ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್ ಮುಡಿಗೆ 12ನೇ ಟ್ರೋಫಿ
MUMBAI INDIANS: ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಐಪಿಎಲ್, ಡಬ್ಲ್ಯೂಪಿಎಲ್, ಎಸ್ಎ20, ಐಎಲ್ಟಿ20, ಎಂಎಲ್ಸಿ ಹಾಗೂ ಸಿಎಲ್ಟಿ20 ಲೀಗ್ಗಳಲ್ಲಿ ತಂಡಗಳನ್ನು ಕಣಕ್ಕಿಳಿಸಿದೆ. ಈ ಆರು ಲೀಗ್ಗಳ ಮೂಲಕ ಮುಂಬೈ ಇಂಡಿಯನ್ಸ್ ಮುಡಿಗೇರಿಸಿಕೊಂಡಿರುವುದು ಬರೋಬ್ಬರಿ 11 ಟ್ರೋಫಿಗಳನ್ನು. ಈ ಮೂಲಕ ಟಿ20 ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ.
Updated on: Mar 16, 2025 | 7:23 AM

ಟಿ20 ಕ್ರಿಕೆಟ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿ ಎಂದರೆ ಅದು ಮುಂಬೈ ಇಂಡಿಯನ್ಸ್. ಏಕೆಂದರೆ ಈ ಫ್ರಾಂಚೈಸಿ ಕಣಕ್ಕಿಳಿದ ಪ್ರತಿಯೊಂದು ಲೀಗ್ನಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ವಿಶ್ವದ ಪ್ರಮುಖ ಲೀಗ್ಗಳಲ್ಲಿ ಟ್ರೋಫಿ ಗೆದ್ದ ವಿಶ್ವದ ಏಕೈಕ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.

2008 ರಿಂದ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ ಚೊಚ್ಚಲ ಟ್ರೋಫಿ ಗೆದ್ದಿರುವುದು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ. 2011 ರಲ್ಲಿ ನಡೆದ ಈ ಟೂರ್ನಿಯಲ್ಲಿ ಮುಂಬೈ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ 2013 ರಲ್ಲೂ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಇನ್ನು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಟ್ರೋಫಿ ಗೆದ್ದಿದ್ದು 2013 ರಲ್ಲಿ. ಆ ಬಳಿಕ 2015, 2017, 2019 ಮತ್ತು 2020 ರಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದೆನಿಸಿಕೊಂಡಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. 2023 ರಲ್ಲಿ ನಡೆದ ಈ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ವನಿತಾ ಪಡೆ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದೆ.

ಇನ್ನು ಅಮೆರಿಕದಲ್ಲಿ ನಡೆಯುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆತನದ ಎಂಐ ನ್ಯೂಯಾರ್ಕ್ ತಂಡ ಕಣಕ್ಕಿಳಿಯುತ್ತಿದೆ. ಈ ತಂಡವು 2023 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಟ್ರೋಫಿ ಸಂಖ್ಯೆಯನ್ನು ಒಂಭತ್ತೇಕೆರಿಸಿತು.

ಯುಎಇನಲ್ಲಿ ನಡೆಯುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ಹೆಸರಿನ ತಂಡವನ್ನು ಕಣಕ್ಕಿಳಿಸುತ್ತಿದೆ. ಈ ತಂಡವು 2024 ರಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಸೌತ್ ಆಫ್ರಿಕಾ ಟಿ20 ಲೀಗ್ನಲ್ಲೂ ಮುಂಬೈ ಇಂಡಿಯನ್ಸ್ ಟ್ರೋಫಿ ಖಾತೆಯನ್ನು ತೆರೆದಿದೆ. ಈ ಬಾರಿಯ ಎಸ್ಎ20 ಲೀಗ್ನ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮಣಿಸಿ ಎಂಐ ಕೇಪ್ಟೌನ್ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2025) ಮೂರನೇ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ವಿಶ್ವದ 6 ಲೀಗ್ಗಳಲ್ಲಿ ಒಟ್ಟು 12 ಟ್ರೋಫಿ ಗೆದ್ದು ಮುಂಬೈ ಇಂಡಿಯನ್ಸ್ ಹೊಸ ಇತಿಹಾಸ ನಿರ್ಮಿಸಿದೆ.
























