ಐಪಿಎಲ್ 2022ಕ್ಕೆ (IPL 2022) ಗೆಲುವಿನ ವಿದಾಯ ಹೇಳಬೇಕು ಎಂಬುದು ಮುಂಬೈ ಇಂಡಿಯನ್ಸ್ ಕನಸಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕೂಡ ಇದೇ ಬೇಕಿತ್ತು. ಯಾಕೆಂದರೆ ಮುಂಬೈ ವಿರುದ್ಧ ಡೆಲ್ಲಿ (MI vs DC) ಸೋಲುವುದು ಆರ್ಸಿಬಿಗೆ ಬಹುಮುಖ್ಯವಾಗಿತ್ತು. ಮುಂಬೈ ಗೆದ್ದರಷ್ಟೆ ಫಾಪ್ ಪಡೆಗೆ ಪ್ಲೇ ಆಫ್ಗೇರುವ ಅವಕಾಶವಿತ್ತು. ಅಂದುಕೊಂಡಂತೆ ರೋಹಿತ್ ಪಡೆ 19.1 ಓವರ್ನಲ್ಲೇ 160 ರನ್‌ಗಳ ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದ್ದರೆ ಆರ್ಸಿಬಿ 16 ಅಂಕದೊಂದಿಗೆ ನಾಲ್ಕನೆ ಸ್ಥಾನಕ್ಕೇರಿದೆ. ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿದ್ದ ಮುಂಬೈಗೆ ಗೆಲುವಿನ ಆಸೆ ಚಿಗುರಿಸಿದ್ದು ಟಿಮ್ ಡೇವಿಡ್ (Tim David). 26 ವರ್ಷದ ಸಿಂಗಾಪುರ್ನ ಈ ಕ್ರಿಕೆಟಿಗ ಆರ್ಸಿಬಿಗೆ ಅಕ್ಷರಶಃ ವರವಾಗಿ ಪರಿಣಮಿಸಿದರು. ಕ್ರೀಸ್ಗೆ ಬಂದ ಕೂಡಲೆ ಸಿಕ್ಕ ಜೀವದಾನವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಕೇವಲ 11 ಎಸೆಗಳಲ್ಲಿ 2 ಫೋರ್ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿ ಡೇವಿಡ್ 34 ರನ್ ಚಚ್ಚಿ ತಂಡಕ್ಕೆ ಗೆಲುವು ಹತ್ತಿರ ಮಾಡಿ ನಿರ್ಗಮಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಡೇವಿಡ್ ಪಂದ್ಯ ಆರಂಭಕ್ಕೂ ಮುನ್ನ ಆರ್ಸಿಬಿ ನಾಯಕನಿಂದ ನನಗೆ ಮೆಸೇಜ್ ಬಂದಿತ್ತು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. “ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರಿಂದ ಬೆಳಗ್ಗೆ ಮೆಸೇಜ್ ಬಂದಿತ್ತು. ಅದೊಂದು ಫೋಟೋ. ಅದರಲ್ಲಿ ಮ್ಯಾಕ್ಸಿ, ವಿರಾಟ್ ಕೊಹ್ಲಿ ಹಾಗೂ ಫಾಫ್ ಮುಂಬೈ ಇಂಡಿಯನ್ಸ್ ಕಿಟ್ ತೊಟ್ಟಿದ್ದರು. ನಾನು ಮತ್ತೆ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತೇನೆ,” ಎಂದು ಹೇಳಿದ್ದಾರೆ.
