ಟೀಮ್ ಇಂಡಿಯಾ ವಿರುದ್ಧ ನ್ಯೂಝಿಲೆಂಡ್ ಗೆಲ್ಲಲಿ ಎಂದ ಡೇವಿಡ್ ಮಿಲ್ಲರ್
Champions Trophy 2025: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇದೇ ಭಾನುವಾರ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಝಿಲೆಂಡ್ ತಂಡ ಗೆಲ್ಲಲಿದೆ ಎಂದು ಬಯಸಿದ್ದಾರೆ ಸೌತ್ ಆಫ್ರಿಕಾ ತಂಡದ ಆಟಗಾರ ಡೇವಿಡ್ ಮಿಲ್ಲರ್.

ಚಾಂಪಿಯನ್ಸ್ ಟ್ರೋಫಿಯ ಅಂತಿಮ ಹಂತದ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ (ಮಾ.9) ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಕಿವೀಸ್ ಪಡೆ ಟ್ರೋಫಿ ಎತ್ತಿ ಹಿಡಿಯಲಿ ಎಂದಿದ್ದಾರೆ ಸೌತ್ ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿದೆ. ಅದರಂತೆ ಭಾರತ ತಂಡ ದುಬೈನಲ್ಲಿ ಪಂದ್ಯವಾಡಿದರೆ, ಉಳಿದ ತಂಡಗಳು ಪಾಕಿಸ್ತಾನದಲ್ಲಿ ಬಹುತೇಕ ಮ್ಯಾಚ್ಗಳನ್ನು ಆಡಿತ್ತು. ಆದರೆ ಮೊದಲ ಸೆಮಿಫೈನಲ್ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ದುಬೈಗೆ ಪ್ರಯಾಣ ಬೆಳೆಸಿತ್ತು.
ಏಕೆಂದರೆ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆದ್ದರೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಭಾರತ ಮುಖಾಮುಖಿಯಾಗಬೇಕಿತ್ತು. ಹೀಗಾಗಿ ಪ್ರಯಾಣದ ಸಮಯವನ್ನು ಸರಿದೂಗಿಸಲು ಮೊದಲೇ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡವನ್ನು ದುಬೈಗೆ ಕರೆಸಲಾಗಿತ್ತು.
ಆದರೆ ಮಾರ್ಚ್ 2 ರಂದು ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ತಂಡ ಗೆದ್ದಿದೆ. ಹೀಗಾಗಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು.
ಇತ್ತ ದುಬೈಗೆ ತೆರಳಿದ್ದ ಸೌತ್ ಆಫ್ರಿಕಾ ತಂಡವು ಎರಡನೇ ಸೆಮಿಫೈನಲ್ ಆಡಲು ಮತ್ತೆ ಲಾಹೋರ್ಗೆ ಮರಳಿತ್ತು. ಐಸಿಸಿಯ ಈ ನಡೆಯ ವಿರುದ್ಧ ಅಸಮಾಧಾನ ಹೊರಹಾಕಿರುವ ಡೇವಿಡ್ ಮಿಲ್ಲರ್, ಇದು ಅದರ್ಶವಲ್ಲದ ಪರಿಸ್ಥಿತಿ ಎಂದು ಟೀಕಿಸಿದ್ದಾರೆ.
ಇದು ಕೇವಲ 1 ಗಂಟೆ 40 ನಿಮಿಷಗಳ ಪ್ರಯಾಣ ಎಂದೆನಿಸಬಹುದು. ಆದರೆ ನಾವು ಹಾಗೆ ಮಾಡಬೇಕಾಗಿ ಬಂದಿದ್ದು ಸರಿಯಾದ ಕ್ರಮವಲ್ಲ. ನಾವು ಮುಂಜಾನೆ, ಒಂದು ಪಂದ್ಯದ ನಂತರ ವಿಮಾನದಲ್ಲಿ ಹಾರಬೇಕಾಯಿತು. ನಂತರ ನಾವು ಸಂಜೆ 4 ಗಂಟೆಗೆ ದುಬೈಗೆ ತಲುಪಿದೆವು. ಅಷ್ಟೇ ಅಲ್ಲದೆ ಬೆಳಿಗ್ಗೆ 7.30 ಕ್ಕೆ ನಾವು ಹಿಂತಿರುಗಬೇಕಾಯಿತು.
ಇಂತಹ ಕ್ರಮಗಳು ಒಳ್ಳೆಯದಲ್ಲ. ನಾವು ಐದು ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ್ದೇವೆ. ಇದರಿಂದ ಚೇತರಿಸಿಕೊಳ್ಳಲು ನಮಗೆ ಸಾಕಷ್ಟು ಸಮಯ ಸಿಕ್ಕಿದೆ ಎಂದರ್ಥವಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಸೆಮಿಫೈನಲ್ ಆಡುವಂತಹ ಸೂಕ್ತ ಪರಿಸ್ಥಿತಿಯಲ್ಲಿರಲಿಲ್ಲ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ.
ಇದೇ ವೇಳೆ ಫೈನಲ್ ಪಂದ್ಯದ ಬಗ್ಗೆಯೂ ಮಾತನಾಡಿದ ಡೇವಿಡ್ ಮಿಲ್ಲರ್, ಪ್ರಮಾಣಿಕವಾಗಿ ಹೇಳುತ್ತಿದ್ದೇನೆ. ನಾನಂತು ನ್ಯೂಝಿಲೆಂಡ್ ತಂಡವನ್ನು ಬೆಂಬಲಿಸುತ್ತೇನೆ. ಅವರು ಟ್ರೋಫಿ ಎತ್ತಿ ಹಿಡಿಯಲಿ ಎಂದು ಬಯಸುತ್ತೇನೆ ಎಂದಿದ್ದಾರೆ. ಈ ಮೂಲಕ ನನ್ನ ಸಂಪೂರ್ಣ ಬೆಂಬಲ ಕಿವೀಸ್ ಪಡೆಗೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಡೇವಿಡ್ ಮಿಲ್ಲರ್ ಅವರ ಈ ಬಹಿರಂಗ ಹೇಳಿಕೆಯು ಇದೀಗ ಟೀಮ್ ಇಂಡಿಯಾ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಅದರಲ್ಲೂ ಸೌತ್ ಆಫ್ರಿಕಾ ತಂಡವನ್ನು ದುಬೈ ಕರೆಸಿಕೊಂಡಿರುವ ಐಸಿಸಿ ಕ್ರಮದ ಸಿಟ್ಟನ್ನು ಮಿಲ್ಲರ್ ಟೀಮ್ ಇಂಡಿಯಾ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಶರವೇಗದ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ಮಿಲ್ಲರ್
ಒಟ್ಟಿನಲ್ಲಿ ಡೇವಿಡ್ ಮಿಲ್ಲರ್ ಅವರ ಬಯಕೆಯಂತೆ ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲ್ಲಲಿದೆಯಾ ಅಥವಾ ಟೀಮ್ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಲಿದೆಯಾ ಕಾದು ನೋಡಬೇಕಿದೆ.