ನ್ಯೂಝಿಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಟಿಮ್ ಸೌಥಿ ಕೆಳಗಿಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲನುಭವಿಸಿದ್ದ ಬೆನ್ನಲ್ಲೇ ಸೌಥಿ ನಾಯಕತ್ವವನ್ನು ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ತಂಡದ ನೂತನ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲ್ಯಾಥಮ್ ಆಯ್ಕೆಯಾಗಿದ್ದಾರೆ.
ಅದರಂತೆ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನ್ಯೂಝಿಲೆಂಡ್ ತಂಡವನ್ನು ಟಾಮ್ ಲ್ಯಾಥಮ್ ಮುನ್ನಡೆಸಲಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ನಾಯಕರಾಗಿ ಟಿಮ್ ಸೌಥಿ ಕಾಣಿಸಿಕೊಂಡಿದ್ದರು. ಆದರೆ ಎರಡು ಪಂದ್ಯಗಳ ಈ ಸರಣಿಯಲ್ಲಿ ಕಿವೀಸ್ ಪಡೆ ಹೀನಾಯ ಪ್ರದರ್ಶನ ನೀಡಿತ್ತು. ಅಲ್ಲದೆ 2-0 ಅಂತರದಿಂದ ಸರಣಿ ಸೋತ ಬೆನ್ನಲ್ಲೇ ಸೌಥಿ ನಾಯಕತ್ವವನ್ನು ತ್ಯಜಿಸಿದ್ದಾರೆ.
ಇದೀಗ ತಂಡದ ಹೊಸ ನಾಯಕನಾಗಿ ಟಾಮ್ ಲ್ಯಾಥಮ್ ಆಯ್ಕೆಯಾಗಿದ್ದು, ಅಕ್ಟೋಬರ್ 16 ರಿಂದ ಶುರುವಾಗಲಿರುವ ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಕಿವೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಎರಡನೇ ಪಂದ್ಯ ಅಕ್ಟೋಬರ್ 24 ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕೆ ಪುಣೆಯ ಎಂಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ನವೆಂಬರ್ 9 ರಿಂದ ಶುರುವಾಗಲಿರುವ ಮೂರನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿದೆ.
ಇದನ್ನೂ ಓದಿ: ಜೈ ಹೋ ಜೈಸ್ವಾಲ್… 92 ವರ್ಷಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಯಶಸ್ವಿ
ಪ್ರಸ್ತುತ ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ಕೇನ್ ವಿಲಿಯಮ್ಸನ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲಿಯಂ ಓ’ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್, ವಿಲ್ ಯಂಗ್, ಟಿಮ್ ಸೌಥಿ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಬುಧವಾರ, 16 ಅಕ್ಟೋಬರ್ 2024 | 9:30 AM | ಬೆಂಗಳೂರು |
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಗುರುವಾರ, 24 ಅಕ್ಟೋಬರ್ 2024 | 9:30 AM | ಪುಣೆ |
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಶುಕ್ರವಾರ, 1 ನವೆಂಬರ್ 2024 | 9:30 AM | ಮುಂಬೈ |
Published On - 12:20 pm, Wed, 2 October 24