ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (MI vs DC) ಸೋತ ಪರಿಣಾಮ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಟಿಮ್ ಡೇವಿಡ್ (Tim David) ಸ್ಫೋಟಕ ಬ್ಯಾಟಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ರಿಷಭ್ ಪಂತ್ ಪಡೆ ಸೋಲುಂಡಿತು. ಡೆಲ್ಲಿ ಸೋಲಲು ಪ್ರಮುಖ ಕಾರಣ ಅವರೇ ಮಾಡಿಕೊಂಡ ಎಡವಟ್ಟು. ಫೀಲ್ಡಿಂಗ್ನಲ್ಲಿ ಕೆಲವು ಪ್ರಮುಖ ಕ್ಯಾಚ್ಗಳನ್ನು ಕೈಚೆಲ್ಲಿದರು. ಸ್ವತಃ ನಾಯಕನೇ ಒಂದು ಕ್ಯಾಚ್ ಬಿಡುವುದರ ಜೊತೆಗೆ ಟಿಮ್ ಡೇವಿಡ್ ಔಟಾಗಿದ್ದರೂ ಡಿಆರ್‌ಎಸ್ ತೆಗೆದುಕೊಳ್ಳದೆ ಮತ್ತೊಂದು ಎಡವಟ್ಟು ಮಾಡಿಕೊಂಡರು. ಪಂತ್ ಅವರ ಈ ನಿರ್ಧಾರದ ಬಗ್ಗೆ ಹಾಗೂ ಅವರ ನಾಯಕತ್ವದ ಬಗ್ಗೆ ಇದೀಗ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ರಿಷಭ್ ಪಂತ್ (Rishabh Pant) ಡಿಆರ್‌ಎಸ್ ಯಾಕೆ ತೆಗೆದುಕೊಳ್ಳಲಿಲ್ಲ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಮುಂಬೈ ಗೆಲ್ಲಲು ಪ್ರಮುಖ ಕಾರಣವೇ ಟಿಮ್ ಡೇವಿಡ್. ಕೇವಲ 11 ಎಸೆಗಳಲ್ಲಿ 2 ಫೋರ್ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿ ಡೇವಿಡ್ 34 ರನ್ ಚಚ್ಚಿ ಮುಂಬೈಗೆ ಗೆಲುವು ಹತ್ತಿರ ಮಾಡಿ ನಿರ್ಗಮಿಸಿದರು. ಆದರೆ, ಇದಕ್ಕೂ ಮುನ್ನ ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಕಾಟ್ ಬಿಹೈಂಡ್ ಆಗಿದ್ದರು. ಅದರಂತೆ ಬೌಲರ್ ಶಾರ್ದುಲ್ ಠಾಕೂರ್ ಮನವಿ ಸಲ್ಲಿಸಿದ್ದರು. ಆದರೆ ಅಂಪೈರ್ ನಾಟೌಟ್ ಕೊಟ್ಟಿದ್ದರು. ಈ ವೇಳೆ ರಿಷಭ್ ಪಂತ್ ಡಿಆರ್‌ಎಸ್ ರಿವ್ಯೂವ್ ಪಡೆಯಬಹುದಿತ್ತು. ಆದರೆ, ಪಡೆದಿರಲಿಲ್ಲ. ನಂತರ ವಿಡಿಯೋ ರೀಪ್ಲೇನಲ್ಲಿ ಬ್ಯಾಟ್‌ಗೆ ಚೆಂಡು ತಗುಲಿರುವುದು ಸ್ಪಷ್ಟವಾಗಿತ್ತು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು.
ಈ ಬಗ್ಗೆ ಮಾತನಾಡಿದ ಪಂತ್, “ಅಲ್ಲಿ ಏನೋ ಆಯಿತು ಎಂದುಕೊಂಡೆ. ಆದರೆ, ಸರ್ಕಲ್‌ನಲ್ಲಿ ನಿಂತಿದ್ದವರೆಲ್ಲರಿಗೂ ಮನವರಿಕೆಯಾಗಲಿಲ್ಲ. ಆದರೂ ನಾವು ಡಿಆರ್‌ಎಸ್ ತೆಗೆದುಕೊಳ್ಳೋಣವೇ ಎಂದು ಚರ್ಚೆ ನಡೆಸಿದೆವು. ಕೊನೆಯಲ್ಲಿ, ನಾವು ರಿವ್ಯೂ ತೆಗೆದುಕೊಳ್ಳಲಿಲ್ಲ,” ಎಂದು ಹೇಳಿದ್ದಾರೆ. ಪಂತ್ ಡಿಆರ್‌ಎಸ್ ತೆಗೆದುಕೊಳ್ಳದ ಸಂದರ್ಭ ಡಗೌಟ್ನಲ್ಲಿ ಕೂತಿದ್ದ ಕೋಚ್ ರಿಕಿ ಪಾಂಟಿಂಗ್ ಕೂಡ ಗರಂ ಆಗಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯಿತು.
