AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2025 Final: ಸತತ ಮೂರನೇ ಬಾರಿಯೂ ಎಡವಿದ ಡೆಲ್ಲಿ; ಮುಂಬೈಗೆ ಚಾಂಪಿಯನ್ ಕಿರೀಟ

WPL 2025 Final: ಮುಂಬೈನ ಬ್ರಾಬೋರ್ನ್‌ನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025ರ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಫೈನಲ್‌ನಲ್ಲಿ ಸೋತು ಪ್ರಶಸ್ತಿಯಿಂದ ವಂಚಿತವಾಗಿದೆ.

WPL 2025 Final: ಸತತ ಮೂರನೇ ಬಾರಿಯೂ ಎಡವಿದ ಡೆಲ್ಲಿ; ಮುಂಬೈಗೆ ಚಾಂಪಿಯನ್ ಕಿರೀಟ
Mumbai Indians
ಪೃಥ್ವಿಶಂಕರ
|

Updated on:Mar 16, 2025 | 12:04 AM

Share

ಮುಂಬೈನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​ನ (Women’s Premier League) ಮೂರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು (Mumbai Indians vs Delhi Capitals) ಮುಖಾಮುಖಿಯಾಗಿದ್ದವು. ಉಭಯ ತಂಡಗಳು ಈ ಲೀಗ್​ನಲ್ಲಿ ಫೈನಲ್​ ಪಂದ್ಯ ಆಡುತ್ತಿದ್ದದ್ದು ಇದು ಎರಡನೇ ಭಾರಿ. ಇದಕ್ಕೂ ಮುನ್ನ ಈ ಲೀಗ್​ನ ಮೊದಲ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಮಣಿಸಿದ್ದ ಮುಂಬೈ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಮೂರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ತೀರ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಮೂರನೇ ಬಾರಿಗೆ ಫೈನಲ್​ನಲ್ಲಿ ಸೋತು ಚಾಂಪಿಯನ್ ಪಟ್ಟದಿಂದ ವಂಚಿತವಾಯಿತು.

149 ರನ್ ಕಲೆಹಾಕಿದ ಮುಂಬೈ

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅರ್ಧಶತಕ ಹಾಗೂ ನ್ಯಾಟ್ ಸಿವರ್ ಬ್ರಂಟ್ ಅವರೊಂದಿಗೆ ಅರ್ಧಶತಕದ ಜೊತೆಯಾಟದಿಂದ  ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಆದಾಗ್ಯೂ ಈ ಫೈನಲ್​ ಪಂದ್ಯದಲ್ಲಿ ಈ ಇಬ್ಬರನ್ನು ಬಿಟ್ಟರೆ ಮುಂಬೈ ಬ್ಯಾಟರ್​ಗಳ ಪ್ರದರ್ಶನ ನಿರಾಶಾದಾಯಕವಾಗಿತ್ತು. ನ್ಯಾಟ್ ಸಿವರ್ ಬ್ರಂಟ್ ಮತ್ತು ಹರ್ಮನ್‌ಪ್ರೀತ್ ಕೌರ್ ಹೊರತುಪಡಿಸಿ, ಉಳಿದ ಬ್ಯಾಟರ್​ಗಳಿಗೆ ಡೆಲ್ಲಿ ತಂಡದ ಮಾರಕ ಬೌಲಿಂಗ್ ಮುಂದೆ ಉತ್ತಮ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ
Image
ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಫೈನಲ್​ಗೇರಿದ ಮುಂಬೈ ಇಂಡಿಯನ್ಸ್
Image
ಡೆಲ್ಲಿ ವಿರುದ್ಧ ಗೆದ್ದ ಗುಜರಾತ್; ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆ
Image
ಸೂಪರ್ ಓವರ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಆರ್​ಸಿಬಿ?
Image
ಪ್ಲೇ ಆಫ್​ನತ್ತ ಮುಂಬೈ; ಟೂರ್ನಿಯಿಂದ ಹೊರಬಿದ್ದ ಯುಪಿ

