IND vs NZ: ಪ್ರಯಾಸದ ಪ್ರಯಾಣ; ಫೈನಲ್ಗೂ ಮುನ್ನ ನೆಪ ಹೇಳಲು ಶುರು ಮಾಡಿದ ನ್ಯೂಜಿಲೆಂಡ್
Champions Trophy 2025: ಭಾರತ ತಂಡ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಓಟ ಮುಂದುವರೆಸಿ ಫೈನಲ್‌ಗೆ ಪ್ರವೇಶಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ, ವಿದೇಶಿ ತಂಡಗಳು ಒಂದೇ ಮೈದಾನದ ಲಾಭ ಪಡೆಯುತ್ತಿದೆ ಎಂದು ಆರೋಪಿಸುತ್ತಿವೆ. ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೀಡ್, ದುಬೈ ಪರಿಸ್ಥಿತಿ ಮತ್ತು ವರುಣ್ ಚಕ್ರವರ್ತಿಯ ಬೌಲಿಂಗ್‌ನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಫೈನಲ್‌ನಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ.

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಅಜೇಯ ಓಟ ಮುಂದುವರೆಸಿರುವ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೆ ತಲುಪಿದೆ. ಇಡೀ ಟೂರ್ನಿಯಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಆದರೆ ರೋಹಿತ್ ಪಡೆಯ ಈ ಯಶಸ್ಸನ್ನು ಸಹಿಸದ ವಿದೇಶಿ ಕ್ರಿಕೆಟಿಗರು, ಟೀಂ ಇಂಡಿಯಾ ಒಂದೇ ಮೈದಾನದ ಲಾಭ ಪಡೆಯುತ್ತಿದೆ ಎಂಬ ಆರೋಪ ಹೊರಿಸುತ್ತಿದ್ದಾರೆ. ಸೆಮಿಫೈನಲ್‌ನಲ್ಲಿ ಸೋತ ನಂತರ ದಕ್ಷಿಣ ಆಫ್ರಿಕಾ ಕೂಡ ಇದೇ ರೀತಿಯ ನೆಪ ಹೇಳಿತು. ಇದೀಗ ನ್ಯೂಜಿಲೆಂಡ್‌ನ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಕೂಡ ಈ ಬಗ್ಗೆ ಮಾತನಾಡಿದ್ದು, ನಮ್ಮ ತಂಡ ಪಾಕಿಸ್ತಾನದಿಂದ ದುಬೈಗೆ ಪ್ರಯಾಣ ಬೆಳೆಸಿ ಆಯಾಸದಲ್ಲಿದೆ. ಇಡೀ ದಿನ ಪ್ರಯಾಣದಲ್ಲೇ ಮುಗಿದು ಹೋಯಿತು. ಆದಾಗ್ಯೂ ಅಭ್ಯಾಸ ಮಾಡಲು ನಮಗೆ ಇನ್ನು ಸಾಕಷ್ಟು ಸಮಯವಿದೆ ಎಂದಿದ್ದಾರೆ.
ಗ್ಯಾರಿ ಸ್ಟೀಡ್ ಹೇಳಿದ್ದೇನು?
ಭಾನುವಾರ ಭಾರತ ವಿರುದ್ಧ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ವರುಣ್ ಚಕ್ರವರ್ತಿ ತಮ್ಮ ತಂಡಕ್ಕೆ ದೊಡ್ಡ ಸವಾಲಾಗಲಿದ್ದಾರೆ ಎಂದು ಗ್ಯಾರಿ ಸ್ಟೀಡ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಮ್ಮ ವಿರುದ್ಧದ ಕೊನೆಯ ಪಂದ್ಯದಲ್ಲಿ ವರುಣ್ 42 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಆದ್ದರಿಂದ, ಅವರು ಈ ಪಂದ್ಯದಲ್ಲೂ ಆಡುತ್ತಾರೆ ಎಂಬ ಸಂಪೂರ್ಣ ಭರವಸೆ ನಮಗಿದೆ. ಅವರು ಒಬ್ಬ ಅದ್ಭುತ ಬೌಲರ್, ಕಳೆದ ಪಂದ್ಯದಲ್ಲಿ ಅವರು ತಮ್ಮ ಕೌಶಲ್ಯವನ್ನು ಅದ್ಭುತವಾಗಿ ತೋರಿಸಿದರು. ಹೀಗಾಗಿ ವರುಣ್ ನಮಗೆ ದೊಡ್ಡ ಬೆದರಿಕೆಯಾಗಿದ್ದಾರೆ. ಆದ್ದರಿಂದ ನಾವು ಅವರನ್ನು ಹೇಗೆ ಎದುರಿಸುವುದು ಮತ್ತು ಅವರ ವಿರುದ್ಧ ರನ್ ಗಳಿಸುವುದು ಹೇಗೆ ಎಂಬುದರ ಮೇಲೆ ಗಮನ ಹರಿಸಬೇಕು ಎಂದಿದ್ದಾರೆ.
ದುಬೈ ಪರಿಸ್ಥಿತಿಗಳ ಬಗ್ಗೆ ಸ್ಟೀಡ್ ಹೇಳಿದ್ದೇನು?
ಇನ್ನು ದುಬೈ ಪರಿಸ್ಥಿತಿಗಳಿಂದ ಭಾರತಕ್ಕೆ ಲಾಭವಾಗುತ್ತದೆ ಎಂಬ ಅಂಶಕ್ಕೆ ಸ್ಟೀಡ್ ಹೆಚ್ಚಿನ ಪ್ರಾಮುಖ್ಯತೆ ನೀಡಲಿಲ್ಲ. ಈ ಬಗ್ಗೆ ಮಾತನಾಡಿದ ಅವರು, ‘ಪಂದ್ಯಾವಳಿಯನ್ನು ನಿಗದಿಪಡಿಸುವುದು ನಮ್ಮ ಕೈಯಲ್ಲಿಲ್ಲ, ಆದ್ದರಿಂದ ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದೆ, ಆದರೆ ನಮಗೆ ಇಲ್ಲಿಯೂ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿದೆ. ಆ ಅನುಭವದಿಂದ ನಾವು ಕಲಿಯಲು ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:‘ರೋಹಿತ್ ಶರ್ಮಾ ಔಟ್’…! ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
ಫೈನಲ್‌ಗೆ ಸಿದ್ಧತೆ ನಡೆಸುವ ಬಗ್ಗೆ ಸ್ಟೀಡ್ ಮಾತು
ಪಂದ್ಯಾವಳಿಯ ಈ ಹಂತವನ್ನು ತಲುಪುವುದು ತುಂಬಾ ರೋಮಾಂಚನಕಾರಿಯಾಗಿದೆ. ಆರಂಭದಲ್ಲಿ ಎಂಟು ತಂಡಗಳಿದ್ದವು, ಈಗ ಕೇವಲ ಎರಡು ತಂಡಗಳು ಮಾತ್ರ ಉಳಿದಿವೆ. ಇದು ಒಂದು ದೊಡ್ಡ ಪಂದ್ಯವಾಗಿದ್ದರೂ ನಾವು ಇದನ್ನು ಸಾಮಾನ್ಯ ಪಂದ್ಯದಂತೆ ತೆಗೆದುಕೊಳ್ಳುತ್ತಿದ್ದೇವೆ. ಭಾನುವಾರ ನಾವು ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಸೋಲಿಸಲು ಸಾಧ್ಯವಾದರೆ, ನನಗೆ ತುಂಬಾ ಸಂತೋಷವಾಗುತ್ತದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