Tim David: ಪಂದ್ಯ ಆರಂಭಕ್ಕೂ ಮುನ್ನ ಟಿಮ್ ಡೇವಿಡ್ಗೆ ಡುಪ್ಲೆಸಿಸ್ರಿಂದ ಮೆಸೇಜ್: ಏನಿತ್ತು ಅದರಲ್ಲಿ ಗೊತ್ತೇ?
ಮಾತು ಮುಂದುವರೆಸಿದ ಪಂತ್, “ಹೆಚ್ಚಿನ ಆಟದಲ್ಲಿ ನಾವು ಅಗ್ರಸ್ಥಾನದಲ್ಲಿದ್ದೆವು. ಆದರೆ, ಕೆಲವು ಸಂದರ್ಭಗಳಲ್ಲಿ ನಾವು ಮೇಲಿರುವಾಗ ಆಟವನ್ನು ನಮ್ಮ ಹಿಡಿತದಿಂದ ಕೈಬಿಡಲು ಬಿಡುತ್ತೇವೆ. ನಾವು ಈ ಸೀಸನ್ನಲ್ಲಿ ಅದೇ ತಪ್ಪನ್ನು ಮಾಡಿದೆವು. ನಾವು ಈ ಪಂದ್ಯವನ್ನು ಗೆಲ್ಲುವಷ್ಟು ಉತ್ತಮವಾಗಿಲ್ಲ ಎಂದು ಭಾವಿಸುತ್ತೇನೆ. ಹಾಗಂತ ಇದು ಒತ್ತಡದ ಬಗ್ಗೆ ಅಲ್ಲ. ನಾವು ನಮ್ಮ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಬೇಕಿತ್ತು. ಈ ಎಲ್ಲ ತಪ್ಪುಗಳನ್ನು ಸರಿಪಡಿಸಿ ಮುಂದಿನ ವರ್ಷ ಇನ್ನಷ್ಟು ಬಲಿಷ್ಠವಾಗಿ ಕಮ್ಬ್ಯಾಕ್ ಮಾಡುತ್ತೇವೆ. ಬ್ಯಾಟಿಂಗ್ ಕಡೆಯಿಂದ 5-7 ರನ್ಗಳನ್ನು ಕಡಿಮೆ ಹೊಡೆದೆವು. ಆದರೆ, ನಮ್ಮ ಬೌಲಿಂಗ್ ಅದ್ಭುತವಾಗಿತ್ತು. ಇಡೀ ಟೂರ್ನಮೆಂಟ್ನಲ್ಲಿ ಕೂಡ. ಡ್ಯೂ ಬಂದ ಪರಿಣಾಮ ಬೌಲಿಂಗ್ನಲ್ಲಿ ಮಾಡಿದ್ದ ಪ್ಲಾನ್ ಸರಿಯಾಗಿ ವರ್ಕ್ ಆಗಲಿಲ್ಲ,” ಎಂದು ಹೇಳಿದ್ದಾರೆ.
ಪ್ಲೇ ಆಫ್ಗೆ ಆರ್ಸಿಬಿ:
ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುತ್ತಿದ್ದಂತೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಪ್ಲೇ ಆಫ್ಗೆ ಲಗ್ಗೆಯಿಟ್ಟಿತು. ಈ ಪಂದ್ಯದಲ್ಲಿ ಡೆಲ್ಲಿಯನ್ನು 20 ಓವರ್‌ಗಳಲ್ಲಿ 159/7ಕ್ಕೆ ಮುಂಬೈ ನಿರ್ಬಂಧಿಸಿತು. ರೋವ್‌ಮನ್ ಪೊವೆಲ್ ಅವರು 43 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಗರಿಷ್ಠ ಸ್ಕೋರ್ ಮಾಡಿದರು. ನಂತರ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅವರ 48 ಮತ್ತು ಟಿಮ್ ಡೇವಿಡ್ ಅವರ ಅದ್ಭುತ 11 ಎಸೆತಗಳಲ್ಲಿ 34 ರನ್ ಚಚ್ಚಿದ ಪರಿಣಾಮ ಕೊನೆಯ ಓವರ್ನಲ್ಲಿ ರೋಚಕ ಗೆಲುವು ಕಂಡಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.