ಹರ್ಮನ್ ಅರ್ಧಶತಕ

ಹೀಗಾಗಿ ತಂಡವು 14 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹೇಲಿ ಮ್ಯಾಥ್ಯೂಸ್ (3) ಮತ್ತು ಯಸ್ತಿಕಾ ಭಾಟಿಯಾ (8) ವಿಕೆಟ್‌ಗಳನ್ನು ಮರಿಜಾನ್ನೆ ಕಪ್ ಪಡೆದರು. ಇದಾದ ನಂತರ, ಬ್ರಂಟ್ ಮತ್ತು ನಾಯಕಿ ಕೌರ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರಿಬ್ಬರ ನಡುವೆ 62 ಎಸೆತಗಳಲ್ಲಿ 89 ರನ್‌ಗಳ ಪಾಲುದಾರಿಕೆ ಇತ್ತು. ಈ ವೇಳೆ ನ್ಯಾಟ್ ಸಿವರ್ ಬ್ರಂಟ್  30 ರನ್ ಗಳಿಸಿ ಔಟಾದರೆ, ಹರ್ಮನ್​ಪ್ರೀತ್ 44 ಎಸೆತಗಳಲ್ಲಿ 66 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇವರಲ್ಲದೆ, ಅಮೇಲಿಯಾ ಕರ್, ಜಿ ಕಮಲಿನಿ 10, ಅಮನ್‌ಜೋತ್ ಕೌರ್ 14* ಮತ್ತು ಸಂಸ್ಕೃತಿ ಗುಪ್ತಾ 8* ರನ್ ಗಳಿಸಿದರೆ, ಸಜೀವನ್ ಸಜ್ನಾಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇತ್ತ ದೆಹಲಿ ಪರ ಮರಿಜ್ನ್ ಕಾಪ್, ಜೆಸ್ ಜೊನಾಸನ್ ಮತ್ತು ಶ್ರೀ ಚರಣಿ ತಲಾ ಎರಡು ವಿಕೆಟ್ ಪಡೆದರೆ, ಅನ್ನಾಬೆಲ್ ಸದರ್ಲ್ಯಾಂಡ್ ಒಂದು ವಿಕೆಟ್ ಪಡೆದರು.

ಡೆಲ್ಲಿಗೆ ಆರಂಭಿಕ ಆಘಾತ

ಮುಂಬೈ ನೀಡಿದ 150 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಮ್ಮೆ ಫೈನಲ್​ ನರ್ವಸ್​ಗೆ ಬಲಿಯಾಯಿತು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಡೆಲ್ಲಿಗೆ 150 ರನ್ ಹೊಡೆಯಲು ಸಾಧ್ಯವಾಗಲಿಲ್ಲ. ಆರಂಭದಲ್ಲೇ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡ ತಂಡ ಕೇವಲ 44 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕಿ ಮೆಗ್ ಲ್ಯಾನಿಂಗ್ 13 ರನ್ ಗಳಿಸಿ ಔಟಾದರೆ, ಶೆಫಾಲಿ ವರ್ಮಾ ಕೇವಲ ನಾಲ್ಕು ರನ್ ಗಳಿಸಿ ಔಟಾದರು. ಇದಾದ ನಂತರ, ಜೆಸ್ ಜೊನಾಸನ್ ಕೂಡ ಕೇವಲ 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಇದನ್ನೂ ಓದಿ: WPL 2025: ಮುಂಬೈ- ಡೆಲ್ಲಿ ನಡುವೆ ಡಬ್ಲ್ಯುಪಿಎಲ್ ಫೈನಲ್; ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

ಕಾಪ್- ನಿಕ್ಕಿ ಹೋರಾಟ ವ್ಯರ್ಥ

ದೆಹಲಿ ಪರ ಮರಿಜೆನ್ ಕಾಪ್ 40 ರನ್ ಗಳಿಸಿ ಅತ್ಯಧಿಕ ಇನ್ನಿಂಗ್ಸ್ ಆಡಿದರಾದರೂ ಅವರಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅವರಲ್ಲದೆ, ಜೆಮಿಮಾ ರೊಡ್ರಿಗಸ್ 30 ರನ್ ಬಾರಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಕೈಚೆಲ್ಲಿದರು. ಎಂದಿನಂತೆ ಕೈಕೊಟ್ಟ ಮಧ್ಯಮ ಕ್ರಮಾಂಕ ತಂಡವನ್ನ ಸಂಕಷ್ಟಕ್ಕೆ ಸಿಲುಕಿಸಿತು. ಆದರೆ ಕೊನೆಯಲ್ಲಿ ಕನ್ನಡತಿ ನಿಕ್ಕಿ ಪ್ರಸಾದ್ 25 ರನ್ ಬಾರಿಸಿ ಹೋರಾಟ ಕೊಟ್ಟರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇತ್ತ ಮುಂಬೈ ಪರ ನ್ಯಾಟ್ ಸಿವರ್ ಬ್ರಂಟ್ ಮೂರು ವಿಕೆಟ್ ಪಡೆದರೆ, ಅಮೇಲಿಯಾ ಕಾರ್ ಎರಡು ವಿಕೆಟ್ ಪಡೆದರು. ಉಳಿದಂತೆ, ಶಬ್ನಮ್ ಇಸ್ಮಾಯಿಲ್, ಹೇಲಿ ಮ್ಯಾಥ್ಯೂಸ್ ಮತ್ತು ಸೈಕಾ ಇಶಾಕ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 pm, Sat, 15 March 25