MI vs DC: ಮುಂಬೈ ಗೆದ್ದ ತಕ್ಷಣ ಪಂದ್ಯ ನೋಡುತ್ತಿದ್ದ ಆರ್ಸಿಬಿ ಆಟಗಾರರು ಮಾಡಿದ್ದೇನು ನೋಡಿ
RCB qualify for IPL 2022 playoffs: ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ-ಮುಂಬೈ ಅಭಿಮಾನಿಗಳಿಗಿಂತ ಆರ್ಸಿಬಿ ಅಭಿಮಾನಿಗಳೇ ತುಂಬಿ ಹೋಗಿದ್ದರು. ಮುಂಬೈ ಗೆದ್ದ ತಕ್ಷಣ ಬೆಂಗಳೂರು ಫ್ಯಾನ್ಸ್ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿದರು. ಅತ್ತ ಆರ್ಸಿಬಿ ಆಟಗಾರರು ಏನು ಮಾಡಿದರು?.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರಣ ರೋಚಕ ಕದನದಲ್ಲಿ ಮುಂಬೈ ಇಂಡಿಯನ್ಸ್ (MI vs DC) ತಂಡ 5 ವಿಕೆಟ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ ರಿಷಭ್ ಪಂತ್ ಪಡೆ ಟೂರ್ನಿಯಿಂದ ಹೊರಬಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ಕ್ವಾಲಿಫೈ ಆಗಿದೆ. ಈ ಪಂದ್ಯ ಕೇವಲ ಒಂದು ತಂಡಕ್ಕಲ್ಲ ಮೂರು ತಂಡಕ್ಕೆ ಬಹಳ ಮುಖ್ಯವಾಗಿತ್ತು. ಪ್ಲೇ ಆಫ್ ಸುತ್ತು ಪ್ರವೇಶಿಸಬೇಕಾದರೆ ಡೆಲ್ಲಿ ಇಲ್ಲಿ ಗೆಲ್ಲಲೇ ಬೇಕಿತ್ತು. ಮುಂಬೈ ಕೊನೆಯ ಲೀಗ್ ಪಂದ್ಯದಲ್ಲಾದರೂ ಗೆಲುವು ಸಾಧಿಸಬೇಕೆಂದು ಪಣ ತೊಟ್ಟಿತ್ತು. ಅತ್ತ ಆರ್ಸಿಬಿ ಪ್ಲೇ ಆಫ್ (Playoffs) ಪ್ರವೇಶಿಸಬೇಕಾದರೆ ಡೆಲ್ಲಿ ಸೋಲಬೇಕಿತ್ತು. ಮುಂಬೈ ಗೆಲ್ಲಬೇಕಿತ್ತು. ಇದಕ್ಕಾಗಿಯೇ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ-ಮುಂಬೈ ಅಭಿಮಾನಿಗಳಿಗಿಂತ ಆರ್ಸಿಬಿ ಅಭಿಮಾನಿಗಳೇ ತುಂಬಿ ಹೋಗಿದ್ದರು. ಮುಂಬೈ ಗೆದ್ದ ತಕ್ಷಣ ಬೆಂಗಳೂರು ಫ್ಯಾನ್ಸ್ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿದರು. ಅತ್ತ ಆರ್ಸಿಬಿ ಆಟಗಾರರು ಏನು ಮಾಡಿದರು?.
