WPL 2025: ಡೆಲ್ಲಿ ವಿರುದ್ಧ ಗೆದ್ದ ಗುಜರಾತ್; ಆರ್ಸಿಬಿಗೆ ಅಗ್ನಿಪರೀಕ್ಷೆ
WPL 2025: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಜಯಗಳಿಸಿತು.ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 177 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಗುಜರಾತ್ ಕೊನೆಯ ಓವರ್‌ನಲ್ಲಿ ಗುರಿ ಮುಟ್ಟಿತು. ಈ ಗೆಲುವಿನೊಂದಿಗೆ ಗುಜರಾತ್ ಪ್ಲೇ ಆಫ್‌ಗೆ ಇನ್ನಷ್ಟು ಹತ್ತಿರವಾಯಿತು.

ಮಹಿಳಾ ಪ್ರೀಮಿಯರ್ ಲೀಗ್ (WPL 2025) ಟೂರ್ನಿಯ 17ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಬಹುಮುಖ್ಯವಾಗಿತ್ತು. ಒಂದೆಡೆ ಈ ಪಂದ್ಯವನ್ನು ಗೆದ್ದಿದ್ದರೆ, ಡೆಲ್ಲಿ ನೇರವಾಗಿ ಫೈನಲ್ಗೇರುತ್ತಿತ್ತು. ಇತ್ತ ಗುಜರಾತ್, ಪ್ಲೇಆಫ್ಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಹೀಗಾಗಿ ಉಭಯ ತಂಡಗಳು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದವು. ಹೀಗಾಗಿ ಈ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಕೊನೆಯ ಓವರ್‌ನಲ್ಲಿ ಗೆಲುವಿನ ದಡ ಮುಟ್ಟಿತು.
ಲ್ಯಾನಿಂಗ್- ಶಫಾಲಿ ಸ್ಫೋಟಕ ಬ್ಯಾಟಿಂಗ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಆರಂಭಿಕರಾದ ಮೆಗ್ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 83 ರನ್‌ಗಳ ಜೊತೆಯಾಟ ನೀಡಿದರು. ಶಫಾಲಿ ವರ್ಮಾ 27 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಶಫಾಲಿ ವಿಕೆಟ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ಪತನ ಆರಂಭವಾಯಿತು. ಜೊನಾಸ್ಸೆನ್ ಮತ್ತು ಜೆಮಿಮಾ ರೊಡ್ರಿಗಸ್ ಬೇಗನೇ ಔಟಾದರು. ಅನ್ನಾಬೆಲ್ ಸದರ್ಲ್ಯಾಂಡ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಮತ್ತೊಂದೆಡೆ, ಆರಂಭದಿಂದಲೂ ಆಕ್ರಮಣಕಾರಿ ಆಟ ಮುಂದುವರೆಸಿದ ಮೆಗ್ ಲ್ಯಾನಿಂಗ್ 57 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 92 ರನ್ ಗಳಿಸಿದರು. ಆದರೆ ಅವರು ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ, ಗೆಲುವಿಗೆ 178 ರನ್‌ಗಳ ಗುರಿಯನ್ನು ನೀಡಿತು.
ಹರ್ಲೀನ್ ಆಟಕ್ಕೆ ಒಲಿದ ಜಯ
178 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ದಯಾಲನ್ ಹೇಮಲತಾ ಕೇವಲ 1 ರನ್ ಗಳಿಸಿ ಔಟಾದರು. ಮೊದಲ ವಿಕೆಟ್ ಪತನದ ನಂತರ, ಬೆತ್ ಮೂನಿ ಮತ್ತು ಹರ್ಲೀನ್ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಇಬ್ಬರೂ 85 ರನ್‌ಗಳ ಜೊತೆಯಾಟ ನಡೆಸಿದರು. ಬೆತ್ ಮೂನಿ 44 ರನ್ ಗಳಿಸಿ ಔಟಾದರು. ಅವರ ನಂತರ ಬಂದ ಆಶ್ಲೀ ಗಾರ್ಡ್ನರ್ ಕೂಡ 22 ರನ್ ಗಳಿಸಿ ಔಟಾದರು.
ಸ್ಫೋಟಕ ಬ್ಯಾಟರ್ ಡಿಯಾಂಡ್ರಾ ಡಾಟಿನ್ 10 ಎಸೆತಗಳಲ್ಲಿ 24 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್ಗೆ ತಂದರು. ಆದರೆ ಜೊನಾಸ್ಸೆನ್ ಎಸೆತದಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಡಾಟಿನ್ ಔಟಾದರು. ಆ ನಂತರ ಬಂದ ಫೋಬೆ ಲಿಚ್‌ಫೀಲ್ಡ್ ಖಾತೆ ತೆರೆಯದೆಯೇ ಔಟಾದರು. ಕೊನೆಯಲ್ಲಿ ಹರ್ಲೀನ್ ಹೊಡಿಬಡಿ ಆಟದ ಮೂಲಕ ಗುಜರಾತ್‌ಗೆ ಗೆಲುವು ತಂದುಕೊಟ್ಟರು. ಹರ್ಲೀನ್ 49 ಎಸೆತಗಳಲ್ಲಿ 70 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿತ್ತು.
ಇದನ್ನೂ ಓದಿ: WPL 2025: ಯುಪಿ ವಿರುದ್ಧ ಗೆದ್ದರಷ್ಟೇ ಆರ್ಸಿಬಿಗೆ ಉಳಿಗಾಲ; ಸೋತರೆ ಟೂರ್ನಿಯಿಂದ ಔಟ್
ಆರ್ಸಿಬಿಗೆ ಅಗ್ನಿ ಪರೀಕ್ಷೆ
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಗೆದ್ದಿರುವ ಕಾರಣ, ಈ ಎರಡು ತಂಡಗಳು ಇದೀಗ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನವನ್ನು ಪಡೆದುಕೊಂಡಿವೆ. ಉಳಿದಂತೆ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನದಲ್ಲಿದ್ದರೆ, ಆರ್ಸಿಬಿ ನಾಲ್ಕನೇ ಸ್ಥಾನದಲ್ಲಿದೆ. ಡೆಲ್ಲಿ ಹೊರತುಪಡಿಸಿ ಯಾವ ತಂಡವೂ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿಲ್ಲ. ಇದೀಗ ಉಳಿದಿರುವ ಎರಡು ಪಂದ್ಯಗಳಲ್ಲಿ ಆರ್ಸಿಬಿ ಗೆಲ್ಲಲೇಬೇಕಾಗಿದೆ. ಅದರಲ್ಲೂ ಬೃಹತ್ ಅಂತರದಲ್ಲಿ ಆರ್ಸಿಬಿ ಗೆಲ್ಲಬೇಕಾಗಿದೆ. ಏಕೆಂದರೆ ಆರ್ಸಿಬಿಗೆ ಹೋಲಿಸಿದರೆ, ಮುಂಬೈ ಹಾಗೂ ಗುಜರಾತ್ ತಂಡದ ನೆಟ್ ರನ್ರೇಟ್ ಉತ್ತಮವಾಗಿದೆ. ಹೀಗಾಗಿ ಆರ್ಸಿಬಿ ಎರಡು ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಭಾರಿ ಅಂತರದ ಗೆಲುವನ್ನು ಸಾಧಿಸಬೇಕಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ಆರ್ಸಿಬಿ ಪ್ಲೇ ಆಫ್ ಕನಸು ಭಗ್ನವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 pm, Fri, 7 March 25