WPL 2025: ಯುಪಿ ವಿರುದ್ಧ ಗೆದ್ದರಷ್ಟೇ ಆರ್ಸಿಬಿಗೆ ಉಳಿಗಾಲ; ಸೋತರೆ ಟೂರ್ನಿಯಿಂದ ಔಟ್
WPL 2025:ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ಮಹಿಳಾ ತಂಡವು ಇದೀಗ ಟೂರ್ನಿಯಲ್ಲಿ ಉಳಿಯಬೇಕೆಂದರೆ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಸತತ ನಾಲ್ಕು ಸೋಲುಗಳ ನಂತರ ಆರ್‌ಸಿಬಿ ಟೂರ್ನಿಯಿಂದ ಹೊರಬೀಳುವ ಅಪಾಯದಲ್ಲಿದೆ. ಇದೀಗ ಉಳಿದ ಎರಡು ಪಂದ್ಯಗಳನ್ನು ಗೆಲ್ಲುವುದು ಸ್ಮೃತಿ ಪಡೆಗೆ ಅತ್ಯಂತ ಮುಖ್ಯವಾಗಿದೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯವು ಅವರಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಅವಕಾಶವಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL 2025) ಮೊದಲೆರಡು ಪಂದ್ಯಗಳನ್ನು ಗೆದ್ದು ಈ ಬಾರಿಯೂ ಚಾಂಪಿಯನ್ ಆಗುವ ಭರವಸೆ ಮೂಡಿಸಿದ್ದ ಆರ್‌ಸಿಬಿ (RCB) ಮಹಿಳಾ ಪಡೆ, ತವರಿಗೆ ಬಂದ ಬಳಿಕ ಸತತ ಸೋಲಿಗೆ ಶರಣಾಗಬೇಕಾಯಿತು. ಬೆಂಗಳೂರಿನಲ್ಲಿ ಆಡಿದ 4 ಪಂದ್ಯಗಳಲ್ಲೂ ಸೋತಿರುವ ಆರ್‌ಸಿಬಿ ಇದೀಗ ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿದೆ. ಟೂರ್ನಿಯಲ್ಲಿ ಇನ್ನು ಜೀವಂತವಾಗಿರಬೇಕೆಂದರೆ ಸ್ಮೃತಿ ಪಡೆ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ಆರ್‌ಸಿಬಿ ಪ್ಲೇಆಫ್ ಕನಸು ಭಗ್ನವಾಗಲಿದೆ. ಹೀಗಾಗಿ ನಾಳೆ ನಡೆಯಲ್ಲಿರುವ ಪಂದ್ಯ ಆರ್‌ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಶನಿವಾರ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ, ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿರುವ ಉತ್ತರ ಪ್ರದೇಶ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಒಂದೆಡೆ ಆರ್ಸಿಬಿಗೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದರೆ, ಇನ್ನೊಂದೆಡೆ ಯುಪಿ ತಂಡ ಆರ್‌ಸಿಬಿ ವಿರುದ್ಧ ಜಯಗಳಿಸುವ ಮೂಲಕ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್‌ಗೆ ವಿದಾಯ ಹೇಳಲು ಬಯಸುತ್ತಿದೆ. ಏಕೆಂದರೆ ಯುಪಿ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕ
ಏಳು ಪಂದ್ಯಗಳಿಂದ ಕೇವಲ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಯುಪಿಗೆ ಇದು ಕೇವಲ ಔಪಚಾರಿಕ ಪಂದ್ಯವಾಗಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಕೂಡ ಆರು ಪಂದ್ಯಗಳಿಂದ ಕೇವಲ ನಾಲ್ಕು ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಉಳಿದೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕು. ಹೀಗಾಗಿ ಸ್ಮೃತಿ ಮಂಧಾನ ಪಡೆ ಅತ್ಯುತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ಮೈದಾನಕ್ಕೆ ಇಳಿಯಲಿದೆ. ಇದರ ಜೊತೆಗೆ ಉಭಯ ತಂಡಗಳ ನಡುವೆ ಈ ಹಿಂದೆ ನಡೆದಿದ್ದ ರಣರೋಚಕ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಆರ್‌ಸಿಬಿ ಸೋತಿತ್ತು. ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ಮೂಲಕ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಸ್ಮೃತಿ ಪಡೆ ಕಣಕ್ಕಿಳಿಯಲಿದೆ.
ಉಭಯ ತಂಡಗಳು
ಯುಪಿ ವಾರಿಯರ್ಸ್: ದೀಪ್ತಿ ಶರ್ಮಾ (ನಾಯಕಿ), ಅಂಜಲಿ ಸರ್ವಾಣಿ, ಉಮಾ ಚೆಟ್ರಿ, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಅರುಷಿ ಗೋಯೆಲ್, ಕ್ರಾಂತಿ ಗೌಡ್, ಗ್ರೇಸ್ ಹ್ಯಾರಿಸ್, ಚಿನೆಲ್ಲೆ ಹೆನ್ರಿ, ಪೂನಂ ಖೇಮ್ನಾರ್, ಅಲಾನಾ ಕಿಂಗ್, ತಹ್ಲಿಯಾ ಮೆಕ್‌ಗ್ರಾತ್, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ಗೌಹರ್ ಸುಲ್ತಾನಾ, ಸೈಮಾ ಠಾಕೋರ್, ದಿನೇಶ್ ವೃಂದಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಕನಿಕಾ ಅಹುಜಾ, ಏಕ್ತಾ ಬಿಶ್ತ್, ಚಾರ್ಲಿ ಡೀನ್, ಕಿಮ್ ಗಾರ್ತ್, ರಿಚಾ ಘೋಷ್, ಹೀದರ್ ಗ್ರಹಾಂ, ವಿಜೆ ಜೋಶಿತಾ, ಸಬ್ಬಿನೇನಿ ಮೇಘನಾ, ನಝತ್ ಪರ್ವೀನ್, ಜಾಗರವಿ ಪವಾರ್, ಎಲ್ಲಿಸ್ ಪೆರ್ರಿ, ರಾಘ್ವಿ ಬಿಸ್ಟ್, ಸ್ನೇಹ ರಾಣಾ, ಪ್ರೇಮಾ ರಾವತ್, ರೇಣುಕಾ ಸಿಂಗ್, ಜಾರ್ಜಿಯಾ ವೇರ್ಹ್ಯಾಮ್, ಡ್ಯಾನಿ ವ್ಯಾಟ್-ಹಾಡ್ಜ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