ವಾಂಖೆಡೆಯಲ್ಲಿ ಶೇ. 80 ರಷ್ಟು ಅಭಿಮಾನಿಗಳು ಆರ್ಸಿಬಿ ಜೆರ್ಸಿ ತೊಟ್ಟು ಮತ್ತು ಮುಂಬೈ ಜೆರ್ಸಿಯೊಂದಿಗೆ ಬಂದಿದ್ದರು. ಸ್ಟೇಡಿಯಂನಲ್ಲಿ ಆರ್ಸಿಬಿ… ಆರ್ಸಿಬಿ… ಎಂಬ ಕೂಗು ಕೇಳಿಸುತ್ತಲೇ ಇತ್ತು. ಅತ್ತ ಕೊನೆಯ ಓವರ್ನಲ್ಲಿ ಮುಂಬೈ ಗೆಲ್ಲುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಇತ್ತ ಬೆಂಗಳೂರು ತಂಡದ ಆಟಗಾರರು ಕೂಡ ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ದೊಡ್ಡ ಪರದೆ ಮೇಲೆ ಮ್ಯಾಚ್ ನೋಡುತ್ತಿದ್ದರು. ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುತ್ತಿದ್ದಂತೆ ಎಲ್ಲ ಆರ್ಸಿಬಿ ಪ್ಲೇಯರ್ಸ್ ಕುಳಿತಲ್ಲಿಂದ ಎದ್ದು ಕುಣಿದು ಕುಪ್ಪಳಿಸಿದ್ದಾರೆ. ಆರ್ಸಿಬಿ ಟ್ವಿಟರ್ ಈ ಫೋಟೋವನ್ನು ಹಂಚಿಕೊಂಡಿದೆ. ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಕೋಲ್ಕತ್ತಾ ಫ್ಲೈಟ್ ಏರಲಿದ್ದೇವೆ ಎಂಬ ಸಂದೇಶ ನೀಡಿದ್ದಾರೆ.
ABSOLUTE SCENES! ❤️??#PlayBold #WeAreChallengers #IPL2022 #Mission2022 #RCB #ನಮ್ಮRCB #Playoffs #MIvDC pic.twitter.com/GLmIsbE5vQ
— Royal Challengers Bangalore (@RCBTweets) May 21, 2022
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು ಆರಂಭದಲ್ಲಿಯೇ ಕುಸಿಯಿತು. ಎರಡು ರನ್ ಅಂತರದಲ್ಲಿ ಡೇವಿಡ್ ವಾರ್ನರ್ (5) ಮತ್ತು ಮಿಚೆಲ್ ಮಾರ್ಷ್(0) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಪೃಥ್ವಿ ಶಾ (24) ಔಟಾದ ಕಾರಣ ತಂಡ ಶೋಚನೀಯ ಸ್ಥಿತಿಗೆ ಬಿತ್ತು. 50 ರನ್ ತಲುಪಿದಾಗ ತಂಡದ ಸರ್ಫರಾಜ್ ಖಾನ್ (10) ಕೂಡ ಔಟಾದರು. ಪೊವೆಲ್ ಹಾಗೂ ಪಂತ್ ಆರನೇ ವಿಕೆಟಿಗೆ 75 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಪಂತ್ 33 ಎಸೆತ ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 39 ರನ್ ಹೊಡೆದರೆ, ಪೊವೆಲ್ 43 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
IND vs SA: ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಇಂದು ಭಾರತ ತಂಡ ಪ್ರಕಟ: ಈ ಪ್ಲೇಯರ್ಗೆ ಚಾನ್ಸ್ ಖಚಿತ
160 ರನ್ಗಳ ಟಾರ್ಗೆಟ್ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ 2 ರನ್ಗಳಿಸಿದ ನಾಯಕ ರೋಹಿತ್ ಶರ್ಮಾ ವಿಕೆಟ್ ಬೇಗನೆ ಕಳೆದುಕೊಂಡಿತು. ಇಶಾನ್ ಕಿಶನ್ ಮತ್ತು ಡಿವಾಲ್ಡ್ ಬ್ರೆವಿಸ್ ಇನ್ನಿಂಗ್ಸ್ಗೆ ಚೇತರಿಕೆ ಕೊಟ್ಟರು. ಕಿಶನ್ 35 ಎಸೆತಗಳಲ್ಲಿ 3 ಫೋರ್ ಮತ್ತು 4 ಸಿಕ್ಸರ್ ನೆರವಿನಿಂದ 48 ರನ್ಗಳಿಸಿ ಔಟಾದರು. ಬ್ರೆವಿಸ್ 37 ರನ್ ಗಳಿಸಿ ಮಿಂಚಿದರು. ಟಿಮ್ ಡೇವಿಡ್ ಆರಂಭದಲ್ಲಿ ಸಿಕ್ಕಿದ ಜೀವದಾನದ ಲಾಭ ಪಡೆದು ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ತಿಲಕ್ ವರ್ಮಾ ಕೂಡ 21 ರನ್ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು. ಹೀಗೆ ಮುಂಬೈ 19.1 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಜಯ ಕಂಡಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Sun, 22 May 22