
ಉದಯಪುರದ ಮೀರಜ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ಇಂದು ಶ್ರೀಲಂಕನ್ ಲಯನ್ಸ್ ಹಾಗೂ ಅಫ್ಘಾನಿಸ್ತಾನ ಪಠಾಣ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕನ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿತು. ತಂಡ ಇಷ್ಟೊಂದು ಬೃಹತ್ ಮೊತ್ತ ಕಲೆಹಾಕುವಲ್ಲಿ ಆಲ್‌ರೌಂಡರ್ ತಿಸಾರ ಪೆರೆರಾ ಪ್ರಮುಖ ಪಾತ್ರವಹಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪೆರೆರಾ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 36 ಎಸೆತಗಳಲ್ಲೇ ಶತಕ ಸಿಡಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ತಿಲಕರತ್ನೆ ದಿಲ್ಶನ್ ಕೇವಲ 8 ರನ್ ಗಳಿಸಿ ಔಟಾದರು. ಆದರೆ ಇದಾದ ನಂತರ, ಮಾವನ್ ಫೆರ್ನಾಂಡೊ ಔಟಾಗದೆ 81 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಆ ಬಳಿಕ ಬಂದ ಪೆರೆರಾ ಪಂದ್ಯದ ಗತಿಯನ್ನೇ ಬದಲಿಸಿದರು. ವಾಸ್ತವವಾಗಿ ಶ್ರೀಲಂಕಾದ ಮಾಜಿ ಸ್ಫೋಟಕ ಆಲ್‌ರೌಂಡರ್ ತಿಸಾರ ಪೆರೆರಾ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಕೆಲವು ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದರಲ್ಲಿ 2014 ರ ಟಿ20 ವಿಶ್ವಕಪ್‌ನ ಫೈನಲ್ ವಿಶೇಷವಾಗಿತ್ತು.
ಆದರೆ 4 ವರ್ಷಗಳ ಹಿಂದೆ ಅಂದರೆ 2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ತಿಸಾರ, ಇದೀಗ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ರನ್‌ಗಳ ಸುನಾಮಿ ಎಬ್ಬಿಸಿದರು. ಅದರಲ್ಲೂ ಇನ್ನಿಂಗ್ಸ್‌ನ 20 ನೇ ಓವರ್‌ನಲ್ಲಿ ಅಯಾನ್ ಖಾನ್ ಅವರ ಪ್ರತಿಯೊಂದು ಎಸೆತಕ್ಕೂ ಸಿಕ್ಸರ್ ಬಾರಿಸುವ ಮೂಲಕ ಪೆರೆರಾ ಸಂಚಲನ ಸೃಷ್ಟಿಸಿದರು. ಅಂದರೆ ಅವರು 20ನೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಈ ಪಂದ್ಯಾವಳಿಯ ಇತಿಹಾಸದಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಓವರ್‌ನಲ್ಲಿ 6 ಸಿಕ್ಸರ್ಗಳಲ್ಲದೆ 3 ವೈಡ್ ಕೂಡ ಬಂದವು. ಹೀಗಾಗಿ ಶ್ರೀಲಂಕಾ ಆ ಓವರ್‌ನಲ್ಲಿ 39 ರನ್ ಗಳಿಸಿತು.
ಕೊನೆಯ ಓವರ್ಲ್ಲಿ 6 ಸಿಕ್ಸರ್‌ಗಳನ್ನು ಹೊಡೆದ ಪೆರೆರಾ ತಮ್ಮ ಶತಕವನ್ನೂ ಪೂರ್ಣಗೊಳಿಸಿದರು. ಇನ್ನಿಂಗ್ಸ್‌ನ ಕೊನೆಯ ಓವರ್‌ಗೆ ಮುನ್ನ, ತಿಸಾರ ಕೇವಲ 30 ಎಸೆತಗಳಲ್ಲಿ 7 ಸಿಕ್ಸರ್‌ಗಳೊಂದಿಗೆ 72 ರನ್ ಗಳಿಸಿದ್ದರು. ನಂತರ ಮುಂದಿನ 5 ಸಿಕ್ಸರ್‌ಗಳ ಸಹಾಯದಿಂದ, ಕೇವಲ 35 ಎಸೆತಗಳಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಕೊನೆಯ ಎಸೆತದಲ್ಲಿ ಒಂದು ಸಿಕ್ಸರ್ ಬಾರಿಸಿ ಅಜೇಯರಾಗುಳಿದ ಪೆರೆರಾ, ಕೇವಲ 36 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ 108 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