MI vs DC: ಮುಂಬೈ ಗೆದ್ದ ತಕ್ಷಣ ಪಂದ್ಯ ನೋಡುತ್ತಿದ್ದ ಆರ್ಸಿಬಿ ಆಟಗಾರರು ಮಾಡಿದ್ದೇನು ನೋಡಿ
“ಗೆಲುವಿನ ಮೂಲಕ ಐಪಿಎಲ್ 2022 ಅನ್ನು ಮುಗಿಸಿದ್ದು ಖಷಿ ತಂದಿದೆ. ವಿಕೆಟ್ ತುಂಬಾ ಫ್ಲಾಟ್ ಆಗಿದೆ ಎಂದು ಇಶಾನ್ ಕಿಶನ್ ನನಗೆ ಹೇಳಿದರು. ಸ್ಲೋವರ್ ಬಾಲ್ ನಿಂತು ಬರುತ್ತಿತ್ತು. ಆದರೆ, ನಾನು ನನ್ನ ಸ್ಥಾನವನ್ನು ಪಡೆದು ನನ್ನ ಗೇಮ್ ಆಡಿದೆ. ಕೆಲವು ಸಿಕ್ಸರ್ಗಳನ್ನು ಸಿಡಿಸುವ ಅದೃಷ್ಟ ಸಿಕ್ಕಿತು. ನೀವು ಜಾಗ ಆಡಿಕೊಂಡು ಆಡಬೇಕು ಅಷ್ಟೆ. ಈ ಸೀಸನ್ನಲ್ಲಿ ನಾನು ತುಂಬಾ ವಿಚಾರಗಳನ್ನು ಕಲಿತಿದ್ದೇನೆ. ನಾನು ಕ್ರೀಸ್ನಲ್ಲಿ ನಿಲ್ಲುವ ಬಗ್ಗೆ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ. ಈ ಫಲಿತಾಂಶ ಖುಷಿ ತಂದಿದೆ. ಇದು ತುಂಬಾ ಕಷ್ಟದ ಸೀಸನ್ ಆಗಿತ್ತು. ಆದರೆ, ಕೊನೆಯ ಆರು ಪಂದ್ಯಗಳಲ್ಲಿ ನಾವು ಉತ್ತಮ ಆಟವಾಡಿದ್ದೇವೆ,” ಎಂದು ಹೇಳಿದ್ದಾರೆ.
ಕ್ರೀಸ್ಗೆ ಬಂದ ತಕ್ಷಣ ಸಿಕ್ಕ ಜೀವದಾನದ ಬಗ್ಗೆ ಮಾತನಾಡಿದ ಟಿಮ್ ಡೇವಿಡ್, “ನನಗೂ ಚೆಂಡು ಬ್ಯಾಟ್ ತುದಿಗೆ ಬಡಿದ ಶಬ್ದ ಕೇಳಿಸಿತು. ಆದರೆ, ಖಚಿತವಾಗಿರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಾವಾಗ ರಿವ್ಯೂ ತೆಗೆದುಕೊಳ್ಳಲಿಲ್ಲವೋ ಆಗ ನಾನು ಮನಬಂದಂತೆ ಆಡುವ ಎಂಬ ನಿರ್ಧಾರ ಮಾಡಿಕೊಂಡೆ. ಕ್ರಿಕೆಟ್ ಪಂದ್ಯ ಎಂದರೆ ಹೀಗಲ್ಲವೇ,” ಎಂಬುದು ಡೇವಿಡ್ ಮಾತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ವೇಗಿ ಜಸ್‌ಪ್ರೀತ್ ಬುಮ್ರಾ (25ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಡುವೆಯೂ 7 ವಿಕೆಟ್‌ಗೆ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 160 ರನ್ ಗಳಿಸಿ ಡೆಲ್ಲಿ ತಂಡವನ್ನು ಟೂರ್ನಿಯಿಂದ ಹೊರದಬ್ಬಿತು. ಸಂಘಟಿತ ನಿರ್ವಹಣೆ ತೋರಿದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-15ರಲ್ಲಿ ಪ್ಲೇಆಫ್ ಲೆಕ್ಕಾಚಾರದ ದೃಷ್ಟಿಯಿಂದ ಮಹತ್ವದ್ದಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಪರಾಭವಗೊಳಿಸಿ ಟೂರ್ನಿಗೆ ಗೆಲುವಿನ ವಿದಾಯ ಹಾಡಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:48 am, Sun, 22 May 22