WPL 2025: ಗುಜರಾತ್ ಕನಸು ಭಗ್ನ; ಮುಂಬೈ- ಡೆಲ್ಲಿ ನಡುವೆ ಡಬ್ಲ್ಯುಪಿಎಲ್ ಫೈನಲ್
WPL 2025: ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಎರಡನೇ ಭಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ 213 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ 166 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಇಂಡಿಯನ್ಸ್ ಈಗ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಮುಂಬೈನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಫೈನಲ್ಗೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡ ಸ್ಕೋರ್ ಬೋರ್ಡ್ ಒತ್ತಡಕ್ಕೆ ಸಿಲುಕಿ ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕೈಚೆಲ್ಲುವ ಮೂಲಕ 166 ರನ್‌ಗಳಿಗೆ ಆಲೌಟ್ ಆಯಿತು. ಇದೀಗ ಶನಿವಾರ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಎರಡು ಬಾರಿಯ ರನ್ನರ್ ಅಪ್ ಬಲಿಷ್ಠ ಡೆಲ್ಲಿ ತಂಡವನ್ನು ಎದುರಿಸಲಿದೆ.
ಮ್ಯಾಥ್ಯೂಸ್- ಸಿವರ್ ಬ್ರಂಟ್ ಶತಕದ ಜೊತೆಯಾಟ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಹೇಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅವರ ಶತಕದ ಪಾಲುದಾರಿಕೆಯಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 213 ರನ್ ಕಲೆಹಾಕಿತು. ಇದು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ದಾಖಲಾದ ಮೂರನೇ ಅತಿ ಹೆಚ್ಚು ಮೊದಲ ಇನ್ನಿಂಗ್ಸ್ ಸ್ಕೋರ್ ಎಂಬ ದಾಖಲೆಯನ್ನು ಬರೆಯಿತು. ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಎಲಿಮಿನೇಟರ್ ಪಂದ್ಯವನ್ನು ಆಡುತ್ತಿದ್ದ ಗುಜರಾತ್ ತಂಡಕ್ಕೆ ಮುಂಬೈನ ಹೀಲಿ ಮತ್ತು ಬ್ರಂಟ್ ತಲೆನೋವಾಗಿ ಪರಿಣಮಿಸಿದರು. ಇವರಿಬ್ಬರ ನಡುವೆ 133 ರನ್‌ಗಳ ಪಾಲುದಾರಿಕೆ ಇತ್ತು.
ಹರ್ಮನ್‌ಪ್ರೀತ್ ಸಿಡಿಲಬ್ಬರ
ಮುಂಬೈ ತಂಡವು ಐದನೇ ಓವರ್‌ನಲ್ಲಿ 26 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ನಂತರ, ಮ್ಯಾಥ್ಯೂಸ್ ಜೊತೆಯಾದ ಇಂಗ್ಲೆಂಡ್ ಆಲ್‌ರೌಂಡರ್ ಬ್ರಂಟ್ ಮೈದಾನದ ತುಂಬ ಬೌಂಡರಳಿಗಳ ಮಳೆಗರೆದರು. ಇವರಿಬ್ಬರು ಜೊತೆಯಾಗಿ ಸ್ಕೋರ್ ಅನ್ನು 150 ದಾಟಿಸಿದರು. ಈ ವೇಳೆ ಹೀಲಿ 50 ಎಸೆತಗಳಲ್ಲಿ 77 ರನ್ ಗಳಿಸಿದರೆ, ಬ್ರಂಟ್ 41 ಎಸೆತಗಳಲ್ಲಿ 77 ರನ್ ಗಳಿಸಿದರು. ಅವರಲ್ಲದೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಕೊನೆಯಲ್ಲಿ ಸಿಕ್ಸರ್ಗಳ ಮಳೆಗರೆದು ಕೇವಲ 12 ಎಸೆತಗಳಲ್ಲಿ 300 ಸ್ಟ್ರೈಕ್ ರೇಟ್‌ನಲ್ಲಿ 36 ರನ್ ಗಳಿಸಿದರು. ಇತ್ತ ಗುಜರಾತ್ ಪರ ಡೇನಿಯಲ್ ಗಿಬ್ಸನ್ ಎರಡು ವಿಕೆಟ್ ಮತ್ತು ಕಾಶ್ವಿ ಗೌತಮ್ ಒಂದು ವಿಕೆಟ್ ಪಡೆದರು.
ಗುಜರಾತ್ಗೆ ಕೈಕೊಟ್ಟ ಬ್ಯಾಟರ್ಸ್
ಮುಂಬೈ ನೀಡಿದ 213 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಬೆಥ್ ಮೂನಿ 6 ರನ್‌ಗಳಿಗೆ ಸುಸ್ತಾದರೆ, ಹರ್ಲೀನ್ ಡಿಯೋಲ್ ಕೂಡ ಇಲ್ಲದ ರನ್ ಕದಿಯಲು ಹೋಗಿ 8 ರನ್‌ಗಳಿಗೆ ರನೌಟ್ ಆದರು. ನಾಯಕಿ ಆಶ್ಲೀ ಗಾರ್ಡ್ನರ್ ಕೂಡ ನಿರಾಸೆ ಮೂಡಿಸಿ 8 ರನ್‌ಗಳಿಗೆ ಬ್ಯಾಟ್ ಎತ್ತಿಟ್ಟರು. ತಂಡದ ಪರ ಡೇನಿಯಲ್ ಗಿಬ್ಸನ್ 34 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಫೋಬೆ ಲಿಚ್‌ಫೀಲ್ಡ್ 31 ರನ್ ಮತ್ತು ಭಾರ್ತಿ ಫುಲ್ಮಾಲಿ 30 ರನ್‌ಗಳ ಇನ್ನಿಂಗ್ಸ್ ಆಡಿದರು.
ಹೇಲಿ ಮ್ಯಾಥ್ಯೂಸ್ ಮಾರಕ ದಾಳಿ
ಉಳಿದಂತೆ ಮತ್ತ್ಯಾರಿಂದಲೂ 20 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಮುಂಬೈ ಪರ ಬೌಲಿಂಗ್‌ನಲ್ಲಿ ಮಿಂಚಿದ ಹೇಲಿ ಮ್ಯಾಥ್ಯೂಸ್ 3 ವಿಕೆಟ್ ಪಡೆದವರು. ಅಮೆಲಿಯಾ ಕರ್ 2ವಿಕೆಟ್ ಪಡೆದರೆ, ಶಬ್ನಿಮ್ ಇಸ್ಮಾಯಿಲ್ ಮತ್ತು ನ್ಯಾಟ್ ಸಿವರ್ ಬ್ರಾಂಟ್ ತಲಾ 1 ವಿಕೆಟ್ ಪಡೆಯುವ ಮೂಲಕ ಗುಜರಾತ್ ತಂಡವನ್ನು ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 pm, Thu, 13 March 25