್-50 ಯಲ್ಲಿ ಕಾಣಿಸಿಕೊಂಡಿದ್ದಾರೆ.